Advertisement
ಕೋಟ: ಕೋಡಿ ಗ್ರಾ.ಪಂ. ವ್ಯಾಪ್ತಿಯ ಕೋಡಿ ಕನ್ಯಾಣದಲ್ಲಿ ವಾಸಿಸುವ ಸುಮಾರು 471 ಕುಟುಂಬಗಳು 4 ದಶಕಗಳಿಂದ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೆ ಸಿ.ಆರ್.ಝಡ್. ಮುಂತಾದ ಸಮಸ್ಯೆಗಳಿಂದಾಗಿ ಇವರಿಗೆ ಹಕ್ಕು ಪತ್ರ ಸಿಗುತ್ತಿಲ್ಲ ಮತ್ತು ಸರಕಾರದ ವಸತಿ ಯೋಜನೆ, ವಿದ್ಯುತ್, ಶೌಚಾ ಲಯ, ಸಾಲ ಸೌಲಭ್ಯಗಳು ಕಾನೂನಾತ್ಮಕವಾಗಿ ದೊರೆಯುತ್ತಿಲ್ಲ.
ಇಲ್ಲಿನ ಹಲವು ಕುಟುಂಬಗಳು ವಾಸಿಸುತ್ತಿರುವ ಜಾಗಕ್ಕೆ ಸರ್ವೇ ನಂಬರ್ ಇಲ್ಲ ಮತ್ತು ಪೊರಂಬೋಕು, ಸಮುದ್ರ ಎಂದು ನಕ್ಷೆಯಲ್ಲಿ ಉಲ್ಲೇಖಗೊಂಡಿದೆ. ಹೀಗಾಗಿ ಹಕ್ಕುಪತ್ರ ನೀಡಬೇಕಾದರೆ ಈ ಪ್ರದೇಶವನ್ನು ಆ ಶೀರ್ಷಿಕೆಯಿಂದ ವಿರಹಿತಗೊಳಿಸಿ ಹೊಸ ಸರ್ವೇ ನಂಬರ್ ನೀಡಬೇಕಿದೆ. ಈಗಾಗಲೇ ತಹಶೀಲ್ದಾರ್ ನೇತೃತ್ವದಲ್ಲಿ ನೇಮಕಗೊಂಡ ಸಮಿತಿ ಜಿಲ್ಲಾಧಿಕಾರಿಯ ಮಾರ್ಗದರ್ಶನ ಮೇರೆಗೆ ಎಲ್ಲ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿ ವರದಿ ಸಿದ್ಧಪಡಿಸಿದ್ದು ಪೊರಂಬೋಕು ವಿರಹಿತ ಗೊಳಿಸಲು, ಹೊಸ ಸರ್ವೇ ನಂಬರ್ ಸೃಷ್ಟಿಸುವ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿದೆ ಎನ್ನಲಾಗಿದೆ. ಜನಪ್ರತಿನಿಧಿಗಳು ಈ ಕುರಿತು ಮತ್ತಷ್ಟು ಕಾಳಜಿ ವಹಿಸಿ ಸಂತ್ರಸ್ತ ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ ಕೈ ಸೇರುವಂತೆ ಮಾಡಬೇಕಿದೆ. ಕೃಷಿಭೂಮಿಗೆ ಉಪ್ಪು ನೀರು ಲಗ್ಗೆ
ಮೀನುಗಾರಿಕೆ ಹೊರತುಪಡಿಸಿದರೆ ಕೋಡಿಕನ್ಯಾಣದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆ ಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಭತ್ತ, ಶೇಂಗ, ವಿವಿಧ ತರಕಾರಿಗಳನ್ನು ಈ ಭಾಗದಲ್ಲಿ ಬೆಳೆಯಲಾಗುತ್ತದೆ. ಆದರೆ ಇಲ್ಲಿನ ನೂರಾರು ಎಕ್ರೆ ಕೃಷಿಭೂಮಿಗೆ ಪ್ರತೀ ವರ್ಷ ದೊಡ್ಡ ಹೊಳೆಯ ಉಪ್ಪು ನೀರು ಹರಿದು ಬಂದು ಬೆಳೆ ನಾಶವಾಗುತ್ತಿದೆ ಮತ್ತು ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹೊಳೆಗೆ ಉಪ್ಪು ನೀರಿನ ತಡೆಗೋಡೆ ನಿರ್ಮಿಸುವುದರ ಮೂಲಕ ಬೆಳೆ ನಾಶವಾಗುವುದನ್ನು