Advertisement

ಇಲ್ಲಿ ವಸತಿ ಸಮುಚ್ಚಯವೇ ಹೆಚ್ಚಿದ್ದರೂ ಮೂಲ ಸೌಲಭ್ಯದ ಕೊರತೆ ಕಾಡುತ್ತಿದೆ !

11:17 PM Oct 24, 2019 | Team Udayavani |

ಮಹಾನಗರ: ಸರಕಾರಿ ಶಾಲೆ, ಚರ್ಚ್‌, ದೇವಸ್ಥಾನ, ದೈವಸ್ಥಾನ, ಪ್ರತಿಷ್ಠಿತ ಹೊಟೇಲ್‌ಗ‌ಳನ್ನು ಒಳಗೊಂಡಿರುವ ದೇರೆಬೈಲು ಪಶ್ಚಿಮ ವಾರ್ಡ್‌ (ನಂ.25) ನಗರದ ಮುಖ್ಯ ಪ್ರದೇಶದಲ್ಲಿದ್ದು, ಅಭಿವೃದ್ಧಿಯ ಜತೆಗೆ ಕೆಲವೊಂದು ಮೂಲ ಸಮಸ್ಯೆಯನ್ನು ಎದುರಿಸುತ್ತಿದೆ.

Advertisement

ಈ ವಾರ್ಡ್‌ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದ್ದು, ಹಲವಾರು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿದೆ. ಈ ವಾರ್ಡ್‌ನ ಜನಸಂಖ್ಯೆ ಹೆಚ್ಚುತ್ತಿದ್ದಂತೆ ಮೂಲ ಆವಶ್ಯಕತೆಗಳ ಪಟ್ಟಿಯೂ ಬೆಳೆಯುತ್ತಿದೆ. ಆದರೆ ಅದನ್ನು ಸಮರ್ಪಕವಾಗಿ ಪೂರೈಸುವುದು ಆ ಭಾಗದ ಜನಪ್ರತಿನಿಧಿಯ ಮುಂದಿ ರುವ ಸವಾಲಾಗಿದೆ. ಈ ವಾರ್ಡ್‌ ಸುಮಾರು ಮೂರು ವಾರ್ಡ್‌ಗಳ ಜತೆಗೆ ಸಂಪರ್ಕ ಹೊಂದಿದ್ದು, ರಸ್ತೆಯ ಒಂದು ಬದಿ ಒಂದು ವಾರ್ಡ್‌ ಇನ್ನೊಂದು ಬದಿ ಮತ್ತೂಂದು ವಾರ್ಡ್‌ ನಂತಿದೆ. ಹಾಗಾಗಿ ಕೆಲವು ಭಾಗಗಳ ಅಭಿ ವೃದ್ಧಿಯೂ ಇದರಿಂದ ನಿಧಾನಗತಿಯಲ್ಲಿ ಸಾಗುತ್ತಿದೆ.

ವಾರ್ಡ್‌ನಲ್ಲಿ ಸಂಚರಿಸಿದಾಗ ಬಹುತೇಕ ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡಿರುವುದು ಗೋಚರಿಸುತ್ತದೆ ಅದರೊಂದಿಗೆ ಒಳರಸ್ತೆಗಳ ಸ್ಥಿತಿಗತಿ ತೀರಾ ಕಳಪೆಯಾಗಿರುವುದು ತಿಳಿಯುತ್ತದೆ. ಇನ್ನೂ ಅಶೋಕನಗರದ ರಾಜಕಾಲುವೆಗೆ ಒಳಚರಂಡಿ ಸಂಪರ್ಕ ನೀಡಿರುವುದರಿಂದ ರಾಜಕಾಲುವೆ ಭಾಗದಲ್ಲಿ ದುರ್ನಾತ ಬೀರುತ್ತಿದೆ.

