Advertisement

ವಿನಾಶದತ್ತ ಬಿದಿರು; ಕಾಣದಾಯಿತು ಕಳಲೆ!

10:02 PM Jul 24, 2019 | mahesh |

ಕಲ್ಲುಗುಡ್ಡೆ: ಮಳೆಗಾಲ ಬಂದರೆ ಸಾಕು ಗ್ರಾಮೀಣ ಭಾಗದ ಜನರು ಪ್ರಕೃತಿಯಲ್ಲಿಯೇ ಸಿಗುವ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ತುಳುನಾಡಿನಲ್ಲಿ ಇದರ ಬಗ್ಗೆ ಆಸಕ್ತಿ ಹೆಚ್ಚು. ಇದರಲ್ಲಿ ಕಣಿಲೆ (ಕಳಲೆ) ಒಂದು. ಆದರೆ ಬಿದಿರಿನ ವಿನಾಶದಿಂದ ಕಳಲೆ ಕಾಣುವುದೇ ವಿರಳವಾಗಿದೆ.

Advertisement

ಹೊಸ ಬಿದಿರಿನ ಮೊಳಕೆಯೇ ಕಳಲೆ. ಕರಾವಳಿ ಭಾಗದಲ್ಲಿ ವರ್ಷಗಳ ಹಿಂದೆ ಯಥೇತ್ಛವಾಗಿ ಬಿದಿರುಗಳು ಕಾಡಿನಲ್ಲಿ ಕಾಣಸಿಗುತ್ತಿದ್ದು, ಹೀಗಾಗಿ ಮಳೆಗಾಲ ಕಾಲಿರಿಸಿದ ಬೆನ್ನಲ್ಲೇ ಕಳಲೆಗಳು ಬೆಳೆಯುತ್ತಿದ್ದು, ಜನರು ಕತ್ತಿ ಹಿಡಿದು ಕಳಲೆಯನ್ನು ಅರಸಿಕೊಂಡು ತೆರಳುತ್ತಿದ್ದರು. ಆದರೆ ಈಗ ಬಿದಿರು ರಾಜನ್‌ (ಹೂವು) ಬಿಟ್ಟು, ಒಣಗಿ ಸಾಯುತ್ತಿದ್ದು, ಕಳಲೆಗಳೂ ಸಿಗುತ್ತಿಲ್ಲ.

ಆಹಾರ ಪದಾರ್ಥ
ಬಿದಿರು ಬೆಳೆದ ನಾಲ್ಕೆ çದು ವರ್ಷಗಳ ಬಳಿಕ ಅದರ ಬುಡದ ಬೇರುಗಳಿಂದ ಹೊಸ ಮೊಳಕೆಗಳು ಹುಟ್ಟುತ್ತವೆ. ಅದುವೇ ಕಳಲೆ. ಅವುಗಳನ್ನು ಕತ್ತರಿಸಿ ಮನೆಗೆ ತಂದು ಅದರ ಎಳೆಯ ಭಾಗವನ್ನು ಚಿಕ್ಕದಾಗಿ ಕತ್ತರಿಸಿ ಬಳಿಕ ನೀರಿನಲ್ಲಿ ನೆನೆಯಲು ಹಾಕಿ ದಿನ ಕಳೆದ ಬಳಿಕ ತೆಗೆದು ಶುದ್ಧ ನೀರಿನಿಂದ ತೊಳೆದು ಬಳಿಕ ಸಾರು, ಪಲ್ಯ ಮಾಡಲಾಗುತ್ತದೆ. ತುಳುವಿನ ಆಟಿ ತಿಂಗಳಲ್ಲಿ ಕಳಲೆ ಹೆಚ್ಚಾಗಿ ಕಂಡುಬರುತ್ತಿದ್ದು, ಆಟಿ ವಿಶೇಷ ಖಾದ್ಯಗಳಲ್ಲಿ ಕಳಲೆಯ ಪದಾರ್ಥವೂ ಒಂದು. ಕಾಡಿನ ಬದಿಯ ಬಿದಿರು ಮೆಳೆಗಳಲ್ಲಿ ಈ ಹಿಂದೆ ಯಥೇತ್ಛವಾಗಿ ಸಿಗುತ್ತಿದ್ದ ಕಳಲೆಗಳು, ಈಗ ನಗರವಾಸಿಗಳ ಜತೆಗೆ ಹಳ್ಳಿಗರಿಗೂ ವಿರಳವೇ.

