ಬೆಂಗಳೂರು: ಐವತ್ತು ಮಂದಿ ಪೊಲೀಸರ ಕೋಟೆ ಭೇದಿಸಿ 15 ಲಕ್ಷ ರೂ. ಹಣವಿದ್ದ ಬ್ಯಾಗ್ ಪಡೆದು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿದ್ದ ಅಪಹರಣಕಾರರನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಕಡೆಗೂ ಬಂಧಿಸಿದ್ದಾರೆ. ಗುಜರಾತ್ ಮೂಲದ ವ್ಯಾಪಾರಿ ಸತೀಶ್ ಬೋಹ್ರಾ (28) ಎಂಬಾತನನ್ನು ಅಪಹರಿಸಿ 15 ಲಕ್ಷ ರೂ. ಪಡೆದ ಆರೋಪ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿ ಆರು ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ.
ಕಾಟನ್‌ಪೇಟೆಯ ಅಕರ್ ಪಾಷಾ (29) ಮತ್ತು ಆತನ ಸ್ನೇಹಿತರಾದ ನಾಸೀರ್ ಪಾಷಾ (29), ವಿಜಯನಗರದ ವಸೀಂಅಕ್ರಂ (30) ಹಾಗೂ ಶಿವಾಜಿನಗರದ ಇಮ್ರಾನ್ ಖಾನ್ (31),ಪಾದರಾಯನಪುರದ ಸೈಯ್ಯದ್ ರೋಷನ್ (30), ಆತನ ಸ್ನೇಹಿತರಾದ ಜೆಜೆನಗರ ಗೋರಿಪಾಳ್ಯದ ಅಫ್ಜಲ್ ಬೇಗ್ (28)ಬಂಧಿತರು.
ಸತೀಶ್ ಬೋಹ್ರಾ ಎರಡು ವರ್ಷಗಳಿಂದ ಸಿಟಿ ಮಾರುಕಟ್ಟೆಯಲ್ಲಿ ಮಳಿಗೆ ಇಟ್ಟುಕೊಂಡು ಸ್ಟೀಲ್ ವ್ಯಾಪಾರ ಮಾಡಿಕೊಂಡಿದ್ದರು. ಈತನ ಬಳಿ ಅಕºರ್ ಪಾಷಾ ಕೆಲಸ ಮಾಡುತ್ತಿದ್ದು, ಪ್ರತಿದಿನ ನಡೆಯುತ್ತಿದ್ದ ಲಕ್ಷಾಂತರ ರೂ.ಗಳ ವಹಿವಾಟು ನೋಡಿದ್ದ. ಮಾಲೀಕ ಸತೀಶ್‌ರನ್ನು ಅಪಹರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದರೆ ಸುಲಭವಾಗಿ ಹಣ ಪಡೆಯಬಹುದು ಎಂದು ಯೋಜನೆ ರೂಪಿಸಿದ ಅಕರ್, ಉಳಿದ ಆರೋಪಿಗಳಿಗೆ ಸಂಚು ತಿಳಿಸಿದ್ದ.
ಅದಕ್ಕೆ ಅವರೂ ಒಪ್ಪಿಕೊಂಡಿದ್ದರು. ಅದರಂತೆ ಜೂ.14ರಂದು ರಾತ್ರಿ 9 ಗಂಟೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೊರಟಿದ್ದ ಸತೀಶ್‌ನನ್ನು ಕಾರಿನಲ್ಲಿ ಅಪಹರಿಸಿ, ಬಿಡದಿ ಬಳಿಯ ನಿರ್ಜನ ಪ್ರದೇಶದಲ್ಲಿ ಬಚ್ಚಿಟ್ಟಿದ್ದರು. ಬಳಿಕ ಆತನ ಕುಟುಂಬಕ್ಕೆ ಫೋನ್ ಮಾಡಿ 15 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು.
ಭದ್ರಕೋಟೆ ಭೇದಿಸಿದರು: ಸತೀಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಚಾಮರಾಜಪೇಟೆ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಅವರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಅಕರ್ ಪಾತ್ರವಿರುವುದು ಧೃಡವಾಗಿತ್ತು. ಅದರಂತೆ ಸತೀಶ್ ತಂದೆ ಮಾಂಗಿಲಾಲ್ ಮೂಲಕ ಆರೋಪಿಗಳಿಗೆ ಕರೆ ಮಾಡಿಸಿ, ಹಣ ನೀಡುವುದಾಗಿ ಹೇಳಿಸಿದ್ದರು.
ಅದರಂತೆ ಜೂನ್ 16ರಂದು ಕಾಟನ್ ಪೇಟೆ, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ ಠಾಣೆಗಳ 50ಕ್ಕೂ ಹೆಚ್ಚು ಸಿಬ್ಬಂದಿ ಆರೋಪಿಗಳಿಗೆ ಹಣ ನೀಡುವಾಗಲೇ ಬಂಧಿಸಬೇಕು ಎಂದು ನಿರ್ಧರಿಸಿದ ಪೊಲೀಸರು, ಮೈಸೂರು ರಸ್ತೆಗೆ ಬರುವಂತೆ ಮಾಂಗಿಲಾಲ್ ಆರೋಪಿಗಳಿಗೆ ಹೇಳಿಸಿದ್ದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಆರೋಪಿಗಳು ಬರುವುದಾಗಿ ತಿಳಿಸಿದ್ದರು.
50ಕ್ಕೂ ಹೆಚ್ಚು ಪೊಲೀಸರು ಆರೋಪಿಗಳು ಬಂದ ತಕ್ಷಣ ಬಂಧಿಸಲು ತಯಾರಿ ನಡೆಸಿದ್ದರು. ಆದರೆ ಬುಲೆಟ್‌ನಲ್ಲಿ ಬಂದ ಅಕರ್ ಮತ್ತು ಸೈಯದ್, ಮಾಂಗಿಲಾಲ್ ಬಳಿ ಇದ್ದ 15 ಲಕ್ಷ ರೂ.ಗಳ ಬ್ಯಾಗ್ ಕಸಿದುಕೊಂಡು ಸತೀಶ್‌ರನ್ನು ಬೈಕ್‌ನಿಂದ ತಳ್ಳಿ ಪರಾರಿಯಾಗಿದ್ದರು. ಪರಾರಿಯಾಗಿದ್ದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಸಿ ಇದೀಗ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.