ಬೆಳಗಾವಿ: ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕರಿಗೆ ಪತ್ರಕರ್ತರು ಹಾಗೂ ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಹಣದ ಬೇಡಿಕೆ ಇಟ್ಟು ಸತಾಯಿಸಿ ಬ್ಯ್ಲಾಕ್‌ಮೇಲ್ ಮಾಡಲು ಮುಂದಾಗಿದ್ದ ಓರ್ವನನ್ನು ಬಂಧಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.
ಟಿಳಕವಾಡಿಯ ಶಾಂತಿ ನಗರದ ಅತುಲ್ ವಿಶ್ವಾಸ ಕದಮ ಎಂಬಾತನನ್ನು ಬಂಧಿಸಲಾಗಿದ್ದು, ಮೂಲತಃ ತಾಲೂಕಿನ ಸುಳೇಭಾವಿ ಗ್ರಾಮದ ಜಾಕೀರಹುಸೇನ ಮನಿಯಾರ ಎಂಬಾತ ಪರಾರಿಯಾಗಿದ್ದಾನೆ.
ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಶರಣಪ್ಪ ಕಲ್ಲಪ್ಪ ಹುಗ್ಗಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಹುಗ್ಗಿ ಅವರಿಗೆ ಕರೆ ಮಾಡಿದ ಕದಮ, ಮನಿಯಾರ ತಾವು ಎಸಿಬಿ ಅಧಿಕಾರಿ ಹಾಗೂ ಪತ್ರಕರ್ತರಾಗಿದ್ದೆವೆ. ತಮ್ಮ ವಿರುದ್ಧ ದೂರು ಬಂದಿದೆ. ಹೀಗಾಗಿ ಸೆಟಲ್‌ಮೆಂಟ್ ಮಾಡಲು ಭೇಟಿ ಆಗುವಂತೆ ಹೇಳಿದ್ದಾರೆ. ಹಣದ ಬೇಡಿಕೆ ಇಟ್ಟಿದ್ದಾರೆ.
ಇವರ ಮೇಲೆ ಸಂಶಯ ಬಂದ ಕೂಡಲೇ ಹುಗ್ಗಿ ಅವರು ಮಾರ್ಕೆಟ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಸಿಪಿ ಎನ್.ವಿ. ಬರಮನಿ ನೇತೃತ್ವದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಅ„ಕಾರಿಗಳನ್ನು, ಸರ್ಕಾರಿ ನೌಕರರನ್ನು, ಉದ್ದಿಮೆದಾರರನ್ನು ಬ್ಲ್ಯಾಕ್‌ಮೇಲ್ ಮಾಡುವ ಜಾಲ ಇರುವುದು ಗೊತ್ತಾಗಿದೆ. ಆರೋಪಿ ಅತುಲ್ ಕದಮನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ಆರೋಪಿ ಮನಿಯಾರ ಸೇರಿದಂತೆ ಗ್ಯಾಂಗ್ ಬಗ್ಗೆ ಜಾಲ ಬೀಸಲಾಗಿದೆ.
ನಕಲಿ ಪತ್ರಕರ್ತರ ಈ ಜಾಲ ಭೇದಿಸಲು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ. ಹಣ ವಸೂಲಿ ಮಾಡುವ ಇಂಥ ಜಾಲಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಇಂತಹ ಗ್ಯಾಂಗ್ ಬಗ್ಗೆ ಸಂಶಯ ಬಂದರೆ ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಮಾರ್ಕೆಟ್ ಎಸಿಪಿ ಎನ್.ವಿ. ಬರಮನಿ ಮನವಿ ಮಾಡಿದ್ದಾರೆ.