Advertisement

ಸರ್ಕಾರವಿದ್ದರೂ ‘ದಳ’ಪತಿಗಳು ಅನಾಥ!

01:52 AM Feb 06, 2019 | Team Udayavani |

ಹುಬ್ಬಳ್ಳಿ: ಈ ಹಿಂದೆ ಅಧಿಕಾರವಿಲ್ಲ ಎಂದು ನೋವುಂಡಿದ್ದ ಉತ್ತರ ಕರ್ನಾಟಕದ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಇದೀಗ ತಮ್ಮದೇ ಸರ್ಕಾರ ಇದ್ದರೂ ತಮ್ಮ ಕೆಲಸಗಳು ಆಗುತ್ತಿಲ್ಲ. ನಿಗಮ-ಮಂಡಳಿ ಅವಕಾಶವೂ ದೊರೆ ಯುತ್ತಿಲ್ಲ ಎಂದು ಪರಿತಪಿಸುತ್ತಿದ್ದಾರೆ.

Advertisement

ಜೆಡಿಎಸ್‌ ವರಿಷ್ಠರು ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದಾರೆಂಬ ಅನಿಸಿಕೆ ಸಾರ್ವ ಜನಿಕರದಷ್ಟೇ ಅಲ್ಲ, ಸ್ವತಃ ಜೆಡಿಎಸ್‌ ಕಾರ್ಯ ಕರ್ತರೇ ಈ ಬಗ್ಗೆ ಗೊಣಗುತ್ತಿದ್ದರು. ದಶಕದ ಬಳಿಕ ಪಕ್ಷ ಅಧಿಕಾರ ಹಿಡಿದಿದ್ದರೂ ಇದು ನಮ್ಮ ಪಕ್ಷದ ಸರ್ಕಾರ ಎಂಬ ಯಾವ ಭಾವನೆಯೂ ಮೂಡಿಸದ ರೀತಿಯಲ್ಲಿದೆ ಎಂಬುದು ಹಲವರ ಆರೋಪ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಸೇರಿ ವಿವಿಧ ಜಿಲ್ಲೆಗಳ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ತಮ್ಮದೇ ಸರ್ಕಾರದಲ್ಲಿ ನಾವು ಅನಾಥ ಸ್ಥಿತಿ ಅನುಭವಿಸುವಂತಾಗಿದೆ ಎಂದು ಬಹಿರಂಗ ಅಸಮಾಧಾನ ತೋರುತ್ತಿದ್ದಾರೆ.

ವಿಧಾನಸೌಧಕ್ಕೆ ಯಾವುದಾದರು ಕೆಲಸ, ಕಾರ್ಯಗಳಿಗಾಗಿ ಹೋದರೆ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿಯವರ ಕಚೇರಿಗೆ ನೋಡೋಣ ಎಂದು ಹೋದರೆ ಎಲ್ಲರಿಗೂ ಹೇಳಿದಂತೆ ಕಾರ್ಯಕರ್ತರು, ಮುಖಂಡರಿಗೆ ಹೇಳಿ ಸಾಗ ಹಾಕಲಾಗುತ್ತದೆ. ಹೀಗಾದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾರ್ಯಕರ್ತರದ್ದಾಗಿದೆ.

ನಿಗಮ-ಮಂಡಳಿ ಭಾಗ್ಯವಿಲ್ಲ: ನಿಗಮ-ಮಂಡಳಿ ನೇಮಕ ಭಾಗ್ಯ ಇಲ್ಲವಾಗಿದೆ. ಹಿಂದೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದಾಗ ಬಿಜೆಪಿಯವರು ನಿಗಮ-ಮಂಡಳಿಗೆ ನೇಮಕ ಮಾಡಿ ತಮ್ಮ ಕಾರ್ಯಕರ್ತರಿಗೆ ಅಧಿಕಾರ ಸ್ಥಾನಗಳನ್ನು ನೀಡಿದ್ದರು. ಆಗಲೂ ಜೆಡಿಎಸ್‌ ನಿಗಮ-ಮಂಡಳಿ ನೇಮಕಕ್ಕೆ ವಿಳಂಬ ತೋರುವ ಮೂಲಕ ಕಾರ್ಯಕರ್ತರಿಗೆ ಅವಕಾಶ ಇಲ್ಲದಂತೆ ಮಾಡಿತ್ತು. ಇದೀಗ ಕಾಂಗ್ರೆಸ್‌ ಜತೆ ಸರ್ಕಾರ ರಚಿಸಲಾಗಿದೆ. ಕಾಂಗ್ರೆಸ್‌ನವರು ನಿಗಮ-ಮಂಡಳಿಗೆ ನೇಮಕ ಮಾಡಿದ್ದರೂ ಜೆಡಿಎಸ್‌ನಿಂದ ಯಾವುದೇ ನಿಗಮ ಮಂಡಳಿ ನೇಮಕ ಮಾಡದಿರುವ ಬಗ್ಗೆ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಪಕ್ಷಕ್ಕೆ ಹೆಚ್ಚಿನ ಶಾಸಕರನ್ನು ನೀಡಿಲ್ಲ ಎಂಬ ಸಿಟ್ಟಿನೊಂದಿಗೆ ಉತ್ತರ ಕರ್ನಾಟಕವನ್ನು ಪಕ್ಷ ಸಂಘಟನೆ, ಕಾರ್ಯಕರ್ತರಿಗೆ ಸೌಲಭ್ಯ ನೀಡಿಕೆ ವಿಚಾರದಲ್ಲಿ ಉದಾಸೀನತೆ, ನಿರ್ಲಕ್ಷ್ಯವನ್ನು ಪಕ್ಷದ ವರಿಷ್ಠರು ಮುಂದುವರೆಸಿದರೆ ಪಕ್ಷದ ಕಾರ್ಯಕರ್ತರು ಹತಾಶೆಗೆ ಒಳಗಾಗಲಿದ್ದು, ಪಕ್ಷ ಸಂಘಟನೆ ಇನ್ನಷ್ಟು ಸೊರಗಲಿದೆ ಎಂಬ ಆತಂಕ ಹಲವರದ್ದಾಗಿದೆ.

