Advertisement

ಪೀಪಲ್ಸ್‌ಪಾರ್ಕ್‌ ಬಳಿ ಶಂಕಿತ ವಸ್ತು ಪತ್ತೆ: ಆತಂಕ

05:22 PM Dec 21, 2017 | |

ಮೈಸೂರು: ನಗರದ ಗ್ರಾಮಾಂತರ ಬಸ್‌ ನಿಲ್ದಾಣದ ಎದುರಿಗೆ ಕೂಗಳತೆ ದೂರದಲ್ಲಿರುವ ಕಮಾನು ಗೇಟ್‌ ಸಮೀಪ ಬಾಂಬ್‌ ಮಾದರಿಯ ಅನುಮಾನಾಸ್ಪದ ವಸ್ತುವೊಂದು ಬುಧವಾರ ಪತ್ತೆಯಾಗಿ, ನಗರದ ಜನರಲ್ಲಿ ಆತಂಕ ಮೂಡಿಸಿತ್ತು. ಸ್ಥಳದಲ್ಲಿ ಲಭಿಸಿರುವ ಅನುಮಾನಾಸ್ಪದ ವಸ್ತುವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಕುರಿತು ನಗರ ಪೊಲೀಸರು ನಿರ್ಧರಿಸಿದ್ದು, ಮತ್ತೂಂದೆಡೆ ನಗರದೆಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಲು ಮುಂದಾಗಿದ್ದಾರೆ.

Advertisement

ಅನುಮಾನಾಸ್ಪದ ವಸ್ತು ಪತ್ತೆ: ಮೈಸೂರು-ನೀಲಗಿರಿ ರಸ್ತೆಯಲ್ಲಿರುವ ಗ್ರಾಮಾಂತರ ಬಸ್‌ ನಿಲ್ದಾಣದ ಎದುರಿನ ಪೀಪಲ್ಸ್‌ ಪಾರ್ಕ್‌ ಬಳಿಯ ಟಾಂಗಾ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಪ್ಲಾಸ್ಟಿಕ್‌ ಕವರ್‌ನಲ್ಲಿದ್ದ ಅನುಮಾನಾಸ್ಪದ ವಸ್ತುವೊಂದು ಸ್ಥಳದಲ್ಲಿದ್ದ ಆಟೋ ಚಾಲಕರ ಗಮನಕ್ಕೆ ಬಂದಿದೆ. ಬಳಿಕ ಕಡ್ಡಿಯಿಂದ ಹೊಡೆದು ನೋಡಿದಾಗ ಕವರ್‌ನಲ್ಲಿ ಬ್ಯಾಟರಿ ಇನ್ನಿತರ ವಸ್ತುಗಳಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಆಟೋರಿಕ್ಷಾ ಚಾಲಕರು, ಕೂಡಲೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್‌ ಪೇದೆಗೆ ತಿಳಿಸಿದ್ದು, ಬಳಿಕ ಪೇದೆಯು ನಜರ್‌ಬಾದ್‌ ಪೊಲೀಸರಿಗೆ ತುರ್ತು ಮಾಹಿತಿ ರವಾನಿಸಿದ್ದಾರೆ. 

ಪೊಲೀಸರ ಪರಿಶೀಲನೆ: ಸ್ಥಳಕ್ಕಾಗಮಿಸಿದ ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳ, ಶ್ವಾನದಳ ತಜ್ಞರ ನೆರವಿನೊಂದಿಗೆ ಸ್ಥಳದಲ್ಲಿ ಬಿದ್ದಿದ್ದ ಅನುಮಾನಾಸ್ಪದ ವಸ್ತುವನ್ನು ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ. ನಜರ್‌ಬಾದ್‌ ಠಾಣೆ ಇನ್ಸ್‌ಪೆಕ್ಟರ್‌ ಶೇಖರ್‌ ಸಮ್ಮುಖದಲ್ಲಿ ಪೀಪಲ್ಸ್‌ ಪಾರ್ಕ್‌ನ ಎಲ್ಲಾ ಕಡೆಗಳಲ್ಲಿ ತಪಾಸಣೆ ನಡೆಸಲಾಯಿತು.