ಈ ಬಗ್ಗೆ ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೊಗೆಬೈಲು ಮುಖ್ಯರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯನ್ನು ಅರ್ಧಬಂರ್ಧ ಮಾಡಿರುವುದರಿಂದ ವಾಹನ ಸವಾರರಿಗೆ ಸಂಚಾರ ಕಷ್ಟವಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಕುಡಿಯುವ ನೀರಿನ ಸಮಸ್ಯೆ ಈ ವಾರ್ಡ್‌ನ ಮುಖ್ಯ ಸಮಸ್ಯೆಗಳಲ್ಲೊಂದು.

ರಾಜಕೀಯ ಹಿನ್ನೋಟ
ವಾರ್ಡ್‌ ನಂ. 25 – ದೇರೆಬೈಲು ಪಶ್ಚಿಮ ವಾರ್ಡ್‌ ಇತರ ವಾರ್ಡ್‌ಗಿಂತ ಸ್ವಲ್ಪ ಭಿನ್ನ. ಇಲ್ಲಿ ಪ್ರತಿ ಮತದಾನದಲ್ಲೂ ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳನ್ನು ವಾರ್ಡ್‌ನ ಜನತೆ ಆಯ್ಕೆ ಮಾಡುತ್ತಾರೆ. ಒಂದು ಬಾರಿ ಬಿಜೆಪಿ ಅಧಿಕಾರ ವಹಿಸಿಕೊಂಡರೆ ಮುಂದಿನ ಬಾರಿ ಕಾಂಗ್ರೆಸ್‌ ಅಧಿಕಾರ ಪಡೆದುಕೊಳ್ಳುತ್ತದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ 591 ಮತಗಳ ಅಂತರದಿಂದ ಕಾಂಗ್ರೆಸ್‌ ಜಯಗಳಿಸಿತ್ತು. ಕಳೆದ ಬಾರಿ ಈ ವಾರ್ಡ್‌ ಪರಿಶಿಷ್ಟ ಜಾರಿಗೆ ಮೀಸಲಿರಿಸಲಾಗಿತ್ತು. ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಾಗಾಗಿ ಈ ಬಾರಿಯೂ ನಾಗವೇಣಿ ಅವರಿಗೆ ಸ್ಪರ್ಧಿಸುವ ಅವಕಾಶ ಲಭಿಸಿದೆ.

Advertisement

ದೇರೆಬೈಲು ಪಶ್ಚಿಮ ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಉರ್ವಸ್ಟೋರ್‌ ನಿಂದ ಕೊಟ್ಟಾರ ಚೌಕಿ ಹೋಗುವಾಗ ಎಡಭಾಗ, ಇನ್ಫೋಸಿಸ್‌ ಬಳಿಕ ಎರಡು ಬದಿ, ಕೊಟ್ಟಾರ ಸರಕಾರಿ ಶಾಲೆ, ಜೀಂಜರ್‌ ಹೊಟೇಲ್‌ ಹಾಗೂ ಅದರ ವಿರುದ್ಧ ಬದಿ, ಉರ್ವಸ್ಟೋರ್‌ ಡೊಮಿನಿಕ್‌ ಚರ್ಚ್‌, ಚರ್ಚ್‌ನ ಎಡಭಾಗ, ಉರ್ವಸ್ಟೋರ್‌ ನಿಂದ ಅಶೋಕನಗರ ಹೋಗುವ ಹಾದಿ ಬಲಭಾಗ, ಹೊಗೆಬೈಲ್‌ ಆಯುರ್ವೇದ ಆಸ್ಪತ್ರೆ ಪರಿಸರವನ್ನು ಒಳಗೊಂಡಿದೆ

ಒಟ್ಟು ಮತದಾರರು 5500
ನಿಕಟಪೂರ್ವ ಕಾರ್ಪೊರೇಟರ್‌-ನಾಗವೇಣಿ (ಕಾಂಗ್ರೆಸ್‌)

2013ರ ಚುನಾವಣೆ ಮತ ವಿವರ
ನಾಗವೇಣಿ (ಕಾಂಗ್ರೆಸ್‌)- 1,668
ಶ್ರೀಲತಾ (ಬಿಜೆಪಿ)-1,077
ಸುನಂದಾ ಕೆ. (ಸಿ.ಪಿ.ಐ.ಎಂ.)-488

- ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next