ಬೆಂಗಳೂರು: ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ವಿಶೇಷ ಅಧಿಕಾರ ಬಳಸಿ ಕೋಟ್ಯಂತರ ರೂ. ಆದಾಯ ತೆರಿಗೆ, ದಂಡ ಸೇರಿ ಬಡ್ಡಿ ಪಾವತಿಸದೆ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ ಬೆಂಗಳೂರಿನ ಉದ್ಯಮಿಯೊಬ್ಬರನ್ನು ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆತನನ್ನು ತೆರಿಗೆ ವಸೂಲಾತಿ ಅಧಿಕಾರಿ-6 ಎದುರು ಹಾಜರು ಪಡಿಸಿ ಆರು ತಿಂಗಳ ಕಾಲ ಜೈಲಿಗೆ ಶಿಕ್ಷೆ ವಿಧಿಸಲಾಗಿದೆ.
ಆದರೆ, ಉದ್ಯಮಿಯ ಹೆಸರನ್ನು ಆದಾಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆರೋಪಿ ಉದ್ಯಮಿ ಆದಾಯ ತೆರಿಗೆ, ದಂಡ ಸೇರಿ 11.94 ಕೋಟಿ ರೂ. ಹಾಗೂ ಬಡ್ಡಿ ಪಾವತಿಸಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಕಟ್ಟದೆ ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದ್ದ. ಈ ಮಾಹಿತಿ ಸಂಗ್ರಹಿಸಿದ ತೆರಿಗೆ ವಸೂಲಾತಿ ಅಧಿಕಾರಿಗಳು ಫೆ.11ರಂದು ನಸುಕಿನ 2.30ರ ಸುಮಾರಿಗೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯಮಿಯನ್ನು ಬಂಧಿಸಿದರು.
ಆರೋಪಿ ಉದ್ಯಮಿ ಕಳೆದ ಕೆಲ ವರ್ಷಗಳಿಂದ ಆದಾಯ ತೆರಿಗೆ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ರೀತಿ ತೆರಿಗೆ ವಂಚನೆ ಮಾಡಿದ ವ್ಯಕ್ತಿ ಯಾವುದೇ ಸಂದರ್ಭದಲ್ಲೂ ತೆರಿಗೆ ವಸೂಲಾತಿ ಅಧಿಕಾರಿಗಳ ಅನುಮತಿ ಪಡೆಯದೇ ತನ್ನ ಆಸ್ತಿಯನ್ನು ವರ್ಗಾಹಿಸುವುದಾಗಲಿ, ಮಾರಾಟ ಮಾಡುವುದಾಗಲಿ ಮಾಡುವಂತಿಲ್ಲ. ಆದರೆ, ಆತ ತನ್ನ ಹೆಸರಿನಲ್ಲಿರುವ ಯಶವಂತಪುರ ಆಸ್ತಿಯನ್ನು ಅಕ್ರಮವಾಗಿ ಬೇರೆಯವರಿಗೆ ವರ್ಗಾವಣೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಅಧಿಕಾರ ಬಳಕೆ: ಐಟಿ ನೋಟಿಸ್ ಜಾರಿಯಾದ ಬಳಿಕವೂ, ಒಬ್ಬ ವ್ಯಕ್ತಿಯು ತನ್ನ ಆಸ್ತಿಯನ್ನು ಮತ್ತೂಬ್ಬರಿಗೆ ವರ್ಗಾಯಿಸಿದರೆ, ಆತನನ್ನು ವಶಕ್ಕೆ ಪಡೆಯುವ ಅಥವಾ ಬಂಧಿಸುವ ಅಧಿಕಾರ ತೆರಿಗೆ ವಸೂಲಾತಿ ಅಧಿಕಾರಿಗೆ ಇರುತ್ತದೆ. ಅಲ್ಲದೆ, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಅವುಗಳನ್ನು ಮಾರಾಟ ಮಾಡುವ ಅಧಿಕಾರವೂ ಇರುತ್ತದೆ. ಆದರೆ, ಇಂಥ ಅಧಿಕಾರವನ್ನು ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಅಧಿಕಾರಿಗಳು ಬಳಸುತ್ತಾರೆ. ಈಗ ಈ ಉದ್ಯಮಿಯು ನಿಯಮ ಉಲ್ಲಂ ಸಿರುವ ಕಾರಣ ಆತನ ವಿರುದ್ಧ ಈ ಅಪರೂಪದ ಅಧಿಕಾರ ಚಲಾಯಿಸಲಾಗಿದೆ.