ತಡೆಯಬೇಕು ಎಂದು ಇಲ್ಲಿನ ರೈತರು ಸಾಕಷ್ಟು ಬಾರಿ ಆಡಳಿತ ವ್ಯವಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪೂರಕ ಕ್ರಮ ಇದುವರೆಗೆ ಕೈಗೊಂಡಿಲ್ಲ. ಹಕ್ಕುಪತ್ರ, ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ದೊರೆತಲ್ಲಿ ಇಲ್ಲಿನ ನಿವಾಸಿಗಳು ಒಂದಷ್ಟು ನೆಮ್ಮದಿಯಿಂದ ಬದುಕಬಹುದಾಗಿದೆ.
Related Articles
– ಮೀನುಗಾರಿಕೆ ಜಟ್ಟಿಯಲ್ಲಿ ಹೂಳು ತುಂಬಿರುವುದರಿಂದ ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿಲ್ಲ.
– ಸಮುದ್ರ ತೀರದ ಪ್ರದೇಶಗಳಾಗಿ ರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇದೆ.
– ಕಡಲ್ಕೊರೆತದ ಸಮಸ್ಯೆ ಸಾಕಷ್ಟಿದೆ.
– ಆರೋಗ್ಯ ಸಹಾಯಕರಿಲ್ಲದೆ ಆರೋಗ್ಯ ಉಪಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
Advertisement
ಪರಿಹಾರಕ್ಕೆ ಯತ್ನ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳ ವಿಶೇಷ ಸಭೆ ನಡೆಸಲಾಗಿದ್ದು ಅಗತ್ಯ ದಾಖಲೆಗಳನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಆದಷ್ಟು ಶೀಘ್ರ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದೆ.
-ರಾಜಶೇಖರ್‌ಮೂರ್ತಿ, ತಹಶೀಲ್ದಾರರು ಬ್ರಹ್ಮಾವರ ಗಮನ ಹರಿಸಲಾಗಿದೆ
ಹಕ್ಕುಪತ್ರ ಸಮಸ್ಯೆ ಪರಿಹಾರ ಕೊನೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿಭೂಮಿಗೆ ಉಪ್ಪುನೀರಿನ ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳುವ ಪ್ರಯತ್ನ ಚಾಲ್ತಿಯಲ್ಲಿದೆ.
-ಪ್ರಭಾಕರ ಮೆಂಡನ್, ಅಧ್ಯಕ್ಷರು, ಕೋಡಿ ಗ್ರಾ.ಪಂ. ಹಲವು ಬಾರಿ ಮನವಿ
ಉಪ್ಪು ನೀರಿನ ಸಮಸ್ಯೆಯಿಂದ ಪ್ರತಿವರ್ಷ ನಮ್ಮೂರಿನ ಹಲವು ಎಕ್ರೆ ಬೆಳೆ ನಾಶವಾಗುತ್ತಿದೆ ಹಾಗೂ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪರಿಹಾರ ಸಿಕ್ಕಿಲ್ಲ. ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನಹರಿಸಬೇಕಿದೆ.
-ನಾಗೇಂದ್ರ ನಾವಡ, ಸ್ಥಳೀಯ ರೈತರು -ರಾಜೇಶ ಗಾಣಿಗ ಅಚ್ಲಾಡಿ