Advertisement

ಅಕ್ರಮವಾಗಿ ನೆಲೆಸಿದ್ದ 107ವಿದೇಶಿ ಪ್ರಜೆಗಳ ಬಂಧನ

12:04 PM Jul 22, 2018 | |

ಕೆ.ಆರ್‌.ಪುರ/ಬೆಂಗಳೂರು: ವೀಸಾ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ವಾಸವಿರುವ ಜತೆಗೆ ಮಾದಕ ವಸ್ತು ಮಾರಾಟ ಹಾಗೂ ಆನ್‌ಲೈನ್‌ ವಂಚನೆಯಲ್ಲಿ ತೊಡಗಿದ್ದ 107 ಮಂದಿ ವಿದೇಶಿ ಪ್ರಜೆಗಳನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ವೀಸಾ, ಪಾಸ್‌ಪೋರ್ಟ್‌ ಅವಧಿ ಮುಗಿದಿದ್ದರೂ ದೇಶದಲ್ಲಿ ಅಕ್ರಮವಾಗಿ ವಾಸವಾಗಿರುವ ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ ಕಚೇರಿ (ಎಫ್ಆರ್‌ಆರ್‌ಒ) ಅಧಿಕಾರಿಗಳ ದೂರಿನ ಮೇರೆಗೆ ವೈಟ್‌ಫೀಲ್ಡ್‌, ಈಶಾನ್ಯ ಹಾಗೂ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ ನಡೆದ ವಿಶೇಷ ಕಾರ್ಯಾಚರಣೆ ವೇಳೆ 107 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ನೈಜೀರಿಯಾ ಹಾಗೂ ಉಗಾಂಡಾ ಪ್ರಜೆಗಳನ್ನು ಬಂಧಿಸಿವೆ. ಬಂಧಿತ ವಿದೇಶಿಗರು ಕೆ.ಆರ್‌.ಪುರ, ಟಿ.ಸಿ.ಪಾಳ್ಯ, ಬೃಂದಾವನ ಬಡಾವಣೆ, ಪ್ರಿಯಾಂಕ ನಗರ, ಸೀಗೇಹಳ್ಳಿ, ಆನಂದಪುರ, ಮಾರ್ಗೊಂಡಹಳ್ಳಿ ಹಾಗೂ ಇತರೆಡೆ ವಾಸವಿದ್ದರು. ಬಂಧಿತರ ಬಳಿ ಸೂಕ್ತ ದಾಖಲೆಗಳಿಲ್ಲ. ಜತೆಗೆ ಎಲ್ಲರ ವೀಸಾ ಅವಧಿ ಮುಕ್ತಾಯವಾಗಿದ್ದು, ಅಕ್ರಮವಾಗಿ ನೆಲೆಸಿದ್ದರು ಎಂದು ವೈಟ್‌μàಲ್ಡ್‌ ವಲಯದ ಡಿಸಿಪಿ ಅಬ್ದುಲ್‌ ಅಹದ್‌ ತಿಳಿಸಿದರು.

ಎಫ್ಆರ್‌ಆರ್‌ಒ ಅಧಿಕಾರಿಗಳಿಂದ ಆರೋಪಿಗಳ ವೀಸಾ, ಪಾಸ್‌ಪೋರ್ಟ್‌, ರಹವಾಸಿ ಪ್ರಮಾಣಪತ್ರ (ರೆಸಿಡೆನ್ಸಿಯಲ್‌ ಪರ್ಮಿಟ್‌) ಕುರಿತು ಪರಿಶೀಲನೆಗೆ ಒಳಪಡಿಸಲಾಗಿದೆ. ಬಂಧಿತರ ವಿರುದ್ಧ ಪಾಸ್‌ಪೋರ್ಟ್‌ ಕಾಯ್ದೆ, ವಿದೇಶಿ ಕಾಯ್ದೆ, ಫಾರಿನರ್ಸ್‌ ಆರ್ಡರ್ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೇ ಅನಧಿಕೃತ ದಾಖಲೆಗಳನ್ನು ಪಡೆದು ಮನೆಗಳನ್ನು ಬಾಡಿಗೆ ನೀಡಿದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಡಿಪಾರು ಮಾಡುವ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗಿದ್ದು, ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಾಚರಣೆ ವೇಳೆ ಟಿ.ಸಿ.ಪಾಳ್ಯ ಬಳಿಯ ಮಂಜುನಾಥ ಬಡಾವಣೆಯಲ್ಲಿ ವಾಸವಾಗಿದ್ದ ಸ್ಟಾನ್ಲಿ ಎಂಬ ಆಫ್ರೀಕನ್‌ ಪ್ರಜೆ ಬಳಿ 150 ಗ್ರಾಂ. ಗಾಂಜಾ ಹಾಗೂ ಪ್ರೋಸ್ಪಾ ಎಂಬಾತನಿಂದ 50 ಗ್ರಾಂ ಕೊಕೇನ್‌ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಿದೇಶಗಳಿಂದ ದೆಹಲಿ ಹಾಗೂ ಮುಂಬೈ ಮಾರ್ಗವಾಗಿ ನಗರಕ್ಕೆ ಮಾದಕ ವಸ್ತುಗಳನ್ನು ತರುತ್ತಿದ್ದರು. ನಂತರ ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ವಿದ್ಯಾರ್ಥಿಗಳು ಹಾಗೂ ಬೆಳ್ಳಂದೂರು, ಕೆ.ಆರ್‌.ಪುರ ವ್ಯಾಪ್ತಿಯಲ್ಲಿ ಟೆಕ್ಕಿಗಳಿಗೆ ಮಾರುತ್ತಿದ್ದರು. ಈಗಾಗಲೇ ಗಲಾಟೆ, ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮತ್ತೂಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೂರು ವಲಯ ವ್ಯಾಪ್ತಿಯಲ್ಲಿ ಶನಿವಾರ ನಡೆದ ಇಡೀ ದಿನದ ಕಾರ್ಯಾಚರಣೆಯಲ್ಲಿ ಒಟ್ಟು 650 ಗ್ರಾಂ. ಗಾಂಜಾ, 60 ಗ್ರಾಂ. ಕೊಕೇನ್‌, 10 ಗ್ರಾಂ ಎಲ್‌ಎಸ್‌ಡಿ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದು, ಇವರ ವಿರುದ್ಧ ಅಕ್ರಮ ವಾಸದ ಜತೆಗೆ ಮಾದಕ ವಸ್ತು ಮಾರಾಟ ಆರೋಪ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. 

ಆನ್‌ಲೈನ್‌ ವಂಚನೆ
ಬಂಧಿತರ ಪೈಕಿ ಬಹುತೇಕರು ಜೀವನ ನಿರ್ವಹಣೆಗಾಗಿ ರಸ್ತೆಬದಿ ಬಟ್ಟೆ ವ್ಯಾಪಾರ, ಮಾದಕ ವಸ್ತು ಮಾರಾಟ, ಆನ್‌ಲೈನ್‌ ವಂಚನೆಯಲ್ಲಿ ತೊಡಗಿದ್ದರು. ಇನ್ನು ಕೆಲವರು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ, ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ. ಭಾಷೆ ಸಮಸ್ಯೆಯಿಂದ ಸಂವಹನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಎಫ್ಆರ್‌ಆರ್‌ಒ ಅಧಿಕಾರಿಗಳು ಆರೋಪಿಗಳ ಪೂರ್ವಾಪರ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next