ಹುಬ್ಬಳ್ಳಿ: ದೇಶಪಾಂಡೆ ಪ್ರತಿಷ್ಠಾನದ ದೇಶಪಾಂಡೆ ಎಜ್ಯುಕೇಶನ್ ಟ್ರಸ್ಟ್ (ಡಿಇಟಿ)ಮೊರಾರ್ಜಿ ಶಾಲೆಗಳ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಬೋಧನೆ ಪ್ರಯೋಗ ಕೈಗೊಂಡಿದ್ದು, ವಾರದ ಐದು ದಿನ ವಿವಿಧ ವಿಷಯಗಳನ್ನು ಬೋಧಿಸಲಾಗುತ್ತಿದ್ದು,ಈ ಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ನಡೆಯುತ್ತಿಲ್ಲವಾಗಿವೆ. ವಿವಿಧ ಶಾಲೆಗಳು ಆನ್ ಲೈನ್ ಮೂಲಕ ಬೋಧನೆ ಆರಂಭಿಸಿವೆ. ವಿವಿಧಗ್ರಾಮಗಳಲ್ಲಿ ಇರುವ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಇಂತಹ ಸೌಲಭ್ಯ ದೊರೆತಿರಲಿಲ್ಲ. ಮೊರಾರ್ಜಿ ಶಾಲೆ ಮಕ್ಕಳಿಗೆ ಬೋಧನೆ ನಿಟ್ಟಿನಲ್ಲಿ ಡಿಇಟಿ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಡಿಇಟಿಯ ಐವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಗಳಿಗೆ ಪೂರಕವಾಗಿ ಬೋಧಿಸುತ್ತಿದ್ದು, ಪ್ರತಿ ದಿನವೂ ಒಂದು ತಾಸು ಬೋಧಿಸಲಾಗುತ್ತಿದೆ.
400 ವಿದ್ಯಾರ್ಥಿಗಳಿಗೆ ಬೋಧನೆ: ದೇಶಪಾಂಡೆ ಎಜ್ಯುಕೇಶನ್ ಟ್ರಸ್ಟ್ ಧಾರವಾಡ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿ ಯೊಂದಿಗೆ ಆನ್‌ಲೈನ್ ಮೂಲಕ ಬೋಧನೆಗೆ ಮುಂದಾಗಿದೆ. ಸುಮಾರು 400 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳ ಆನ್‌ಲೈನ್ ಬೋಧನೆ, ಸ್ಕಿಲ್ ಇನ್ ವಿಲೇಜ್ ಯೋಜನೆ ಇನ್ನಿತರ ಬಳಕೆಗೆ ಝೂಮ್ ಆ್ಯಪ್ ಬಳಕೆ ಹಿನ್ನೆಲೆಯಲ್ಲಿ ದೇಶಪಾಂಡೆ ಪ್ರತಿಷ್ಠಾನ ಗೋಕುಲ ರಸ್ತೆಯಲ್ಲಿನ ದೇಶಪಾಂಡೆ ಎಜ್ಯುಕೇಶನ್ ಟ್ರಸ್ಟ್ ಕಟ್ಟಡದಲ್ಲಿಅತ್ಯಾಧುನಿಕ ಸ್ಟುಡಿಯೋ ಆರಂಭಿಸಿದ್ದು, ಅದರ ಮೂಲಕವೇ ಬೋಧನಾ ಕಾರ್ಯ ಕೈಗೊಳ್ಳಲಾಗುತ್ತಿದೆ.ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಜತೆಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳುವ, ಸಂದೇಹಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲೂ ಅವಕಾಶ ನೀಡಲಾಗಿದೆ. ಜತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ, ಚಟುವಟಿಕೆ ಆಧಾರಿತ ಕಲಿಕೆ, ಮೌಲ್ಯಾಂಕನ ಕೈಗೊಳ್ಳಲಾಗುತ್ತಿದೆ. ಸೋಮವಾರ ಕನ್ನಡ ವಿಷಯ ಬೋಧಿಸಲಾಗುತ್ತಿದೆ. ಮಂಗಳವಾರ ಪರಿಸರ ವಿಜ್ಞಾನ, ಬುಧವಾರ ಗಣಿತ, ಗುರುವಾರ ಇಂಗ್ಲಿಷ್, ಶುಕ್ರವಾರ ಸಾಮಾನ್ಯ ಜ್ಞಾನ ಕುರಿತಾಗಿ ಬೋಧಿಸಲಾಗುತ್ತಿದೆ. ಪ್ರತಿ ದಿನ ಆಯಾ ವಿಷಯದ ಶಿಕ್ಷಕರು ನಿಗದಿಯಾದ ದಿನದಂದು ಬೆಳಿಗ್ಗೆ 11:00ರಿಂದ 12:00 ಗಂಟೆವರೆಗೆ ಬೋಧಿಸುತ್ತಿದ್ದಾರೆ.
ದೇಶಪಾಂಡೆ ಎಜ್ಯುಕೇಶನ್ ಟ್ರಸ್ಟ್‌ನ ಸ್ಟುಡಿಯೋದಿಂದ ಶಿಕ್ಷಕರು ಕೈಗೊಳ್ಳುವ ಬೋಧನೆ ಶಾಲೆಗಳಲ್ಲಿ ನಡೆಯುವ ಬೋಧನೆಯಂತೆಯೇ ಇರುತ್ತದೆ. ಶಿಕ್ಷಕರು ಬೋರ್ಡ್ ಮೇಲೆ ಬರೆ ಯುವ ಮೂಲಕ ವಿಷಯ ಮನನ ಕಾರ್ಯ ಮಾಡುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವೀಕ್ಷಿಸಬಹುದಾಗಿದೆ.
ಧಾರವಾಡ ತಾಲೂಕಿನಲ್ಲಿ ಕೈಗೊಳ್ಳಲಾದ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳಿಗೆ ಬೋಧನೆ ಪ್ರಯೋಗಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ. ಇತರೆಕಡೆಯ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳು,ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಯಸಿದರೆಅಲ್ಲಿಗೂ ಬೋಧನೆ ಸೇವೆ ಒದಗಿಸಲು ದೇಶಪಾಂಡೆ ಎಜ್ಯುಕೇಶನ್ ಟ್ರಸ್ಟ್ ಸಿದ್ಧವಾಗಿದೆ. ನಾವು ಕೈಗೊಳ್ಳುವ ಆನ್‌ಲೈನ್ ಶಿಕ್ಷಣಕ್ಕೆ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳು ಹೊಂದಿ ಕೊಂಡಿದ್ದು, ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕನ್ನಡ-ಆಂಗ್ಲ ಭಾಷೆಗಳ ವ್ಯಾಕರಣ ಮನನ ಮಾಡಲಾಗುತ್ತಿದೆ. ಬೋಧಿಸುವ ವಿಷಯದ ಮೇಲೆ ಏನಾದರೂ ಸಂಶಯ ಇದ್ದರೆ, ಪ್ರಶ್ನೆಗಳಿದ್ದರೆ ವಿದ್ಯಾರ್ಥಿಗಳು ಕೇಳುತ್ತಿದ್ದು ಅವುಗಳನ್ನು ಪರಿಹರಿಸಲಾಗುತ್ತಿದೆ ಎಂಬುದು ಶಿಕ್ಷಕಿಯರಾದ ಸಕ್ಕುಬಾಯಿ ಜೆ. ಹಾಗೂ ಅಫ್ಶಾನ್ ಖಾಜಿ ಅವರ ಅನಿಸಿಕೆ.