Advertisement

14 ವರ್ಷ ಹಿಂದೆ ನಾಪತ್ತೆಯಾಗಿದ್ದ ಸೈನಿಕ ಪತ್ತೆ! ಅಪಘಾತವಾಗಿ ಸ್ಮರಣ ಶಕ್ತಿ ನಾಶ

12:41 AM Mar 18, 2021 | Team Udayavani |

ವಿಜಯಪುರ: ಪಶ್ಚಿಮ ಬಂಗಾಲದ ಮಾಣಿಕಗಂಜ್‌ ಪ್ರದೇಶದಲ್ಲಿ 14 ವರ್ಷಗಳ ಹಿಂದೆ ಕರ್ತವ್ಯದಲ್ಲಿದ್ದಾಗ ನಾಪತ್ತೆಯಾಗಿದ್ದ ಬಿಎಸ್‌ಎಫ್‌ ಯೋಧ ವಿಜಯಪುರ ತಾಲೂಕು ಕನ್ನೂರು ಗ್ರಾಮದ ಗೋವಿಂದಪ್ಪ ಮಲಕಪ್ಪ ಅಜನಾಳ ಮಾ. 4ರಂದು ಸಿನಿಮೀಯ ರೀತಿಯಲ್ಲಿ ಹೆತ್ತವರ ಮಡಿಲು ಸೇರಿದ್ದಾರೆ.

Advertisement

2007ರ ಫೆ. 8ರಂದು ಬ್ಯಾಂಕ್‌ಗೆ ತೆರಳಿದ್ದ ಅವರು ನಾಪತ್ತೆಯಾಗಿದ್ದರು. ಅನಧಿಕೃತ ಗೈರು ಎನ್ನುವ ನೆಲೆಯಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಕನ್ನೂರು ಗ್ರಾಮದಲ್ಲಿರುವ ಆತನ ತಾಯಿ ಪಾರ್ವತಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋ ಜನವಾಗಿರಲಿಲ್ಲ. 2012ರಲ್ಲಿ ಸೇನೆಯಿಂದ ನಿವೃತ್ತರಾಗಿ ಗ್ರಾಮಕ್ಕೆ ಬಂದು ಕನ್ನೂರು ಗ್ರಾಮದ ಹವಾಲ್ದಾರ ಗುರು ಶಾಂತಪ್ಪ ಬೆಳ್ಳುಂಡಗಿ ಅವರು ಗೋವಿಂದಪ್ಪ ಮನೆಯವರ ವಿಷಯ ತಿಳಿದು ಕಾನೂನು ಹೋರಾಟಕ್ಕೆ ಮುಂದಾಗುತ್ತಾರೆ. ಬಿಎಸ್‌ಎಫ್‌ ಕಚೇರಿ, ವಿಜಯಪುರ ಗ್ರಾಮೀಣ ಠಾಣೆಗೆ ದೂರು ನೀಡಿದರೂ ಅವರಾರೂ ನೆರವಿಗೆ ಬಂದಿರಲಿಲ್ಲ. ಈ ನಡುವೆ ತೆಲಂಗಾಣದ ವ್ಯಕ್ತಿಯೊಬ್ಬರು ಗೋವಿಂದಪ್ಪನನ್ನು ಊರಿಗೆ ತಲುಪಿಸಿದ್ದಾರೆ.

ಏನಾಗಿತ್ತು?
ಮಗನನ್ನು ತಂದು ಒಪ್ಪಿಸಿದ ಬಾಲಾಜಿ ರಾಜು ಹೇಳುವಂತೆ ಅಂದು ಅಪಘಾತವಾಗಿ ಗಾಯಗೊಂಡು ಉಸ್ಮಾನಿಯಾ ಆಸ್ಪತ್ರೆ ಸೇರಿದ್ದ ಗೋವಿಂದಪ್ಪ ನಮ್ಮ ಮಾಲಕ ನರಸಯ್ಯ ಅವರ ಸಂಪರ್ಕಕ್ಕೆ ಬಂದಿದ್ದ. ಆಗ ಆತನಲ್ಲಿ ಯಾವುದೇ ದಾಖಲೆಗಳೂ ಇರಲಿಲ್ಲ. ತನ್ನ ಊರು, ವಿಳಾಸವನ್ನೂ ಮರೆತಿದ್ದ. ಆತನನ್ನು ಕಟ್ಟಡ ಗುತ್ತಿಗೆದಾರ ನರಸಯ್ಯ ಗಾರೆ ಕೆಲಸ ಕೊಟ್ಟು ಉಳಿಸಿಕೊಂಡಿದ್ದರು. ಆತ ಪಶ್ಚಿಮ ಬಂಗಾಲದಿಂದ ಹೈದರಾಬಾದ್‌ಗೆ ಹೇಗೆ ಬಂದ ಎನ್ನುವುದೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಗೋವಿಂದಪ್ಪ ತೀವ್ರ ಅನಾರೋಗ್ಯಕ್ಕೆ ಸಿಲುಕಿದಾಗ ತಾನು ವಿಜಯಪುರ ಜಿಲ್ಲೆಯವನು ಎಂದು ಹೇಳಿದ್ದು, ಅದನ್ನು ಆಧರಿಸಿ ಮಾ. 4ರಂದು ಬಾಲಾಜಿರಾಜು ಆತನನ್ನು ವಿಜಯಪುರಕ್ಕೆ ಕರೆ ತಂದಿದ್ದರು. ನಿಖರ ವಿಳಾಸ ಪತ್ತೆಯಾಗದೆ ತೆಲಂಗಾಣಕ್ಕೆ ಮರಳಿ ಹೊರಟಿದ್ದರು.

