ಮಾಗಡಿ: ತಾಲೂಕಿನ ನಾರಸಂದ್ರ ಗ್ರಾಪಂನಲ್ಲಿ ಖಾಸಗಿ ಕಂಪನಿಯೊಂದು ಅಕ್ರಮ ವಿದ್ಯುತ್ ಕಂಬ ತಯಾರಿಕೆ ಘಟಕ ಸ್ಥಾಪನೆಯಿಂದ ರೈತರ ಬೆಳೆ ನಾಶವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪಾರದರ್ಶಕವಾಗಿ ತನಿಖೆ ನಡೆಸಬೇಕು. ರೈತರಿಗೆ ಆಗುವ ಅನ್ಯಾಯವನ್ನು ಸರಿಪಡಿಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ ಹಾಗೂ ರೈತರು ಅಕ್ರಮ ಘಟಕ ಮುಚ್ಚುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ನಾರಸಂದ್ರದ ರೈತರ ತೋಟ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಗಡಿ ತಾಲೂಕಿನ ನಾರಸಂದ್ರ ಸರ್ವೇ ನಂ.200/2ರಲ್ಲಿ ಭೂ ಮಾಲೀಕರಾದ ಪ್ರತಿಭಾ ಶರತ್‌ಗೌಡ ಭೂ ಪರಿವರ್ತನೆ ಮಾಡದೇ 2016ರಿಂದ ಅಕ್ರಮವಾಗಿ ವಿದ್ಯುತ್ ಕಂಬ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ. ವಿದ್ಯುತ್ ಕಂಬ ತಯಾರಿಸುವ ಘಟಕದಿಂದ ಹೊರ ಸೂಸುವ ಸೀಮೆಂಟ್, ಜಲ್ಲಿ ಧೂಳು ರೈತರ ಬೆಳೆಗಳ ಮೇಲೆ ಬೀಳುತ್ತಿದೆ. ರೈತರು ಬೆಳೆದ ರೇಷ್ಮೆ, ಅಡಿಕೆ, ಬಾಳೆ, ತೆಂಗು, ಸೀಬೆ, ಮಾವು ನಾಶವಾಗುತ್ತಿದೆ ಎಂದು ಆರೋಪಿಸಿದರು.
ರೈತರಿಗೆ ಅನ್ಯಾಯ: ವ್ಯವಸಾಯವನ್ನೇ ಬದುಕು ಮಾಡಿಕೊಂಡಿರುವ ರೈತರು, ಬೆಳೆ ಬೆಳೆಯಲಾಗದೆ ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿಗಳು ರೈತರ ಭೂಮಿಗೆ ಭೇಟಿ ನೀಡಿಲ್ಲ. ರೈತರಿಗೆ ಬೆಳೆ ನಷ್ಟದ ಪರಿಹಾರವನ್ನು ಕೊಡಿಸಬೇಕು. ಅಕ್ರಮವಾಗಿ ತೆರೆದಿರುವ ವಿದ್ಯುತ್ ಕಂಬ ತಯಾರಿಕಾ ಘಟಕ ಮತ್ತು ರೈತರ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಮನವಿ ಮಾಡಿದರೂ ಪ್ರಯೋಜನವಿಲ್ಲ: ಪ್ರಗತಿಪರ ರೈತ ಎಂ. ಶ್ರೀನಿವಾಸಮೂರ್ತಿ ಮಾತನಾಡಿ, ಸುಮಾರು 30 ವರ್ಷಗಳಿಂದಲೂ ನಾವು ರೇಷ್ಮೆ ಬೆಳೆ ಬೆಳೆಯುತ್ತಿದ್ದೇವೆ. ತಮ್ಮ ಜಮೀನನ ಪಕ್ಕದಲ್ಲೇ ಅಕ್ರಮವಾಗಿ ವಿದ್ಯುತ್ ಕಂಬ ತಯಾರಿಕಾ ಘಟಕ ಸ್ಥಾಪನೆ ಮಾಡಿದ್ದಾರೆ. ಘಟಕದಿಂದ ಹೊರಬರುವ ಸೀಮೆಂಟ್ ಮತ್ತು ಜಲ್ಲಿ ಧೂಳಿನಿಂದ ನಮ್ಮ ಬೆಳೆ ನಷ್ಟವಾಗುತ್ತಿದೆ. ರೇಷ್ಮೆ ಹುಳುಗಳು