Advertisement

ಈಗ ಚುನಾವಣೆ ನಡೆದರೂ ಅತಂತ್ರ ಸ್ಥಿತಿ: ಎಚ್‌ಡಿಕೆ ಭವಿಷ್ಯ

12:27 PM Nov 03, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈಗ ಮತ್ತೆ ವಿಧಾನಸಭೆ ಚುನಾವಣೆ ನಡೆದರೂ ಅತಂತ್ರ ಫ‌ಲಿತಾಂಶವೇ ಬರುತ್ತದೆ. ಯಾವೊಂದು ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಹೆಚ್ಚು ದಿನ ಉಳಿಯಲ್ಲ ಎಂದು ಬಿಜೆಪಿ ಸಚಿವರೇ ಹೇಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಆಂತರಿಕ ಸಭೆಯಲ್ಲಿ ಯಡಿಯೂರಪ್ಪ ಅವರು ನನಗೆ ಮುಖ್ಯಮಂತ್ರಿ ಹುದ್ದೆ ಬೇಕಿರಲಿಲ್ಲ ಎಂದು ಹೇಳಿದ್ದಾರೆ. ಇದು ರಾಜ್ಯರಾಜಕೀಯದ ಸದ್ಯದ ಸ್ಥಿತಿ ಎಂದು ಹೇಳಿದರು.

ನನಗೆ ಜನರ ಹಿತ ಮುಖ್ಯ. ಹೀಗಾಗಿ ತತ್‌ಕ್ಷಣಕ್ಕೆ ಚುನಾವಣೆ ಬೇಡ ಎಂಬುದು ನನ್ನ ಅನಿಸಿಕೆ. ಆದರೆ ಬಿಜೆಪಿಯವರೇ ಡಿಸೆಂಬರ್‌, ಫೆಬ್ರವರಿ ಒಳಗೆ ಚುನಾವಣೆಗೆ ಹೋಗುವ ಮೂಡ್‌ನ‌ಲ್ಲಿದ್ದಾರೆ. ಓರ್ವ ಸಚಿವರು ಯಾವುದೇ ಅನಿರೀಕ್ಷಿತ ಘಟನೆಗಳು ನಡೆಯದೆ ಸರಕಾರ ಇದ್ದರೆ ಜನವರಿ ವೇಳೆಗೆ ಹೊಸ ನೀತಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದರ ಆರ್ಥ ಅವರಿಗೆ ಸರಕಾರ ಉಳಿವಿನ ಬಗ್ಗೆ ನಂಬಿಕೆ ಇಲ್ಲ ಎಂದು ತಾನೆ ಎಂದು ಪ್ರಶ್ನಿಸಿದರು.

ನೆರೆ ಪರಿಸ್ಥಿತಿ ನಿರ್ವಹಣೆ: ಸಮಾಧಾನ ತಂದಿಲ್ಲ
ಪ್ರವಾಹ ಪರಿಹಾರ ವಿಚಾರದಲ್ಲಿ ರಾಜ್ಯ ಸರಕಾರದ ಕ್ರಮ ನನಗೆ ಸಮಾಧಾನ ತಂದಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗಿ ನಾನು ನಿಮ್ಮ ಜತೆ ಇದ್ದೇನೆ ಎಂದು ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಎಲ್ಲಿದ್ದಾರೋ ಅಶೋಕ್‌
ಕಂದಾಯ ಸಚಿವ ಆರ್‌.ಅಶೋಕ್‌ ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಎಷ್ಟು ಕಡೆ ಹೋಗಿದ್ದಾರೋ ಎಲ್ಲೆಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೋ ಅರ್ಥವೇ ಆಗುತ್ತಿಲ್ಲ. ಅವರಿಗೂ ಮುಖ್ಯಮಂತ್ರಿಯವರಿಗೂ ಸಮನ್ವಯ ಇಲ್ಲ. ಕಂದಾಯ ಸಚಿವರಾಗಿ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

