Advertisement

ಎಟಿಎಂಗೆ ಬರುತ್ತಿದ್ದ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದವನ ಬಂಧನ

11:52 AM Jun 03, 2022 | Team Udayavani |

ಮೈಸೂರು: ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಬರುತ್ತಿದ್ದವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಆರ್‌.ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆ ಹಣದಿಂದ ಆರೋಪಿಯು ಖರೀದಿಸಿದ್ದ 3.8 ಗ್ರಾಂ ಚಿನ್ನ, ಬೈಕ್‌ ಹಾಗೂ 1 ಲಕ್ಷ ರೂ. ಹಣವನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 30ರಂದು ಕೆ.ಆರ್‌.ನಗರದ ಎಟಿಎಂ ಕೇಂದ್ರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಜಿಲ್ಲೆಯ 6 ಕಡೆ ವಂಚನೆ ನಡೆಸಿರುವುದಾಗಿ ಹೇಳಿದ್ದಾನೆ.

25- 30 ವಯಸ್ಸಿನ ಆರೋಪಿಯು ಜಿಲ್ಲೆಯ ನಿವಾಸಿಯಾಗಿದ್ದು, ಕಟ್ಟಡ ಕಾರ್ಮಿಕನೆಂದು ತಿಳಿಸಿದ್ದಾನೆ. ಕೃತ್ಯಕ್ಕೆ ಬಳಸಿದ್ದ 7 ಎಟಿಎಂ ಕಾರ್ಡ್‌ಗಳನ್ನು ಆತನಿಂದ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಡಿಜಿಟಲ್‌ ತಿಳಿವಳಿಕೆ ಇಲ್ಲದ ವಯೋವೃದ್ಧರು, ಮಹಿಳೆಯರಿಗೆ ಸಹಾಯ ಮಾಡುವುದಾಗಿ ತಿಳಿಸಿ, ಅವರಿಗೆ ಗೊತ್ತಿಲ್ಲದೆ ಎಟಿಎಂ ಕಾರ್ಡ್‌ಗಳನ್ನು ಬದಲಿಸುತ್ತಿದ್ದ, ಪಿನ್‌ ಪಡೆದು ಕಾರ್ಡ್‌ ಕೆಲಸ ಮಾಡುತ್ತಿಲ್ಲವೆಂದು ಹೇಳಿ ವಂಚಿಸುತ್ತಿದ್ದ. ತನಿಖೆಯಿಂದ ಕೆ.ಆರ್‌.ನಗರದಲ್ಲಿ 2, ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಪಟ್ಟಣ ಪೊಲೀಸ್‌ ಠಾಣೆಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ ಎಂದರು.

ಕೆ.ಆರ್‌. ನಗರದಲ್ಲಿ ಫೆ.2ರಂದು ಮಹಿಳೆಯೊಬ್ಬರಿಗೆ ಹಾಗೂ ಮೇ 4ರಂದು ತಿಮ್ಮಶೆಟ್ಟಿ ಎಂಬವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿದ್ದವು. ಕೆ.ಆರ್‌ .ನಗರದ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಲವ ನೇತೃತ್ವದ ತಂಡವು ಸಿಸಿಟಿವಿ ಕ್ಯಾಮೆರಾ ಮಾಹಿತಿ ಆಧಾರಿಸಿ ಸಿಬ್ಬಂದಿಯನ್ನು ಎಟಿಎಂ ಕೇಂದ್ರಗಳಲ್ಲಿ ನೇಮಿಸಿತ್ತು. 30ರ ಸೋಮವಾರ ಅನುಮಾನಾಸ್ಪದವಾಗಿ ಎಟಿಎಂ ಕೇಂದ್ರದಲ್ಲಿ ಸುತ್ತಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಯಿತು ಎಂದು ಚೇತನ್‌ ಮಾಹಿತಿ ನೀಡಿದರು.

Advertisement

ಎಎಸ್ಪಿ ಶಿವಕುಮಾರ್‌, ಮೈಸೂರು ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಸುಮಿತ್‌, ಇನ್ಸ್‌ಪೆಕ್ಟರ್‌ ಲವ, ಎಸ್‌ಐ ಚಂದ್ರಹಾಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next