ನೆನಪಾದಳು ಚಿಕ್ಕಮ್ಮ
ಊರಿಗೆ ಮರಳುವಾಗ ಮಾರ್ಗ ಮಧ್ಯೆ ದೇವರಹಿಪ್ಪರಗಿ ಪಟ್ಟಣದಲ್ಲಿ ಊಟಕ್ಕೆ ನಿಲ್ಲಿಸಿದಾಗ ಗೋವಿಂದಪ್ಪ ತನ್ನ ಚಿಕ್ಕಮ್ಮ ಬೋರಮ್ಮ ಚಂಡಕಿ ಇಲ್ಲೇ ಹತ್ತಿರದಲ್ಲಿರುವ ಚಿಕ್ಕರೂಗಿ ಗ್ರಾಮದಲ್ಲಿದ್ದಾಳೆ ಎಂದಿದ್ದರು.

ಅಲ್ಲಿಗೆ ತೆರಳಿ ಇಡೀ ಗ್ರಾಮ ಹುಡುಕಾಡಿದಾಗ ಎದುರಿಗೆ ಬಂದ ಚಿಕ್ಕಮ್ಮಳನ್ನು ಗುರುತು ಹಿಡಿದು ಅಪ್ಪಿಕೊಂಡು ಕಣ್ಣೀರಿಟ್ಟಿದ್ದರು. ಅಂತಿಮವಾಗಿ ಗೋವಿಂದಪ್ಪನನ್ನು ಗುರುತು ಹಿಡಿದು ಕನ್ನೂರು ಗ್ರಾಮಕ್ಕೆ ಕರೆ ತಂದು, ತಾಯಿ ಪಾರ್ವತಿ ಹಾಗೂ ಸಹೋದರ ಸೋಮನಿಂಗ ಸುಪರ್ದಿಗೆ ಒಪ್ಪಿಸಿದ್ದಾರೆ.

Advertisement

ತೀವ್ರ ಅನಾರೋಗ್ಯ
ಗೋವಿಂದಪ್ಪನಿಗೆ 14 ವರ್ಷದ ಅವಧಿಯಲ್ಲಿನ ಯಾವುದೇ ಘಟನೆ ನೆನಪಿನಲ್ಲಿಲ್ಲ. ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಅವರು ಬಿಳಿರಕ್ತ ಕಣದ ಕೊರತೆ ಹಾಗೂ ಇತರ ಕಾಯಿಲೆಗಳಿಂದ ಬಳುತ್ತಿರುವುದು ಪತ್ತೆಯಾಗಿದೆ.

ಕಾನೂನು ಹೋರಾಟ
ಕುಟುಂಬಕ್ಕೆ ನ್ಯಾಯ ಕೊಡಿಸಲು ಕಾನೂನು ಹೋರಾಟಕ್ಕೆ ಮುಂದಾದ ಗುರುಶಾಂತಪ್ಪ ಅವರು ಕುಟುಂಬದವರ ಮೂಲಕ ನಾಪತ್ತೆಯಾಗಿ 7 ವರ್ಷವಾಗಿರುವ ಗೋವಿಂದಪ್ಪನ ತಾಯಿ ಪಾವರ್ತಿಗೆ ಪಿಂಚಣಿ ಕೊಡಿ ಎಂದು ಬೆಂಗಳೂರು ಹೈಕೋರ್ಟ್‌ ಮೂಲಕ ಕಾನೂನು ಮೊರೆ ಹೋಗಿದ್ದರು. ಹೈಕೋರ್ಟ್‌ ಇದನ್ನು ಪರಿಗಣಿಸುವಂತೆ ನೀಡಿದ ನಿರ್ದೇಶನದಲ್ಲೂ ಕೊಂಕು ಹುಡುಕಿ ಪರಿಹಾರಕ್ಕೆ ನಿರಾಕರಿಸಲಾಗಿತ್ತು. ಆದರೆ ಮತ್ತೆ ಕಲಬುರ್ಗಿ ಹೈಕೋರ್ಟ್‌ ಪೀಠದಲ್ಲಿ ಪರಿಹಾರಕ್ಕೆ ಸಲ್ಲಿಸಿದ ಅರ್ಜಿ ಇತ್ಯರ್ಥಕ್ಕೆ ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next