Advertisement

ಸರಕಾರದ ಬಗ್ಗೆ ಮೃದು ಧೋರಣೆ ತಳೆದಿಲ್ಲ
ಜೆಡಿಎಸ್‌ನ ಶಾಸಕರು ಬಿಜೆಪಿ ಹೋಗುವುದನ್ನು ತಡೆಯಲು ಅಥವಾ ನನ್ನ ಮೇಲೆ ಐಎಂಎ, ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ, ಐಟಿ ದಾಳಿ ಮಾಡಿಸುತ್ತಾರೆ ಎಂಬ ಭಯದಿಂದ ನಾನು ಬಿಜೆಪಿ ಸರಕಾರದ ಬಗ್ಗೆ ಮೃದು ಧೋರಣೆ ತಳೆದಿಲ್ಲ. ನಾನು ಈ ಸರಕಾರ ಅಥವಾ ಯಡಿಯೂರಪ್ಪ ಅವರನ್ನು ಅಪ್ಪಿಕೊಂಡಿಲ್ಲ. ಆದರ ಆಗತ್ಯವೂ ಇಲ್ಲ. 2008 ರಲ್ಲಿ ಇದೇ ಯಡಿಯೂರಪ್ಪ ವಿರುದ್ಧ ದಾಖಲೆ ಸಮೇತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವನು ನಾನು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದ್ದೇನೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಎಷ್ಟೆಷ್ಟು ರೈತರ ಸಾಲ ಮನ್ನಾ ಆಗಿದೆ ಎಂಬುದರ ಬಗ್ಗೆ ಕ್ಷೇತ್ರಾವಾರು ಕೈಪಿಡಿ ಸಿದ್ಧ ಮಾಡುತ್ತಿದ್ದೇನೆ. ಇನ್ನೂ ಹಲವು ರೈತರ ಸಾಲ ಮನ್ನಾ ತಾಂತ್ರಿಕ ಕಾರಣಕ್ಕೆ ಆಗಿಲ್ಲ. ಅವರಿಗೆ ನೆರವಾಗಲು ವೆಬ್‌ಸೈಟ್‌ ಸಹ ಮಾಡಿ ಸಹಾಯವಾಣಿ ಪ್ರಾರಂಭಿಸಿದ್ದೇನೆ ಎಂದು ತಿಳಿಸಿದರು.

ಮಲೇಷ್ಯಾಕ್ಕೆ ಹೋಗುತ್ತಿಲ್ಲ
ಜೆಡಿಎಸ್‌ನ ಯಾವ ಶಾಸಕರು ಪಕ್ಷ ಬಿಡುವುದಿಲ್ಲ. ಎಲ್ಲವೂ ಊಹಾಪೋಹ. ನಾನೂ ಮಲೇಷ್ಯಾಕ್ಕೆ ಹೋಗುತ್ತಿಲ್ಲ, ಯಾವ ಶಾಸಕರನ್ನೂ ಕರೆದಿಲ್ಲ. ನಾನು ನನ್ನ ಮಗನ ಸಿನೆಮಾ ಕುರಿತು ಚರ್ಚೆಗೆ ಲಂಡನ್‌ಗೆ ಹೋಗುತ್ತಿದ್ದೇನೆ ಅಷ್ಟೇ. ಮದುವೆ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ಕೈ ಕುಲುಕಿದ ತತ್‌ಕ್ಷಣ ಎಲೆಕ್ಟ್ರಾನಿಕ್‌ ಮೀಡಿಯಾಗಳು ತಾವೇ ಊಹೆ ಮಾಡಿಕೊಂಡು ಸರಣಿ ಸುದ್ದಿ ಪ್ರಸಾರ ಮಾಡಿದರೆ ನಾನೇನು ಮಾಡಲಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಅಮಿತ್‌ ಶಾ ಉತ್ತರಿಸಲಿ
ಬಿಜೆಪಿಯವರು ಮೊದಲು ಆಪರೇಷನ್‌ ಕಮಲ ಮಾಡಿಲ್ಲ, ಶಾಸಕರ ರಾಜೀನಾಮೆಗೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಸಮ್ಮಿಶ್ರ ಸರಕಾರ ಬೀಳಿಸಿ ಶ್ರಮಪಟ್ಟು ಎಂಟು ದಿನಗಳ ಕಾಲ ಕಾದು ಸರಕಾರ ರಚಿಸಿದರು. ಇದೀಗ ಹುಬ್ಬಳ್ಳಿಯ ಸಭೆಯಲ್ಲಿ ಯಡಿಯೂರಪ್ಪ ಅವರೇ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಲು 17 ಮಂದಿ ಶಾಸಕರ ರಾಜೀನಾಮೆ ಕೊಡಿಸಿದೆವು. ಅವರನ್ನು ರಾಷ್ಟ್ರೀಯ ಅಧ್ಯಕ್ಷರೇ ಎರಡೂವರೆ ತಿಂಗಳು ಮುಂಬಯಿಯಲ್ಲಿಟ್ಟಿದ್ದರು. ನಮಗಾಗಿ ಅನರ್ಹಗೊಂಡವರು ಮನೆ ಮಕ್ಕಳು, ಮಡದಿ ಬಿಟ್ಟು ಹೋಗಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ಅಮಿತ್‌ ಶಾ ಅವರೇ ಈಗ ಉತ್ತರಿಸಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ, ನಾವಂತೂ ಇದನ್ನೂ ಸುಪ್ರೀಂ ಕೋರ್ಟ್‌ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next