Advertisement
ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಮಾಡದಿದ್ದರೆ ಕುರುಬ ಸಮುದಾಯದ ಸಹಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗ ದೂರವಾಗಬಹುದೆಂಬ ಆತಂಕ ಒಂದು ಕಡೆಯಾದರೆ, ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿದರೆ ಮೂಲ ಕಾಂಗ್ರೆಸ್ಸಿಗರು ಅದರಲ್ಲೂ ಒಕ್ಕಲಿಗ, ಲಿಂಗಾಯತ, ದಲಿತ ಸಮುದಾಯದ ನಾಯಕರು ಮುನಿಸಿಕೊಂಡರೆ ಮತ್ತೂಂದು ರೀತಿಯ ಸಮಸ್ಯೆಗೆ ಕಾರಣವಾಗಬಹುದೆಂಬ ಭಯವೂ ಇದೆ.
Related Articles
Advertisement
ಹೀಗೆ ಮಾಡುವುದರಿಂದ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವರ್ಗಕ್ಕೆ ಅವಕಾಶ ಕೊಟ್ಟಂತಾಗುತ್ತದೆ ಎಂದು ಹೈಕಮಾಂಡ್ ಒಪ್ಪಿಸುವ ಚಿಂತನೆಯಲ್ಲಿದ್ದಾರೆ. ಒಂದೊಮ್ಮೆ ತಾವೇ ಪ್ರತಿಪಕ್ಷ ನಾಯಕರಾಗಿ ಮುಂದುವರಿಯುವುದಾದರೆ ಉಪ ನಾಯಕನ ಸ್ಥಾನ ಕೃಷ್ಣ ಬೈರೇಗೌಡರಿಗೆ ನೀಡಿ, ರಮೇಶ್‌ಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಯೋಚನೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಭರ್ತಿ ವಿಚಾರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರತ್ತಲೂ ನೋಡುತ್ತಿದೆ. ಶೀಘ್ರವೇ ಗುಲಾಂ ನಬಿ ಆಜಾದ್, ಅಹಮದ್ ಪಟೇಲ್, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.
ಮೂಲ ಕಾಂಗ್ರೆಸ್ಸಿಗರ ತಂತ್ರ: ಸಮ್ಮಿಶ್ರ ಸರ್ಕಾರ ಪತನದ ನಂತರದ ಬೆಳವಣಿಗೆಗಳಲ್ಲಿ ಮೂಲ ಕಾಂಗ್ರೆಸ್ಸಿಗರಾದ ಡಿ.ಕೆ. ಶಿವಕುಮಾರ್, ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ , ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ ಒಟ್ಟಾಗಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ನಿರ್ಲಿಪ್ತ ಧೋರಣೆ ಕಾರಣ ಎಂಬ ವಿಚಾರವನ್ನೇ ಹೈಕಮಾಂಡ್ ಮುಂದಿಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕ ಸ್ಥಾನ ಮೂಲ ಕಾಂಗ್ರೆಸ್ಸಿಗರಿಗೆ ಸಿಗಬೇಕೆಂಬ ವಾದ ಮಂಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಕೆಪಿಸಿಸಿ ಅಥವಾ ಪ್ರತಿಪಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಡಾ.ಜಿ.ಪರಮೇಶ್ವರ್ ಪ್ರತಿಪಕ್ಷ ನಾಯಕ ಸ್ಥಾನ ಬಯಸಿದ್ದಾರೆಂದು ಮೂಲಗಳು ತಿಳಿಸಿವೆ.
* ಎಸ್. ಲಕ್ಷ್ಮಿನಾರಾಯಣ