Advertisement
ತಪಾಸಣೆಯ ಪ್ರಾಮುಖ್ಯ
Related Articles
Advertisement
ಯಕೃತ್ ಕ್ಯಾನ್ಸರ್‌ನ ಶೀಘ್ರ ಪತ್ತೆಯಿಂದ ಹಲವಾರು ಪ್ರಯೋಜನಗಳಿವೆ. ಯಕೃತ್ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಾಗ ಹೆಚ್ಚು ಚಿಕಿತ್ಸೆಯ ಆಯ್ಕೆಗಳು ಲಭ್ಯವಿರುತ್ತವೆ ಮತ್ತು ಈ ಚಿಕಿತ್ಸೆಗಳು ಪರಿಣಾಮಕಾರಿಯಾಗುವ ಅವಕಾಶವೂ ಹೆಚ್ಚು ಇರುತ್ತದೆ. ಆರಂಭಿಕ ಹಂತದಲ್ಲಿರುವ ಯಕೃತ್ ಕ್ಯಾನ್ಸರನ್ನು ಗುಣಪಡಿಸುವ ಗುರಿಯೊಂದಿಗೆ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆದುಹಾಕುವುದು, ಯಕೃತ್ ಕಸಿ ಅಥವಾ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ (ಆರ್‌ಎಫ್ಎ)ಯಂತಹ ರೋಗಬಾಧಿತ ಪ್ರದೇಶದ ಸ್ಥಳೀಯ ನಾಶನ ತಂತ್ರಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ.
ಉದಾಹರಣೆಗೆ, ಯಕೃತ್ ಕಸಿಯಿಂದ ಗಡ್ಡೆಯನ್ನು ತೆಗೆದುಹಾಕುವುದಷ್ಟೇ ಅಲ್ಲದೆ ಅಂತರ್ಗತ ಯಕೃತ್ ಕಾಯಿಲೆಯನ್ನೂ ನಿವಾರಿಸುವುದಕ್ಕೆ ಸಾಧ್ಯವಿದ್ದು, ಆ ಮೂಲಕ ಯಕೃತ್ ಕಸಿ ಚಿಕಿತ್ಸೆಗೆ ಜಾಗರೂಕವಾಗಿ ಆಯ್ದುಕೊಳ್ಳಲಾಗಿರುವ ರೋಗಿಗಳಿಗೆ ದೀರ್ಘಕಾಲ ಬದುಕುಳಿಯುವ ಅವಕಾಶವನ್ನು ಒದಗಿಸಬಹುದಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಮುಂದುವರಿದ ಹಂತಕ್ಕೆ ತಲುಪಿರುವ ಯಕೃತ್ ಕ್ಯಾನ್ಸರ್‌ಗೆ ಚಿಕಿತ್ಸೆಯ ಆಯ್ಕೆಗಳು ಸಾಮಾನ್ಯವಾಗಿ ಶಮನಕಾರಿ ಆರೈಕೆಗಷ್ಟೇ ಸೀಮಿತವಾಗಿದ್ದು, ರೋಗವನ್ನು ಗುಣಪಡಿಸುವುದಕ್ಕಿಂತ ರೋಗಿಯ ಸಾವನ್ನು ಮುಂದೂಡುವುದು ಹಾಗೂ ರೋಗಲಕ್ಷಣಗಳು ಮತ್ತು ನೋವನ್ನು ನಿಭಾಯಿಸುವುದು ಗುರಿಯಾಗಿರುತ್ತದೆ.
ತಪಾಸಣೆ ಮತ್ತು ರೋಗಪತ್ತೆಯ ಸವಾಲುಗಳು
ಯಕೃತ್ ಕ್ಯಾನ್ಸರ್ ತಪಾಸಣೆಯು ಬಹಳ ಮುಖ್ಯವಾಗಿದ್ದರೂ ಇದರಲ್ಲಿ ಸವಾಲುಗಳು ಇದ್ದೇ ಇವೆ. ಇಲ್ಲಿ ಒಂದು ಮುಖ್ಯ ವಿಷಯ ಎಂದರೆ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳದೆ ಇರುವುದು. ಯಕೃತ್ ಸಿರೋಸಿಸ್‌ಗೆ ತುತ್ತಾಗಿರುವವರ ಸಹಿತ ಯಕೃತ್ ಕ್ಯಾನ್ಸರ್‌ಗೆ ತುತ್ತಾಗಬಲ್ಲ ಅಪಾಯ ಹೆಚ್ಚು ಇರುವ ಬಹುತೇಕ ಜನರು ತಿಳಿವಳಿಕೆಯ ಕೊರತೆ, ಆರೋಗ್ಯ ಸೇವಾ ಸೌಲಭ್ಯದ ಅಲಭ್ಯತೆ ಅಥವಾ ಫಾಲೊಅಪ್ ಭೇಟಿಯಿಂದ ತಪ್ಪಿಸಿಕೊಳ್ಳುವಂತಹ ವಿಷಯಗಳಿಂದಾಗಿ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದಿಲ್ಲ. ಇದರಿಂದ ರೋಗವನ್ನು ಆರಂಭಿಕ ಹಂತಗಳಲ್ಲಿಯೇ ಪತ್ತೆಹಚ್ಚುವ ಸುವರ್ಣಾವಕಾಶ ತಪ್ಪಿಹೋಗುತ್ತದೆ.
