ಚಿಕ್ಕಬಳ್ಳಾಪುರ: ಸರ್ಕಾರ ಕುಷ್ಠರೋಗದಿಂದ ಬಳಲು ತ್ತಿರುವವರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಂಕೋಚ ಪಡದೇ ರೋಗ ಪತ್ತೆ ಅಭಿಯಾನಕ್ಕೆ ಜಿಲ್ಲೆಯ ಸಾರ್ವಜನಿಕರು ಸಹಕಾರ ನೀಡುವ ಮೂಲಕ ರೋಗಿಗಳು ಗುಣಮುಖರಾಗಲು ಸಹ ಕರಿಸಬೇಕೆಂದು ಜಿಪಂ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ತಾಲೂಕಿನ ನಾಯನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿರ್ಲಕ್ಷ್ಯ ಸಲ್ಲದು: ಕುಷ್ಠರೋಗವು ಸಾಂಕಾಮಿಕ ರೋಗವಾಗಿದ್ದು, ಪ್ರಾರಂಭದಲ್ಲಿಯೇ ಗುರುತಿಸಿದರೆ ಬಹುವಿಧದ ಔಷಧದ ಮೂಲಕ ಗುಣಪಡಿಸ ಬಹುದು. ಅದು ಯಾವುದೇ ರೀತಿಯಲ್ಲಿಯೂ ಮಾರಣಾಂತಿಕ ಕಾಯಿಲೆ ಅಲ್ಲ. ಆದರೆ ಯಾವುದೇ ಕಾಯಿಲೆ ಇದ್ದರೂ ನಿರ್ಲಕ್ಷಿಸಬಾರದು.
ಪ್ರಕರಣ ಪತ್ತೆ: ಕುಷ್ಠರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನ (ಎಲ್ಸಿಡಿಸಿ) ವಿಶೇಷ ಸಮೀಕ್ಷಾ ಕಾರ್ಯವನ್ನು ಸೆಪ್ಟೆಂಬರ್ 23ರವರೆಗೆ ಹಮ್ಮಿಕೊಳ್ಳಲಾಗಿದೆ. ಕುಷ್ಠ ರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ವಯಂ ಸೇವಕರ ತಂಡವೂ ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡು ಶಂಕಿತ ಪ್ರಕರಣಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದರು.
ಮನೆ ಮನೆಗೂ ಭೇಟಿ: ಕುಷ್ಠರೋಗ ಪತ್ತೆ ಅಭಿಯಾನದಡಿ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಮನೆಯ ಎಲ್ಲಾ ಸದಸ್ಯರನ್ನೂ ಪರೀಕ್ಷಿಸ ಲಾಗುವುದು. ಅದಕ್ಕಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗಳ ಬಳಿ ಬಂದಾಗ ಸಾರ್ವಜನಿಕರು ಹಿಂಜರಿಕೆ ಮನೋಭಾವ ಬಿಟ್ಟು ಸಹಕಾರ ನೀಡಬೇಕು. ತಜ್ಞ ವೈದ್ಯರಿಂದ ಪ್ರಕರಣಗಳನ್ನು ದೃಢಪಡಿಸಿ ಉಚಿತ ಬಹುವಿವಿಧ ಔಷಧ ಚಿಕಿತ್ಸೆ ಪಡೆಯಬೇಕು. 2025ರೊಳಗೆ ಕುಷ್ಠರೋಗ ಮುಕ್ತ ದೇಶ ನಿರ್ಮಾಣ ಮಾಡುವುದಕ್ಕೆ ಸಂಕಲ್ಪ ಮಾಡಿದ್ದು, ಜಿಲ್ಲೆಯ ನಾಗರಿಕರು ಕೈಜೋಡಿಸಬೇಕು ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ, ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳ ಪತ್ತೆ ಹಚ್ಚುವ ಆಂದೋಲನದ ವಿಶೇಷ ಸಮೀಕ್ಷಾ ಕಾರ್ಯವನ್ನು ಸೆ. 23ರವರೆಗೆ ಪ್ರತಿ ಹಳ್ಳಿ ಮತ್ತು ಗ್ರಾಮಗಳ ಮನೆ-ಮನೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ.
ಕುಷ್ಠರೋಗ ಪ್ರಕರಣಗಳ ಪತ್ತೆ ಹಚ್ಚುವ ಆಂದೋ ಲನದಲ್ಲಿ ಆಶಾ ಕಾರ್ಯಕರ್ತೆಯರ ಜೊತೆಗೆ,ಒಬ್ಬ ಪುರುಷ ರೋಗಿಗಳನ್ನು ಪರಿಶೀಲಿಸಲು ಒಬ್ಬ ಪುರುಷ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚಂದ್ರಮೋಹನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್, ತಾಲೂಕು ವೈದ್ಯಾಧಿಕಾರಿ ಡಾ.ಮಂಜುಳಾ ಸೇರಿದಂತೆ ನಾಯನಹಳ್ಳಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ನಾಯನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.