Advertisement

ನೆರೆ ಸಂತ್ರಸ್ತರಿಗೆ ನಿರ್ಮಿಸಿದ ಮನೆ ಹಾಳು

12:00 PM Oct 15, 2018 | Team Udayavani |

ರಾಯಚೂರು: ಸರ್ಕಾರ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಮುನ್ನ ರಾಯಚೂರು ತಾಲೂಕಿನ ಎಲೆಬಿಚ್ಚಾಲಿಯ ಆಶ್ರಯ ಮನೆಗಳನ್ನೊಮ್ಮೆ ನೋಡಬೇಕು. ಏಕೆಂದರೆ ಪುನರ್ವಸತಿ ಹೇಗಿರಬಾರದು ಎನ್ನುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಮತ್ತೂಂದಿಲ್ಲ!

Advertisement

2009ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ನೂರಾರು ಕುಟುಂಬಗಳು ನೆಲೆ ಕಳೆದುಕೊಂಡವು. ಆ ಸಂತ್ರಸ್ತರಿಗಾಗಿ ಸುಮಾರು 96 ಎಕರೆ ಪ್ರದೇಶದಲ್ಲಿ ಬರೋಬ್ಬರಿ 960 ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳಲ್ಲಿ ಬೆರಳೆಣಿಕೆಯಷ್ಟು ಮನೆಗಳು ಬಿಟ್ಟರೆ ಉಳಿದೆಲ್ಲವೂ ಈಗ ಹಾಳು ಬಿದ್ದಿವೆ.
 
ನೆರೆ ಹೊಡೆತಕ್ಕೆ ನದಿ ಪಾತ್ರದ ಗ್ರಾಮಸ್ಥರು ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದರು. ಅದರಲ್ಲಿ ಎಲೆಬಿಚ್ಚಾಲಿ ಗ್ರಾಮ ಕೂಡ ಒಂದು. ಜನರಿಗೆ ಹೊಸ ಬದುಕು ಕಟ್ಟಿಕೊಡುವ ಉದ್ದೇಶದಿಂದ ಅಂದಿನ ಸಿಎಂ ಯಡಿಯೂರಪ್ಪ ಪುನರ್ವಸತಿ ಕಲ್ಪಿಸಲು ಮುಂದಾಗಿದ್ದರು. ಗ್ರಾಮದ ರೈತರಿಂದಲೇ ಸುಮಾರು 96 ಎಕರೆ ಜಮೀನು ಖರೀದಿಸಿ ಸಿಸ್ಕೋ ಎನ್ನುವ ಸಂಸ್ಥೆ ಮನೆಗಳ ನಿರ್ಮಿಸಿತ್ತು.

ಆದರೆ, ಅಗತ್ಯವಾಗಿ ಬೇಕಾದ ನೀರು, ವಿದ್ಯುತ್‌ ಸೌಲಭ್ಯವನ್ನೇ ಕಲ್ಪಿಸದ ಕಾರಣ ಜನ ಅಲ್ಲಿಗೆ ಹೋಗದೆ ದೂರ ಉಳಿದರು. ಅದರ ಪರಿಣಾಮ ಇಂದು ಆ ಮನೆಗಳೆಲ್ಲ ನಿರುಪಯುಕ್ತವಾಗಿವೆ. ಸಿಸ್ಕೋ ಸಂಸ್ಥೆ ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು. ಜಿಲ್ಲಾಡಳಿತ ವಿದ್ಯುತ್‌ ಲೈನ್‌ ಎಳೆದು ಪರಿವರ್ತಕ ಕೂಡಿಸಿದರೂ ವಿದ್ಯುತ್‌ ಮಾತ್ರ ಹರಿಸಲಿಲ್ಲ. ಇನ್ನು ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಿಲ್ಲ. ಇದರಿಂದ ಜನ ಮೊದಲು ಸೌಲಭ್ಯ ಕಲ್ಪಿಸಿ ನಂತರ ಬರುವುದಾಗಿ ತಿಳಿಸಿದರೂ ಸೌಲಭ್ಯ ಮಾತ್ರ ಕಲ್ಪಿಸಲಿಲ್ಲ. ಆದರೆ, ಅಧಿಕಾರಿಗಳು ಮಾತ್ರ ಹಕ್ಕುಪತ್ರ ಪಡೆಯದಿದ್ದರೆ ಪಡಿತರ ನೀಡುವುದಿಲ್ಲ ಎಂದು ಬೆದರಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ತಮ್ಮ ಹೊಣೆಯಿಂದ ನುಣುಚಿಕೊಂಡಿದ್ದಾರೆ.