ಕಾಲೇಜು ಆವರಣ, ಪೀಪಲ್ಸ್‌ ಪಾರ್ಕಿನಲ್ಲಿರುವ ಪ್ರತಿ ಭಾಗಗಳನ್ನು ಪರಿಶೀಲಿಸಲಾಯಿತು. ಈ ನಡುವೆ ಗ್ರಾಮಾಂತರ ಬಸ್‌ನಿಲ್ದಾಣದ ಸಮೀಪ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿರುವ ವಿಷಯ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿದ್ದು, ಆತಂಕಕ್ಕೂ ಕಾರಣವಾಯಿತು.

ಎಫ್ಎಸ್‌ಎಲ್‌ಗೆ ರವಾನೆ: ಕಮಾನು ಗೇಟಿನ ಬಳಿ ಸಿಕ್ಕಿರುವ ಅನುಮಾನಾಸ್ಪದ ಬ್ಯಾಗ್‌ನಲ್ಲಿ 60 ಬ್ಯಾಟರಿ, ವೈಯರ್‌ ಇನ್ನಿತರ ವಸ್ತುಗಳು ದೊರೆತಿವೆ. ಇದನ್ನು ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

Advertisement

ಜನನಿಬಿಡ ಪ್ರದೇಶದಲ್ಲಿ ಟೈಮರ್‌ ಅಳವಡಿಸದೆ ಶಂಕಿತ ವಸ್ತುಗಳನ್ನಟ್ಟಿರುವ ಆಗಂತುಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಸ್ಥಳದಲ್ಲಿ ದೊರೆತ ಮಾಹಿತಿಗಳನ್ನು ಸಂಗ್ರಹಿಸಿರುವ ಪೊಲೀಸರು ಈ ವಸ್ತುಗಳನ್ನು ಬಿಟ್ಟು ಹೋಗಿರುವ ವ್ಯಕ್ತಿಗಳು ಯಾರೆಂದು ಶೋಧ ನಡೆಸುತ್ತಿದ್ದಾರೆ. 

ಇದಕ್ಕಾಗಿ ಸಮೀಪದಲ್ಲಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅಲ್ಲದೇ, ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್‌ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಘಟನೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. 

ಸ್ಫೋಟಕವಲ್ಲ: ಪೊಲೀಸ್‌ ಆಯುಕ್ತರ ಸ್ಪಷ್ಟನೆ ಪೀಪಲ್ಸ್‌ ಪಾರ್ಕ್‌ ಬಳಿ ಯುಪಿಎಸ್‌ ಮಾದರಿಯ ಪವರ್‌ ಬ್ಯಾಂಕ್‌ ಸಿಕ್ಕಿದ್ದು, ಕಾರ್ಖಾನೆಯಲ್ಲಿ ತಯಾರಿ ಸಿರುವ ವಸ್ತುವಾಗಿದೆ. ಹೀಗಾಗಿ ಸಾರ್ವಜನಿಕರು ಸ್ಫೋಟಕವೆಂದು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್‌ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಬದಿಯಲ್ಲಿದ್ದ ಸಂಶಯಾಸ್ಪದ ವಸ್ತುವನ್ನು ಗಮನಿಸಿ ಆಟೋ ಚಾಲಕರು, ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್‌ ಪೇದೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಂಬ್‌ ಪತ್ತೆ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಪರಿಶೀಲಿಸಿ, ಸ್ಫೋಟಕ ವಸ್ತುವಲ್ಲವೆಂದು ಖಚಿತ ಪಡಿಸಿದ್ದಾರೆ. ಆದರೆ ಸಂಶಯಾಸ್ಪದ ವಸ್ತು ದೊರೆತ ಸ್ಥಳದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಈ ವಸ್ತುವನ್ನು ಯಾರಾದರೂ ಇಲ್ಲಿಗೆ ತಂದಿಟ್ಟಿದ್ದಾರೆಯೇ ಅಥವಾ ಮರೆತು ಬಿಟ್ಟು ಹೋಗಿದ್ದಾರೆಯೇ ಎಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next