ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ರೂವಾರಿ, ಸಂಸ್ಥೆಯ ಸ್ಥಾಪಕ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂಬುದು ತಿಳಿದಿದೆ. ಆದರೆ ತನಿಖಾ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಆತ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಹೇಳಿಕೊಂಡಿರುವಂತೆ ಕಾನೂನಿಗೆ ಶರಣಾಗುವುದಾದರೆ ಸೂಕ್ತ ರಕ್ಷಣೆ ಕೊಡಲಾಗುವುದು ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.
ಆರೋಪಿ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವೀಡಿಯೋ ಕುರಿತು ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ಆತ ಹೇಳಿರುವ ಎಲ್ಲರಿಗೂ ನೋಟಿಸ್ ಜಾರಿ ಮಾಡಲು ಸಾಧ್ಯವಿಲ್ಲ, ಸೂಕ್ತ ಸಾಕ್ಷ್ಯಗಳನ್ನಾಧರಿಸಿ ವಿಚಾರಣೆ ನಡೆಸಲಾಗುತ್ತದೆ. ಆತ ಕಾನೂನಿಗೆ ತಲೆಬಾಗುವುದಾದರೆ ರಕ್ಷಣೆ ನೀಡಲಾಗುವುದು ಎಂದರು.
ಕೋಟ್ಯಂತರ ರೂ. ಆಸ್ತಿ ಪತ್ತೆ
ಐಎಂಎ ಸಮೂಹ ಸಂಸ್ಥೆಗೆ ಸೇರಿದ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಕಂಪೆನಿಯ ಮಳಿಗೆಗಳನ್ನು ಪರಿಶೀಲಿಸಿ, ಚಿನ್ನ, ಬೆಳ್ಳಿ, ವಜ್ರಗಳನ್ನು ಜಪ್ತಿ ಮಾಡಿದ್ದೇವೆ. ಇನ್ನೂ ಕೆಲವು ಮಂದಿ ಆರೋಪಿಗಳನ್ನು ಗುರುತಿಸಲಾಗಿದ್ದು, ಸದ್ಯದಲ್ಲೇ ಬಂಧಿಸುತ್ತೇವೆ ಎಂದು ಹೇಳಿದರು.
ಎಸ್‌ಐಟಿಸೋಮವಾರ ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಗೋಲ್ಡ್ ಮಳಿಗೆಯಲ್ಲಿ ಪರಿಶೀಲಿಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ದಾಖಲೆಗಳನ್ನು ಜಪ್ತಿ ಮಾಡಿದೆ. ಸುಮಾರು ಎಂಟು ಟ್ರಂಕ್‌ಗಳ ಚಿನ್ನಾಭರಣ ಜಪ್ತಿ ಮಾಡಿದೆ. ಮನ್ಸೂರ್ ಖಾನ್ ಬಳಸುತ್ತಿದ್ದ ಪಿಸ್ತೂಲ್ ಪತ್ತೆಯಾಗಿದೆ.