ಬೆಂಗಳೂರು: ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ತಮಿಳುನಾಡಿನ ಮೂವರು ಕಳ್ಳರು ವಿ.ವಿ.ಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮಿಳುನಾಡಿನ ವೇಲೂರು ಜಿಲ್ಲೆಯ ಮುನೀರ್ ಭಾಷ (20), ಎ.ಮೊಹಮದ್ ಮುಜಾಯಿದ್ (25), ಎ.ಮೋಗನ್ (19) ಬಂಧಿತರು.
ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ ಎಂಟು ರಾಯಲ್ ಎನ್‌ಫೀಲ್ಡ್, ಒಂದು ಯಮಹಾ ಎಫ್‌ಜಡ್, ನಾಲ್ಕು ಬಜಾಜ್ ಪಲ್ಸರ್ ಸೇರಿ 17 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೆ.ಅಣ್ಣಾಮಲೈ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮಿಳುನಾಡಿನಿಂದ ಬಸ್‌ನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಆರು ತಿಂಗಳಿಂದ ನಗರ ಹಾಗೂ ಹೊರ ವಲಯಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು. ಹಗಲು ಹೊತ್ತಿನಲ್ಲಿ ವಿ.ವಿ.ಪುರ ಸೇರಿ ನಗರದ ವಿವಿಧೆಡೆ ಸುತ್ತಾಡಿ ಮನೆ ಮುಂದೆ ನಿಲ್ಲಿಸುತ್ತಿದ್ದ ಬುಲೆಟ್ ಹಾಗೂ ದುಬಾರಿ ಬೈಕ್‌ನ್ನು ಗಮನಿಸುತ್ತಿದ್ದರು. ರಾತ್ರಿ ಹೊತ್ತು ನಕಲಿ ಕೀ ಬಳಸಿ ಅಥವಾ ದ್ವಿಚಕ್ರ ವಾಹನಗಳ ಲಾಕ್ ಮುರಿದು,
ನೇರವಾಗಿ ತಮಿಳುನಾಡಿನ ಅಂಬೂರ್‌ಗೆ ಕೊಂಡೊಯ್ಯುತ್ತಿದ್ದರು. ನಂತರ ಬೈಕ್‌ಗಳ ನಂಬರ್ ಪ್ಲೇಟ್ ಬದಲಿಸಿ ಗ್ರಾಮಾಂತರ ಪ್ರದೇಶದ ಜನರಿಗೆ ಕೇವಲ 10ರಿಂದ 20 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಆರೋಪಿಗಳು, ಕೆಲ ದಿನಗಳ ನಂತರ ದಾಖಲೆಗಳನ್ನು ಕೊಡುವುದಾಗಿ ಹೇಳಿ ಪರಾರಿಯಾಗುತ್ತಿದ್ದರು ಎಂದರು.
ಪ್ರತಿ ಬಾರಿ ಹೊಸ ಸಿಮ್ ಬಳಕೆ: ಆರೋಪಿಗಳು ಪ್ರತಿ ಗ್ರಾಹಕನನ್ನು ಸಂಪರ್ಕಿಸಲು ಹೊಸ-ಹೊಸ ಸಿಮ್‌ಕಾರ್ಡ್‌ಗಳನ್ನು ಬಳಸುತ್ತಿದ್ದರು. ಒಮ್ಮೆ ಬೈಕ್ ಮಾರಾಟ ಮಾಡಿದ ನಂತರ ಗ್ರಾಹಕರ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಳ್ಳುತ್ತಿದ್ದರು. ಅಲ್ಲದೆ, ಬಳಸಿದ ಸಿಮ್‌ಕಾರ್ಡ್ ಎಸೆದು, ಹೊಸ ಸಿಮ್‌ಕಾರ್ಡ್ ಖರೀದಿಸಿ, ಹೊಸ ಗ್ರಾಹಕನಿಗಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ತಮಿಳುನಾಡಿನ ಹಳ್ಳಿಗಳಲ್ಲಿ ಬೇಡಿಕೆ: ಕಳವು ಮಾಡಿದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ತಮಿಳುನಾಡಿನ ಹಳ್ಳಿಗಳಲ್ಲಿ ಭಾರೀ ಬೇಡಿಕೆ ಇದೆ. ಈ ವಿಚಾರ ತಿಳಿದಿದ್ದ ಆರೋಪಿಗಳು, ಕೆಲ ಗ್ರಾಹಕರಿಂದ ಮುಂಗಡ ಹಣ ಪಡೆದು ಬೈಕ್‌ಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.