ಆರೋಗ್ಯ ವರ್ಧಕ
ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಒಳಗೊಂಡಿರುವ ಕಳಲೆಯಲ್ಲಿ ನಾರಿನಲ್ಲಿ ಪಿಷ್ಟೇತರ ಕಾಬೋì ಹೈಡ್ರೇಟ್‌ಗಳು ಮಿತವಾದ ಪ್ರಮಾಣದಲ್ಲಿರುತ್ತವೆ. ಮಲಬದ್ಧತೆಯನ್ನು ನಿವಾರಿಸುವಲ್ಲಿ ನೆರವಾಗುತ್ತವೆ. ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸಲೂ ಸಹಾಯಕ. ಇದರ ವಿಟಾಮಿನ್‌ ಅಂಶಗಳು ಶರೀರದ ಜೀವಕೋಶಗಳಲ್ಲಿ ಹಾರ್ಮೋನ್‌ಗಳ ಉತ್ಪತ್ತಿ ಮತ್ತು ಪಚನ ಕ್ರಿಯೆಗಳಿಗೆ ಅಗತ್ಯವಾಗಿವೆ. ಮಳೆಗಾಲದಲ್ಲಿ ಶೀತದಿಂದ ರಕ್ಷಿಸಲೂ ಪೂರಕವಾಗುತ್ತದೆ.

ಸಾಂಬಾರು, ಪಲ್ಯ
ವರ್ಷದಲ್ಲಿ ಕನಿಷ್ಠ ಒಂದು ಬಾರಿ ಕಳಲೆಯ ಪದಾರ್ಥ ತಿನ್ನಬೇಕು. ಪಲ್ಯ, ಸಾಂಬಾರು, ಉಪ್ಪಿನಕಾಯಿ ಇತ್ಯಾದಿಗಳಲ್ಲೂ ಕಳಲೆ ಬಳಸಿದರೆ ರುಚಿ ಹೆಚ್ಚುತ್ತದೆ. ಇವುಗಳನ್ನು ತೆಳುವಾಗಿ ಹೆಚ್ಚಿ ಉಪ್ಪಿನಲ್ಲಿ ಹಾಕಿಟ್ಟರೆ ಬೇಕೆಂದಾಗ ಬಳಸಬಹುದು.

Advertisement

ಬಿದಿರು ನಾಶ
ಸುಮಾರು 60 ವರ್ಷಗಳಿಗೆ ಒಂದು ಸಲ ಬಿದಿರು ಹೂವು ಬಿಟ್ಟು ಇಡೀ ಮೆಳೆಯೇ ಸಾಯುತ್ತದೆ.
ಈಗ ಮತ್ತೆ ಬಿದಿರು ಮೆಳೆಗಳು ಬೆಳೆಯಲು ಕೆಲವು ವರ್ಷಗಳೇ ಬೇಕು. ಹೀಗಾಗಿ, ಸದ್ಯಕ್ಕೆ ಕಳಲೆಯೂ ಸಿಗುವುದು ಕಷ್ಟ ಎನ್ನುತ್ತಾರೆ ಹಳ್ಳಿಗರು.

 ಬಿದಿರು ಬೆಳೆಸುವ ಅನಿವಾರ್ಯತೆ
ಬಿದಿರು ಮೆಳೆಗಳು ರಾಜನ್‌ (ಹೂವು) ಬಿಟ್ಟು ನಾಶವಾಗಿರುವ ಕಾರಣ, ಈ ಸಲ ಕಳಲೆಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಪ್ರಕೃತಿಯಲ್ಲಿ ನಾವು ಬಿದಿರು ಮೆಳೆಗಳನ್ನು ಬೆಳೆಸುವುದು ಅನಿವಾರ್ಯ. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
– ಉಮೇಶ್‌ ಶೆಟ್ಟಿ ಕಲ್ಲುಗುಡ್ಡೆ, ನೂಜಿಬಾಳ್ತಿಲ

-  ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next