ಚನ್ನಪಟ್ಟಣ: ಕಾಡಾನೆಗಳ ಗುಂಪೊಂದು ದಾಳಿ ನಡೆಸಿ, ರೈತರ ಬೆಳೆಗಳನ್ನು ನಾಶಪಡಿಸಿರುವ ಘಟನೆ ತಾಲೂಕಿನ ವಿರುಪಾಕ್ಷಿಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಗ್ರಾಮದ ಲೇಟ್ ನಾಥೇಗೌಡ ಎಂಬುವರ ಪುತ್ರ ಶಿವಲಿಂಗಯ್ಯ, ತಮ್ಮಣ್ಣಗೌಡ ಎಂಬುವರ ಪುತ್ರ ಶ್ರೀನಿವಾಸ್, ತಿಮ್ಮೇಗೌಡ ಎಂಬುವರ ಪುತ್ರ ಗೋವಿಂದೇಗೌಡ ಬೆಳೆದಿದ್ದ ಬಾಳೆತೋಟ, ಮಾವು, ಅಡಿಕೆ, ತೆಂಗನ್ನು ನಾಶಪಡಿಸಿವೆ.
ಸುಮಾರು 7 ಆನೆಗಳಿದ್ದ ಗುಂಪು ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿವೆ ಎನ್ನಲಾಗಿದೆ. ಕೆಲ ದಿನಗಳಲ್ಲಿ ಗೊನೆ ಬಿಡಲಿದ್ದ ಸಾವಿರಾರು ಬಾಳೆ ಗಿಡಗಳನ್ನು ಕಿತ್ತು ತಿಂದು ನಂತರ ತುಳಿದು ನಾಶಪಡಿಸಿವೆ. ಮಾವಿನ ಮರದ ರೆಂಬೆಗಳು ಹಾಗೂ ಮಾವಿನ ಗಿಡಗಳನ್ನು ಬುಡ ಸಹಿತ ಕಿತ್ತಿರುವ ಆನೆಗಳು, ಹತ್ತಾರು ತೆಂಗಿನ ಮರಗಳನ್ನು ಉರುಳಿಸಿವೆ.
ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬಾಳೆ, ಅಡಿಕೆ, ಮಾವು ಫಸಲನ್ನು ಕಾಡಾನೆಗಳ ಗುಂಪು ಈ ರೀತಿ ದಾಳಿ ಮಾಡಿ ಹಾಳು ಮಾಡಿರುವುದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಕಳೆದ ವಾರದಿಂದಲೂ ಈ ಜಾಗದಲ್ಲಿ ಆನೆಗಳ ಕಾಟ ಹೇಳತೀರದ್ದಾಗಿದ್ದು, ರೈತರು ಬೆಳೆದ ಫಸಲನ್ನು ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೇಸಾಯ ರಕ್ಷಣೆ ಜೊತೆಗೆ ಪ್ರಾಣಗಳನ್ನು ಪಣಕ್ಕಿಡಬೇಕಾಗಿದೆ. ದಿನದಿನಕ್ಕೂ ದಾಳಿ ಹೆಚ್ಚಾಗುತ್ತಿರುವುದರಿಂದ ಹತ್ತಾರು ಗ್ರಾಮದ ಜನರು ಮನೆಯಿಂದ ತಮ್ಮ ತೋಟ ತುಡಿಕೆಗಳಿಗೆ ತೆರಳಲು ಭಯ ಪಡುತ್ತಿದ್ದಾರೆ. ಕಾಡಾನೆಗಳು ಸ್ಥಳೀಯ ಅರಣ್ಯ ಪ್ರದೇಶದಲ್ಲಿಯೇ ವಾಸವಿದ್ದು, ರಾತ್ರಿಯ ಸಂದರ್ಭದಲ್ಲಿ ರೀತಿ ದಾಳಿ ಮಾಡುತ್ತಿವೆ ಎಂದಿರುವ ರೈತರು ಅರಣ್ಯ ಇಲಾಖೆಯವರು ಗಮನಹರಿಸಿ ಆನೆಗಳ ಹಾವಳಿಯನ್ನು ನಿಯಂತ್ರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.