ಧೂಳಿನಿಂದ ಕೂಡಿರುವ ರೇಷ್ಮೆ ಎಲೆ ತಿಂದು ಹುಳುಗಳು ಸಾಯುತ್ತಿವೆ. ಇದರಿಂದ ತಮಗೆ ರೇಷ್ಮೆ ಬೆಳೆ ನಷ್ಟವಾಗಿದೆ. ವರ್ಷಕ್ಕೆ 6 ಬೆಳೆಗಳನ್ನು ತೆಗೆಯುತ್ತಿದ್ದೇವು ಲಕ್ಷಾಂತರ ನಷ್ಟವಾಗಿದೆ. ಧೂಳು ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ. ನಮ್ಮನ್ನೇ ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ಅಕ್ರಮವಾಗಿ ವಿದ್ಯುತ್ ಕಂಬ ತಯಾರಿಸುವ ಘಟಕವನ್ನು ಸ್ಥಗಿತಗೊಳಿಸಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಯಾವುದೇ ಭೂ ಪರಿವರ್ತನೆ ಮಾಡಿಲ್ಲ: ನಾರಸಂದ್ರ ಗ್ರಾಪಂ ಪಿಡಿಒ ನಂದಕುಮಾರ್ ಮಾತನಾಡಿ, ನಾರಸಂದ್ರ ಗ್ರಾಮದ ಸರ್ವೇ ನಂ.200/2ರ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಭೂ ಪರಿವರ್ತನೆ ಮಾಡದೇ ವಿದ್ಯುತ್ ಕಂಬ ತಯಾರಿಕ ಘಟಕ ಸ್ಥಾಪನೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಖಾತೆದಾರರಾದ ಪ್ರತಿಭಾ ಶರತ್‌ಗೌಡಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಂಚಾಯ್ತಿಯಿಂದ 2016ರಲ್ಲೇ ಎನ್‌ಒಸಿ ಮತ್ತು ಪರವಾನಗಿ ಪಡೆದಿದ್ದಾರೆ. ಪ್ರತಿವರ್ಷ ಗ್ರಾಪಂಗೆ 65 ಸಾವಿರ ರೂ. ತೆರಿಗೆ ಕಟ್ಟಿದ್ದಾರೆ. ಪ್ರಸ್ತುತ ವರ್ಷದಲ್ಲಿ 75 ಸಾವಿರ ರೂ. ಪಂಚಾಯ್ತಿ ಪಡೆಯಲಾಗಿದೆ ಎಂದರು.
ಘಟಕದಿಂದ ತೋಟದ ಬೆಳೆ ನಷ್ಟ: ಘಟಕದ ಪಕ್ಕದ ತೋಟದ ರೈತ ಎಂ.ಶ್ರೀನಿವಾಸಮೂರ್ತಿ ಅವರು ಘಟಕದಿಂದ ತೋಟದ ಬೆಳೆ ನಷ್ಟವಾಗುತ್ತಿದೆ. ಘಟಕ ರದ್ದುಪಡಿಸುವಂತೆ ಅರ್ಜಿ ಕೊಟ್ಟಿದ್ದಾರೆ. ಘಟಕಕ್ಕೆ ಪೂರೈಕೆಯಾಗುವ ಸೀಮೆಂಟ್, ಜಲ್ಲಿ ಲಾರಿಗಳ ಸಂಚಾರದಿಂದ ರಸ್ತೆ ಹಾಳುತ್ತಿದೆ. ರೈತರ ಬೆಳೆ ಸಹ ನಷ್ಟವಾಗುತ್ತಿರುವ ಕುರಿತು ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆಯಿಟ್ಟು ಘಟಕ ರದ್ದುಪಡಿಸುವ ಕುರಿತು ಚರ್ಚಿಸಲಾಗುವುದು. ಅನಂತರ ಸಂಬಂಧಪಟ್ಟ ಮೂಲಕ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ದರ್ಶನ್‌ಗೌಡ, ಮಂಜುನಾಥ್, ಲೋಕೇಶ್, ಗೋವಿಂದರಾಜು, ಯಲ್ಲಮ್ಮ, ದೇವಿರಮ್ಮ ಹಾಜರಿದ್ದರು.