ಬೆಂಗಳೂರು: ರೌಡಿಯೊಬ್ಬನ ಹತ್ಯೆಗೆ ಸಂಚು ರೂಪಿಸಿದ್ದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿಯ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್‌ಗಳಾದ ನವೀನ್ ಕುಮಾರ್ ಅಲಿಯಾಸ್ ಹ್ಯಾಂಡಿ ನವೀನ್, ನರಸಿಂಹಮೂರ್ತಿ ಅಲಿಯಾಸ್ ಬೇಕರಿ ಮೂರ್ತಿ ಹಾಗೂ ಲಕ್ಷ್ಮೀರಮಣ ಅಲಿಯಾಸ್ ರಮಣ ಬಂಧಿತರು. ಆರೋಪಿಗಳು ಇತ್ತೀಚೆಗೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸೆರೆಯಾಗಿದ್ದ ಸೈಕಲ್ ರವಿಯ ಸಹಚರರಾಗಿದ್ದು, ಈತನ ಸೂಚನೆ ಮೇರೆಗೆ ಕೆಲ ಉದ್ಯಮಿಗಳು,
ರಿಯಲ್ ಎಸ್ಟೇಟ್ ಏಜೆಂಟರ್‌ಗಳು, ಗಣ್ಯರನ್ನು ಅಪಹರಿಸಿ ದರೋಡೆ ಮಾಡುತ್ತಿದ್ದರು. ಅಲ್ಲದೆ ರವಿಯ ಮೀಟರ್ ಬಡ್ಡಿ ದಂಧೆ ಉಸ್ತುವಾರಿ ಹೊತ್ತಿದ್ದರು. ಕೆಲ ಉದ್ಯಮಿಗಳಿಂದ ನಿರಂತರಾಗಿ ಹಫ್ತಾ ವಸೂಲಿ ಮಾಡುತ್ತಿದ್ದರು. ಒಂದು ವೇಳೆ ಹಫ್ತಾ ಕೊಡದಿದ್ದರೆ ಕ್ರಿಕೆಟ್ ಬ್ಯಾಟ್‌ಗೆ ಮುಳ್ಳುತಂತಿ ಸುತ್ತಿ ಹಲ್ಲೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 12ರಂದು ಆರೋಪಿಗಳಾದ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಬೇಕರಿ ರಘು ಹಾಗೂ ಇತರರು ರೌಡಿ ಶೀಟರ್ ರಿಜ್ವಾನ್ ಅಲಿಯಾಸ್ ಕುಳ್ಳ ಎಂಬಾತನನ್ನು ಹತ್ಯೆಗೈಯಲು ಮಾರಕಾಸ್ತ್ರಗಳನ್ನು ಹಿಡಿದು ಆವಲಹಳ್ಳಿಯ ಗ್ಲಾಸ್ ಫ್ಯಾಕ್ಟರಿ ಬಳಿ ಕಾಯುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರ ದಾಳಿ ವೇಳೆ ತಲೆಮರೆಸಿಕೊಂಡಿರುವ ರಾಘವೇಂದ್ರ, ಜಯಂತ್ ಹಾಗೂ ಉದಯ್ ಎಂಬುವರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.