ಬಾಗಿಲು ಕಿಟಕಿ ಕಳವು: ಪುನರ್ವಸತಿ ಕೇಂದ್ರದಲ್ಲಿ ಇಂದು ಆಶ್ರಯ ಮನೆಗಳ ಅವಶೇಷಗಳು ಮಾತ್ರ ಉಳಿದಿವೆ. ಏಕೆಂದರೆ ಅದಕ್ಕೆ ಅಳವಡಿಸಿದ ಬಾಗಿಲು, ಕಿಟಕಿ ಸೇರಿ ಇನ್ನಿತರ ವಸ್ತುಗಳನ್ನು ಸುತ್ತಲಿನ ಗ್ರಾಮಸ್ಥರು ಹಂತ ಹಂತವಾಗಿ ಕಳವು ಮಾಡಿದ್ದಾರೆ.

 ವಿದ್ಯುತ್‌ ಪರಿವರ್ತಕಗಳನ್ನು ಕದ್ದು ನೆರೆ ರಾಜ್ಯಗಳಲ್ಲಿ ಮಾರಿಕೊಂಡಿದ್ದಾರೆ ಎಂದು ದೂರುತ್ತಾರೆ ಗ್ರಾಮಸ್ಥರು. ಇನ್ನು ಸಂಪೂರ್ಣ ಜಾಲಿ ಕಂಟಿ ಬೆಳೆದು ನಿಂತಿದೆ. ಕಟ್ಟಡಗಳು ಬಿರುಕು ಬಿಟ್ಟಿದ್ದು, ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಈ ಕಡೆ ತಲೆ ಹಾಕಲು ಕೂಡ ಹೆದರುವಂತಾಗಿದೆ. ಈಗಾಗಲೇ ಭಾಗಶಃ ಮನೆಗಳು ಅವಸಾನ ಸ್ಥಿತಿ ತಲುಪಿವೆ. ಉಳಿದವುಗಳನ್ನಾದರೂ ರಕ್ಷಿಸಿ ಬಳಕೆಗೆ ಮುಕ್ತಗೊಳಿಸಬೇಕಿದೆ.  

Advertisement

ಅವೈಜಾನಿಕ ಕಾಮಗಾರಿ ಮನೆಗಳ ನಿರ್ಮಾಣದ ಹೊಣೆ ಹೊತ್ತ ಸಿಸ್ಕೋ ಸಂಸ್ಥೆ ಏಕ ಮಾದರಿಯಲ್ಲಿ ಚಿಕ್ಕ ಮನೆಗಳನ್ನು ನಿರ್ಮಿಸಿ ಕೈ ತೊಳೆದುಕೊಂಡಿತು. ಎಷ್ಟು ಚಿಕ್ಕದೆಂದರೆ ಇಬ್ಬರಿರುವಲ್ಲಿ ಮತ್ತೂಬ್ಬರು ಬಂದರೆ ಹೊಂದಿಕೊಳ್ಳುವುದು ಕಷ್ಟ ಎನಿಸುವಷ್ಟು. ಪ್ರತಿ ಫಲಾನುಭವಿಗೆ 30/40 ಅಳತೆಯ ನಿವೇಶನ ನೀಡಿ ಅದರಲ್ಲಿ ಅರ್ಧಕ್ಕಿಂತ ಕಡಿಮೆ ಸ್ಥಳದಲ್ಲಿ ಚಿಕ್ಕ ಮನೆ ನಿರ್ಮಿಸಲಾಯಿತು. ಇದರಿಂದ ಹೆಚ್ಚು ಜನರಿರುವ ಕುಟುಂಬಗಳು ವಾಸಿಸಲು ಯೋಗ್ಯವಲ್ಲದಂತಾಗಿದೆ.

ಎಲೆಬಿಚ್ಚಾಲಿ ಗ್ರಾಮದ ಆಶ್ರಯ ಮನೆ ಸಮಸ್ಯೆ ಬಗ್ಗೆ ಹಿಂದೊಮ್ಮೆ ದೂರು ಬಂದಿತ್ತು. ಅಲ್ಲಿ ಸೌಲಭ್ಯ ಕಲ್ಪಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. 
 ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ, ರಾಯಚೂರು

ಮೊದಲು ಸೌಲಭ್ಯ ಕಲ್ಪಿಸಿ ನಂತರ ಹಕ್ಕುಪತ್ರ ಕೊಡುವಂತೆ ಹೇಳಿದರೂ ಬಲವಂತದಿಂದ ನೀಡಲಾಗಿದೆ. ಆಶ್ರಯ ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಜಾಲಿ ಕಂಟಿ ಬೆಳೆದಿದೆ. ಅಕ್ರಮ ತಾಣವಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಅಲ್ಲದೇ, ಜಮೀನು ನೀಡಿದ ರೈತರಿಗೆ ಪರಿಹಾರ ಹಣ ಕಡಿಮೆ ಬಂದಿದು, ಹೆಚ್ಚಿನ ಹಣ ನೀಡಬೇಕು.
 ಎಂ.ನಾಗೇಶ ಸ್ವಾಮಿ, ಎಲೆಬಿಚ್ಚಾಲಿ ಗ್ರಾಮಸ್ಥ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next