ಜೇವರ್ಗಿ: ಪಟ್ಟಣದ ಮೂಲಕ ಹಾದು ಹೋಗಿರುವ ಬೀದರ-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಜೇವರ್ಗಿಯಿಂದ ಶಹಾಪುರವರೆಗೆ ಈ ರಾಜ್ಯ ಹೆದ್ದಾರಿ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟು ಹೋಗಿದ್ದು, ದಶಕಗಳು ಕಳೆದರೂ ದುರಸ್ತಿ ಕಾಣದೇ ಬರೀ ಗುಂಡಿಗಳೇ ರಾರಾಜಿಸುತ್ತಿವೆ. ಪರಿಣಾಮ ಜೇವರ್ಗಿ-ಶಹಾಪುರ ನಡುವಿನ ರಸ್ತೆಯಲ್ಲಿ ನಿತ್ಯವೂ ಸರಣಿ ಅಪಘಾತ, ಸಾವು-ನೋವು ಸಂಭವಿಸುತ್ತಿದ್ದು,ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಲಬುರಗಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ-50 ನ್ನು ಮೇಲ್ದರ್ಜೆಗೇರಿಸಿ, ಪಟ್ಟಣದ ಬಸ್ ಡಿಪೋದಿಂದ ವಿಜಯಪುರ ರಸ್ತೆಯ ಲಕ್ಷ್ಮೀ ಮಂದಿರವರೆಗೆ 4.8 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಜೇವರ್ಗಿ ಬಸ್ ಘಟಕದಿಂದ ಶಹಾಪುರ ಮಾರ್ಗಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟು ಹೋಗಿದ್ದರೂ ಕನಿಷ್ಟ ಪಕ್ಷ ತೇಪೆ ಹಚ್ಚುವ ಕೆಲಸ ಮಾತ್ರಯಾರೂ ಮಾಡುತ್ತಿಲ್ಲ. ರಸ್ತೆಯ ಮದ್ಯದಲ್ಲಿ ದೊಡ್ಡ ದೊಡ್ಡ ತಗ್ಗು ಗುಂಡಿ ಬಿದ್ದಿದ್ದು, ಅಕ್ಕ ಪಕ್ಕ ಮುಳ್ಳು ಜಾಲಿಕಂಟಿಗಳು ಬೆಳೆದು ರಸ್ತೆ ಕಾಣದಂತಾಗಿದೆ. ಕಳೆದೊಂದು ವಾರದ ಹಿಂದೆ ಶಹಾಪುರದಿಂದ ಕಲಬುರಗಿ ನಗರಕ್ಕೆ ತೆರಳುತ್ತಿದ್ದ ಕಾರೊಂದು ತಾಲೂಕಿನ ಮುದಬಾಳ. ಕೆ ಕ್ರಾಸ್ ಹತ್ತಿರ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದಾರೆ.
ಇಷ್ಟಾದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಿತ್ಯ ಶಹಾಪುರದಿಂದ ಕಲಬುರಗಿ ನಗರಕ್ಕೆ ಸಾಮರ್ಥ್ಯಕ್ಕಿಂತ ಹೆಚ್ಚು ಮರಳು ತುಂಬಿದ ಲಾರಿಗಳು ಹೋಗುತ್ತಿರುವುದರಿಂದ ರಸ್ತೆಗಳು ಹಾಳಾಗಲು ಪ್ರಮುಖ ಕಾರಣವಾಗಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವುದರಿಂದ ಕೂಡಲೇ ರಸ್ತೆ ದುರಸ್ತಿ ಹಾಗೂ ಪಟ್ಟಣದಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ
ತೀರಾ ಹದಗೆಟ್ಟಿದ್ದು, ದಾರಿಹೋಕರು, ಪ್ರಯಾಣಿಕರು ಸುಖಾಸುಮ್ಮನೆ ಈ ರಸ್ತೆಯಲ್ಲಿ ಸಂಭವಿಸುವ ಅಪಘಾತಗಳಿಗೆ ಜೀವ ತೆರುತ್ತಲೆ ಇದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತುರ್ತು ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು.
– ಪರಶುರಾಮ ಮುದಬಾಳ.ಕೆ., ವಕೀಲರು
ದಿ.ಧರ್ಮಸಿಂಗ್ ಅವರು ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂಈ ರಸ್ತೆ ರಿಪೇರಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ರಸ್ತೆ ತುಂಬಾ ತೆಗ್ಗು ಗುಂಡಿಗಳು ಬಿದ್ದು ಸವಾರರು ಪರದಾಡುವಂತಾಗಿದೆ. ಕೂಡಲೇ ಹೆದ್ದಾರಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
– ಭಗವಂತ್ರಾಯ ಬೆಣ್ಣೂರ, ಪ್ರಗತಿಪರ ಚಿಂತಕರು.
-ವಿಜಯಕುಮಾರ ಎಸ್.ಕಲ್ಲಾ