Advertisement
ದೆಹಲಿ ಮೂಲದ ಶಾಫಿಯಾ ಬೇಗಂ (34), ಆಕೆಯ ಸಹಚರರಾದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಶಕೀಲ್ ಶೇಕ್ (19) ರಹೀಂ ಖುರೇಶಿ (24), ಮೊಹಮದ್ ದಿಲ್ವರ್ ಹುಸೇನ್ (39), ಮೊಹಮ್ಮದ್ ಶಾನವಾಜ್ (30), ಮೊಹಮ್ಮದ್ ಇಬ್ರಾಹಿಂ (30), ರಹೀಂ ಶೇಖ್ (56) ಮತ್ತು ಅನ್ವರ್ ಹುಸೇನ್ (24) ಬಂಧಿತರು.
Related Articles
Advertisement
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳ ಮೊಬೈಲ್ ಲೊಕೇಷನ್ ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಅದರಂತೆ, ರಸ್ತೆ ಬದಿಯ ವ್ಯಾಪಾರಿಗೆ ವಂಚಿಸಲು ಯತ್ನಿಸುತ್ತಿದ್ದ ಶಕೀಲ್ ಶೇಖ್‌ನನ್ನು ಮೊದಲು ಬಂಧಿಸಿ ವಿಚಾರಣೆ ನಡೆಸಿದಾಗ ಬೃಹತ್ ಜಾಲದ ಬೇರು ಪತ್ತೆಯಾಗಿದೆ ಎಂದು ಡಿಸಿಪಿ ಹೇಳಿದರು.
ಪ್ರಕರಣದ ಕಿಂಗ್‌ಪಿನ್ ಶಾಫಿಯಾ ಬೇಗಂ ಹತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಸವಾಗಿದ್ದಳು. ಆಗಲೇ ಪರಿಚಿತರ ಮೂಲಕ ಸೌದಿ ಅರೇಬಿಯಾದ ರಿಯಲ್‌ಗಳನ್ನು ಪಡೆದುಕೊಂಡಿದ್ದಳು. ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ನಿರುದ್ಯೋಗ ಯುವಕರಿಗೆ ಕೆಲಸ ಕೊಡಿಸುವುದಾಗಿ 2011ರಲ್ಲಿ ಬೆಂಗಳೂರಿಗೆ ಕರೆತಂದು ನಗರದಲ್ಲಿ ಕೃತ್ಯ ಎಸಗುತ್ತಿದ್ದಳು.
2011ರಲ್ಲಿ ವಿವೇಕನಗರ ಮತ್ತು ಎಸ್.ಜೆ.ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಮೂರು ಅಪರಾಧ ಪ್ರಕರಣಗಳಲ್ಲಿ ಶಾಫಿಯಾ ಪೊಲೀಸರ ಬಲೆಗೆ ಬಿದ್ದಿದ್ದಳು. ಬಳಿಕ ಜಾಮೀನು ಪಡೆದು ಹೊರಬಂದು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಳು. ಈ ಸಂಬಂಧ ಕೋರ್ಟ್ ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
2018ರಲ್ಲಿ ಮತ್ತೂಮ್ಮೆ ನಗರಕ್ಕೆ ತನ್ನ ತಂಡದೊಂದಿಗೆ ಬಂದಿದ್ದ ಈಕೆ, ವಿವೇಕನಗರ ಠಾಣೆ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಾಗೂ 2019ನೇ ಸಾಲಿನಲ್ಲಿ ಒಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಳು ಎಂಬುದು ಗೊತ್ತಾಗಿದೆ ಎಂದು ಅವರು ಹೇಳಿದರು.
ಕೆಲಸ ಕೊಡಿಸುವುದಾಗಿ ಕರೆತಂದಿದ್ದಳು: ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಿಂದ ನಿರುದ್ಯೋಗಿ ಯುವಕರನ್ನು ನಗರಕ್ಕೆ ಕರೆತರುತ್ತಿದ್ದ ಶಾಫಿಯಾ ಬೇಗಂ, ಹೊರವಲಯದ ಪರಪ್ಪನ ಅಗ್ರಹಾರ, ದೊಡ್ಡ ನಾಗಮಂಗಲ ಮತ್ತು ಹೆಗ್ಗನ ಹಳ್ಳಿಯಲ್ಲಿ ಕಡಿಮೆ ವೆಚ್ಚದ ಬಾಡಿಗೆ ಮನೆ ಮಾಡಿಕೊಡುತ್ತಿದ್ದಳು.
ಆದರೆ, ಎಂದಿಗೂ ತಾನೂ ವಾಸ ಮಾಡುತ್ತಿದ್ದ ಮನೆ ವಿಳಾಸ ನೀಡುತ್ತಿರಲಿಲ್ಲ. ಬಳಿಕ ನಿರ್ಜನ ಪ್ರದೇಶಕ್ಕೆ ಯುವಕರನ್ನು ಕರೆದೊಯ್ದು ತನ್ನ ಬಳಿಯಿದ್ದ ವಿದೇಶಿ ಕರೆನ್ಸಿ ಕೊಡುತ್ತಿದ್ದಳು. ಬಳಿಕ ಅಮಾಯಕರನ್ನು ಸೆಳೆಯುವುದು ಹೇಗೆ ಮತ್ತು ವಂಚಿಸುವುದು ಹೇಗೆ ಎಂದು ತಾನೇ ತರಬೇತಿ ನೀಡುತ್ತಿದ್ದಳು.
ಶಾಫಿಯಾ ಸೂಚನೆ ಮೇರೆಗೆ ಆರೋಪಿಗಳು ಕ್ಯಾಬ್, ಆಟೋದಲ್ಲಿ ಪ್ರಯಾಣಿಕರಂತೆ ಸಂಚರಿಸಿ ಚಾಲಕರು ಮತ್ತು ಮಧ್ಯಮ ವರ್ಗದ ಜನರನ್ನು ಸಂಪರ್ಕಿಸಿ ವಿದೇಶಿ ಕರೆನ್ಸಿಯನ್ನು ಕಡಿಮೆ ಮೌಲ್ಯಕ್ಕೆ ಕೊಡುವುದಾಗಿ ನಂಬಿಸಿ ನಿಗದಿತ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.