ಗಂಗಾವತಿ: ಇತಿಹಾಸ ಪ್ರಸಿದ್ಧ ಕುಮ್ಮಟದುರ್ಗ ಕೋಟೆ ವ್ಯಾಪ್ತಿಯಲ್ಲಿ ಕೃಷಿ ಮಾಡಲು ಕೆಲ ಕೃಷಿಕರು ಇಲ್ಲಿದ್ದ ಕುದುರೆ ಕಲ್ಲು ಸ್ಮಾರಕಗಳನ್ನು ಕಿತ್ತು ಹಾಕಿ ನಾಶ ಮಾಡಿದ್ದಾರೆ. ಕುಮ್ಮಟ ದುರ್ಗದ ಕೋಟೆಗಳನ್ನು ಸಂರಕ್ಷಣೆ ಮಾಡಿದ ನೆನಪಿಗಾಗಿ ಕುದುರೆ ಕಲ್ಲು ಸ್ಮಾರಕವನ್ನು ಗಂಡುಗಲಿ ಕುಮಾರರಾಮ ನಿರ್ಮಿಸಿದ್ದ ಎನ್ನಲಾಗಿದೆ. ಇದೀಗ ಕೋಟೆ ಸುತ್ತ ಕೆಲವರು ಕೃಷಿ ಮಾಡುತ್ತಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಬೆಳೆ ತೆಗೆಯುತ್ತಾರೆ. ಕಂಪಿಲರಾಯನ ಮನೆ ದೇವರಾದ ಜಟ್ಟಂಗಿ ರಾಮೇಶ್ವರ ದೇಗುಲ, ಜಲಭಾವಿ, ಕೋಟೆ ಕೊತ್ತಲ ಹೀಗೆ ಹಲವಾರು ಸ್ಮಾರಕಗಳಿದ್ದು ಇವುಗಳ ಸಂರಕ್ಷಣೆ ಮಾಡುವಲ್ಲಿ ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತನಿರ್ಲಕ್ಷ್ಯವಹಿಸಿದೆ.
ಕುಮ್ಮಟ ದುರ್ಗ ಎರಡು ಗುಡ್ಡಗಳ ನಡುವೆ ಸುರಕ್ಷಿತವಾದ ಪ್ರದೇಶವಾಗಿದೆ. ದೆಹಲಿಯ ಸುಲ್ತಾನ್ ಕುಮ್ಮಟ ದುರ್ಗದ ಮೇಲೆ ದಂಡೆತ್ತಿ ಬಂದ ಸಂದರ್ಭದಲ್ಲಿ ಸೈನಿಕರು ಕೋಟೆಗೆ ನುಗ್ಗದಂತೆ ವಿವಿಧ ಗಾತ್ರದ ಕಲ್ಲುಗಳನ್ನು ದಾರಿಯುದ್ಧಕ್ಕೂ ಹುಗಿದ ಮಾಡಿದ ವಿಶಿಷ್ಠ ಪ್ರಯೋಗವೇ ಕುದುರೆ ಕಲ್ಲು ಪ್ರದೇಶವಾಗಿದೆ. ಇಂತಹ ದಾರಿಯನ್ನು ದಾಟಿ ಬರಲು ಸುಲ್ತಾನನ ಸೈನಿಕರಿಗೆ ತಡವಾಗುತ್ತಿತ್ತು. ಕುದುರೆ ಕಲ್ಲು ಯುದ್ಧ ತಾಂತ್ರಿಕತೆ ಪ್ರತೀಕವಾಗಿದೆ. ಕುಮ್ಮಟ ದುರ್ಗದ ಮೇಲೆ ದೆಹಲಿ ಸುಲ್ತಾನರು ದಾಳಿ ಮಾಡಿದ ಸಂದರ್ಭದಲ್ಲಿ ಕಂಪಿಲರಾಯ ಮತ್ತು ಕುಮಾರರಾಮನ ಸೈನಿಕರು ಪ್ರತಿರೋಧ ಒಡ್ಡಿ ಕುಮ್ಮಟದುರ್ಗವನ್ನು ಸಂರಕ್ಷಿಸಿಕೊಂಡರು. ಇಂತಹ ಕುದುರೆ ಕಲ್ಲುಗಳನ್ನು ಕೃಷಿ ಮಾಡುವ ನೆಪದಲ್ಲಿ ಕಿತ್ತು ಬೇರೆಡೆ ಹಾಕಲಾಗಿದೆ.
ಹಿನ್ನೆಲೆ: ಕಂಪಿಲರಾಯನ ಪುತ್ರ ಕುಮಾರರಾಮ ವಿಜಯನಗರಕ್ಕೂ ಮೊದಲು ಕುಮ್ಮಟ ದುರ್ಗವನ್ನು ಆಳ್ವಿಕೆ ಮಾಡಿದ್ದ. ದೆಹಲಿ ಸುಲ್ತಾನರಿಗೆ ದಕ್ಷಿಣ ಭಾರತದಲ್ಲಿ ಮೊದಲಿಗೆ ಸೋಲಿನ ರುಚಿ ತೋರಿಸಿದ ಯುವರಾಜನಾಗಿದ್ದ. ಪರನಾರಿ ಸಹೋದರ ಎಂಬ ಖ್ಯಾತಿಗೆ ಪಾತ್ರನಾಗಿದ್ದ. ರಾಜ್ಯದ ತುಂಬೆಲ್ಲ ಕೆರೆ, ಕಟ್ಟೆ ನಿರ್ಮಿಸಿ ಕೃಷಿಕರಿಗೆ ನೆರವಾಗಿದ್ದ. ದೆಹಲಿ ಸುಲ್ತಾನರ ವಿರುದ್ಧ ಹೊಯ್ಸಳರು ಸೇರಿ ರಕ್ಷಿಣ ಭಾರತದ ರಾಜರನ್ನು ಒಗ್ಗೂಡಿಸಿದವರಲ್ಲಿ ಕುಮಾರರಾಮ ಸಹ ಪ್ರಮುಖ ಪಾತ್ರ ವಹಿಸಿದ್ದರು.
ನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಕುಮ್ಮಟದುರ್ಗದ ಕುದುರೆಕಲ್ಲುಗಳನ್ನು ಕಿತ್ತುಹಾಕಿ ಕೃಷಿ ಮಾಡುತ್ತಿರುವುದು ಖಂಡನೀಯವಾಗಿದೆ. ಕೂಡಲೇ ಜಿಲ್ಲಾಡಳಿತ ಪುರಾತತ್ವ ಇಲಾಖೆ ಸ್ಮಾರಕ ಸಂರಕ್ಷಣೆ ಮಾಡಬೇಕು. ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಲಕ್ಷ ್ಯ ವಹಿಸಿ ನಾಮಫಲಕ ಜೋಡಣೆ ಮಾಡಿ ಕೃಷಿ ಮಾಡುವವರನ್ನು ಬಿಡಿಸಬೇಕು. ಇಲ್ಲಿಗೆ ಹೋಗಲು ಮಾರ್ಗ ನಿರ್ಮಿಸಿ ಪ್ರವಾಸೋದ್ಯಮ ಕೇಂದ್ರ ಮಾಡಬೇಕು.
•ಡಾ| ಶರಣಬಸಪ್ಪ ಕೋಲ್ಕಾರ, ಇತಿಹಾಸ ತಜ್ಞ
ಕೆ. ನಿಂಗಜ್ಜ