ಅಲ್ಲದೆ, ಯಕೃತ್ ಕ್ಯಾನ್ಸರನ್ನು ಇನ್ನಷ್ಟು ನಿಖರವಾಗಿ ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವ ಬಯೋಮಾರ್ಕರ್‌ಗಳು ಮತ್ತು ಉನ್ನತೀಕರಿಸಿದ ಚಿತ್ರಣ ತಂತ್ರಜ್ಞಾನಗಳ ಅಗತ್ಯವಿದೆ. ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆಯಾದರೂ ಅದರ ಫಲಿತಾಂಶವು ಅದನ್ನು ನಿರ್ವಹಿಸುವ ಆಪರೇಟರ್ ನ ಪರಿಣತಿಯನ್ನು ಅವಲಂಬಿಸಿದ್ದು, ಸಣ್ಣ ಗಾತ್ರದ ಗಡ್ಡೆಗಳು ಗಮನದಿಂದ ತಪ್ಪಿಹೋಗುವ ಸಾಧ್ಯತೆಗಳು ಇರುತ್ತವೆ. ಅತ್ಯಾಧುನಿಕ ಚಿತ್ರಣ ತಂತ್ರಜ್ಞಾನಗಳಾದ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ಹೆಚ್ಚು ಸೂಕ್ಷ್ಮಸಂವೇದಿಯಾಗಿದ್ದರೂ ದುಬಾರಿ ಮತ್ತು ಎಲ್ಲೆಡೆಯೂ ಲಭ್ಯವಿರುವುದಿಲ್ಲ.
ವಿವಿಧ ಪ್ರದೇಶಗಳು ಮತ್ತು ಆರೋಗ್ಯ ಸೇವಾ ವ್ಯವಸ್ಥೆಗಳಲ್ಲಿ ತಪಾಸಣೆಯ ಮಾರ್ಗದರ್ಶಿ ಸೂತ್ರಗಳಲ್ಲಿ ವ್ಯತ್ಯಯ ಇರುವುದು ಇನ್ನೊಂದು ಸವಾಲಾಗಿದೆ. ಕೆಲವು ಮಾರ್ಗದರ್ಶಿ ಸೂತ್ರಗಳು ಅಪಾಯ ಹೆಚ್ಚು ಇರುವ ಜನರಿಗೆ ಪ್ರತೀ ಆರು ತಿಂಗಳಿಗೆ ಒಮ್ಮೆ ತಪಾಸಣೆ ಮಾಡಲು ಶಿಫಾರಸು ಮಾಡುತ್ತವೆ, ಇದರ ಪಾಲನೆ ಸರಿಯಾಗಿ ನಡೆಯುವುದಿಲ್ಲ. ಅಲ್ಲದೆ, ಕೆಲವು ಸಮುದಾಯಗಳಲ್ಲಿ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರು ಆ ಕಾರಣಕ್ಕಾಗಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹಿಂದುಳಿಯಬಹುದು.
ಕೊನೆಯದಾಗಿ
ಒಟ್ಟಾರೆಯಾಗಿ ಹೇಳಬೇಕೆಂದರೆ, ಯಕೃತ್ ಕಾಯಿಲೆಯನ್ನು ಆದಷ್ಟು ಬೇಗನೆ ಪತ್ತೆಹಚ್ಚು ವುದು ಮತ್ತು ಚಿಕಿತ್ಸೆಗೆ ಒಳಪಡಿಸುವುದು ವಿಶೇಷವಾಗಿ ಹೆಚ್ಚು ಅಪಾಯ ಹೊಂದಿರುವ ವರಲ್ಲಿ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುವುದಕ್ಕೆ ನಿರ್ಣಾಯಕವಾಗಿವೆ. ಆರೋಗ್ಯ ಸೇವಾ ಲಭ್ಯತೆ, ತಿಳಿವಳಿಕೆ ಮತ್ತು ತಾಂತ್ರಿಕ ಮಿತಿಗಳಂತಹ ಸವಾಲುಗಳು ಇದ್ದರೂ ಶೀಘ್ರ ರೋಗಪತ್ತೆ ಮತ್ತು ಆದಷ್ಟು ಬೇಗನೆ ಚಿಕಿತ್ಸೆ ಒದಗಿಸುವುದರಿಂದ ಬಹಳ ಪ್ರಯೋಜನ ಇದೆ ಎಂಬುದನ್ನು ಅಲ್ಲಗಳೆಯಲಾಗದು.
ಯಕೃತ್ ಕ್ಯಾನ್ಸರನ್ನು ಅದರ ಆರಂಭಿಕ, ಚಿಕಿತ್ಸೆ ನೀಡಬಹುದಾದ ಹಂತದಲ್ಲಿಯೇ ಪತ್ತೆ ಹಚ್ಚುವ ಮೂಲಕ ರೋಗ ತಪಾಸಣೆಯು ಈ ಕ್ಯಾನ್ಸರ್ ಪೀಡಿತರು ಬದುಕುಳಿಯುವ ಸಾಧ್ಯತೆ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಬಲ್ಲುದು. ತಪಾಸಣೆ ಕಾರ್ಯಕ್ರಮಗಳನ್ನು ವೃದ್ಧಿಸುವುದು, ಹೆಚ್ಚು ಅಪಾಯ ಹೊಂದಿರುವ ಸಮುದಾಯಗಳಲ್ಲಿ ತಿಳಿವಳಿಕೆಯನ್ನು ಹೆಚ್ಚಿಸವುದು ಮತ್ತು ಹೆಚ್ಚು ಸೂಕ್ಷ್ಮ ಸಂವೇದಿಯಾಗಿರುವ ರೋಗ ತಪಾಸಣೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶ ಚೆನ್ನಾಗಿರುವುದಕ್ಕೆ ನಿರ್ಣಾಯಕ ಹೆಜ್ಜೆಗಳಾಗಿವೆ.
-ಡಾ| ಹರೀಶ್ ಇ.
ಸರ್ಜಿಕಲ್ ಆಂಕಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)