Advertisement

ಹಳೇ ಮೈಸೂರು ಭಾಗದ ಕಾರ್ಯಕರ್ತರು, ಮುಖಂಡರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸಿಗುವ ಮನ್ನಣೆಯ ಕೊಂಚ ಭಾಗವೂ ಉತ್ತರ ಕರ್ನಾಟಕದವರಿಗೆ ಸಿಗುತ್ತಿಲ್ಲ. ಉ.ಕ.ದ ಕೆಲವೊಂದು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಪಕ್ಷದ ಅನೇಕರು ಸೋಲು ಕಂಡಿದ್ದಾರೆ. ಕ್ಷೇತ್ರದಲ್ಲಿ ಜನತೆ ಹಲವು ಸಮಸ್ಯೆಗಳಿಗಾಗಿ ಪಕ್ಷದ ಸರ್ಕಾರವಿದೆ ಎಂದು ನಮ್ಮ ಬಳಿ ಬಂದರೆ ಯಾವೊಂದು ಕೆಲಸ ಆಗುವುದಿಲ್ಲ ಎಂದರೆ ಜನರಿಗೆ ಏನೆಂದು ಉತ್ತರ ನೀಡಬೇಕು ಎಂಬ ಪ್ರಶ್ನೆ ಅನೇಕರದ್ದಾಗಿದೆ.

ಸವಲತ್ತು ಕೊಟ್ಟಿದ್ದಾದರೂ ಏನು?

ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಆಗುತ್ತಿಲ್ಲ, ಹೆಚ್ಚು ಸ್ಥಾನಗಳಲ್ಲಿ ಪಕ್ಷ ಗೆಲ್ಲುತ್ತಿಲ್ಲ ಎಂದು ದೂರುವ ವರಿಷ್ಠರು ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಏನೆಲ್ಲ ಸೌಲಭ್ಯ ನೀಡಿದ್ದಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿಯೇ ಪಕ್ಷದ ಕಚೇರಿಗಳಿಲ್ಲ. ಅಧಿಕಾರ ಇದ್ದಾಗಲೂ ಕಾರ್ಯಕರ್ತರಿಗೆ ಅಧಿಕಾರ ಸ್ಥಾನ ಇಲ್ಲವಾದರೆ ಪಕ್ಷ ಬೆಳೆಸುವುದಾದರು ಹೇಗೆ ಎನ್ನುತ್ತಿದ್ದಾರೆ ಉ.ಕ.ದ ಜೆಡಿಎಸ್‌ ಕಾರ್ಯಕರ್ತರು.

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕಾರ್ಯಕ್ಕೆ ಹೋಗುವುದಿಲ್ಲ. ಜನರಿಗೆ ಪೂರಕವಾಗುವ ಕೆಲಸ
ಮಾಡಿಸಿಕೊಳ್ಳಲೆಂದು ವಿಧಾನಸೌಧಕ್ಕೆ ಹೋದರೆ ಕಾರ್ಯಕರ್ತರಿಗೆ ಬೆಲೆಯೇ ಇಲ್ಲದ ಸ್ಥಿತಿಯಾದರೆ
ಹೇಗೆ?
 ● ಭೀಮಪ್ಪ ಗಡಾದ, ಜೆಡಿಎಸ್‌ ಪರಾಜಿತ ಅಭ್ಯರ್ಥಿ

ರಾಜ್ಯದಲ್ಲಿ ನಮ್ಮ ಪಕ್ಷದ ನೇತೃತ್ವದ ಸರ್ಕಾರವಿದೆ. ಆದರೆ, ನಿರೀಕ್ಷಿತ ರೀತಿಯಲ್ಲಿ ಕೆಲಸ ಆಗುತ್ತಿಲ್ಲ. ಸರ್ಕಾರ ಸಂದರ್ಭದಲ್ಲಿ ಪಕ್ಷದ ಚಟುವಟಿಕೆಗಳು ಏರುಮುಖ ಬದಲು ಕಡಿಮೆ ಆಗತೊಡಗಿವೆ. ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸಗಳ ಬಗ್ಗೆ ವರಿಷ್ಠರು ಗಂಭೀರ ಚಿಂತನೆ ನಡೆಸಬೇಕಾಗಿದೆ.
 ● ಪಿ.ಆರ್‌.ನಾಯಕ್‌,
ಜೆಡಿಎಸ್‌ ಜಿಲ್ಲಾಧ್ಯಕ್ಷ , ಉತ್ತರ ಕನ್ನಡ ಜಿಲ್ಲೆ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next