Advertisement

ಚುನಾವಣ ಬಾಂಡ್‌ ಖರೀದಿಸಿದವರ ವಿವರ ನೀಡಿ: ಸುಪ್ರೀಂ

08:57 AM Apr 14, 2019 | Team Udayavani |

ಹೊಸದಿಲ್ಲಿ: ಚುನಾವಣ ಬಾಂಡ್‌ನ‌ ಪಾರದರ್ಶಕತೆ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಎದ್ದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, ಈವರೆಗೆ ಚುನಾವಣ ಬಾಂಡ್‌ನಿಂದ ಸ್ವೀಕರಿಸಿದ ಮೊತ್ತದ ವಿವರ ಮತ್ತು ದೇಣಿಗೆ ನೀಡಿದವರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಚುನಾವಣ ಆಯೋಗಕ್ಕೆ ಸೂಚಿಸಿದೆ.

Advertisement

ಈ ಸಂಬಂಧ ಶುಕ್ರವಾರ ಮಧ್ಯಂತರ ಆದೇಶ ಹೊರಡಿಸಿದ ಕೋರ್ಟ್‌, ಮೇ 30ರ ಒಳಗೆ ಬಾಂಡ್‌ ಮೂಲಕ ಪಡೆದ ಮೊತ್ತ ಮತ್ತು ದೇಣಿಗೆ ನೀಡಿದವರ ಬ್ಯಾಂಕ್‌ ಖಾತೆಯ ವಿವರಗಳನ್ನು ಚುನಾವಣ ಆಯೋಗಕ್ಕೆ ನೀಡಬೇಕು ಎಂದು ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಆದರೆ ಪ್ರಸ್ತುತ ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದಾಗಿ ಚುನಾವಣ ಬಾಂಡ್‌ ವಿತರಿಸುವ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಲು ನಿರಾಕರಿಸಿದೆ.

ಈ ಹಂತದಲ್ಲಿ ಚುನಾವಣ ಬಾಂಡ್‌ನ‌ಲ್ಲಿ ಮಧ್ಯ ಪ್ರವೇಶಿಸಬಾರದು ಮತ್ತು ಚುನಾವಣೆ ಅನಂತರವೇ ಈ ಎಲೆಕ್ಟೋರಲ್‌ ಬಾಂಡ್‌ ವ್ಯವಸ್ಥೆ ಉಪಯುಕ್ತವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸ ಬೇಕು ಎಂಬ ಕೇಂದ್ರ ಸರಕಾರದ ಮನವಿಯನ್ನು ಕೋರ್ಟ್‌ ತಳ್ಳಿಹಾಕಿದೆ.

ಆದಾಯ ತೆರಿಗೆ, ಚುನಾವಣೆ ಮತ್ತು ಬ್ಯಾಂಕಿಂಗ್‌ ಕಾನೂನುಗಳಲ್ಲಿ ಮಾಡಿದ ಕಾನೂನು ಬದಲಾವಣೆಯನ್ನು ಪರಿಶೀಲಿಸುತ್ತೇವೆ. ರಾಜಕೀಯ ಪಕ್ಷಗಳ ಪರ ಈ ಬಾಂಡ್‌ ಕಾರ್ಯ ನಿರ್ವಹಿಸದಂತೆ ತಡೆಯುತ್ತೇವೆ ಎಂದು ಕೋರ್ಟ್‌ ಹೇಳಿದೆ.

ಅಂತಿಮ ತೀರ್ಪಿಗೆ ಕಾಯುತ್ತೇವೆ: ಬಿಜೆಪಿ
ಸುಪ್ರೀಂ ಕೋರ್ಟ್‌ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ವಾದವನ್ನು ನಾವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಈ ಸಂಬಂಧ ಅಂತಿಮ ತೀರ್ಪಿಗಾಗಿ ನಾವು ಎದುರು ನೋಡುತ್ತೇವೆ ಎಂದು ಬಿಜೆಪಿ ವಕ್ತಾರ ನಳಿನ್‌ ಕೊಹ್ಲಿ ಹೇಳಿದ್ದಾರೆ.

Advertisement

ತೀರ್ಪು ಸ್ವಾಗತಿಸಿದ ಕಾಂಗ್ರೆಸ್‌
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ರಾಜಕೀಯ ಹಣಕಾಸು ಮತ್ತು ಆಡಳಿತದಲ್ಲಿ ನಾವು ಎಂದಿಗೂ ಪಾರದರ್ಶಕತೆಯನ್ನು ಕಾಯ್ದುಕೊಂಡಿದ್ದೇವೆ. ಆದರೆ, ವ್ಯವಸ್ಥೆ ಯಲ್ಲಿ ಪಾರದರ್ಶಕತೆ ಮೂಡಿಸುತ್ತೇವೆ ಎಂದು ಹೇಳಿಕೊಂಡ ಬಿಜೆಪಿ ಈ ನಿಟ್ಟಿನಲ್ಲಿ ಏನೂ ಮಾಡಿಲ್ಲ. ಈಗ ಸುಪ್ರೀಂ ಕೋರ್ಟ್‌ ನೀಡಿರುವ ಈ ತೀರ್ಪಿನಿಂದಾಗಿ ಬಿಜೆಪಿ ಮತ್ತು ಆ ಪಕ್ಷದ ಸೂಟುಬೂಟಿನ ಗೆಳೆಯರ ನಡುವಿನ ನಂಟು ಬಯಲಾಗಲಿದೆ ಎಂದು ಟೀಕಾಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next