ಯಳಂದೂರು: ಈ ಬಾರಿ ಉತ್ತಮ ಮಳೆ ಹಾಗೂ ಕಬಿನಿ ಕಾಲುವೆಯಲ್ಲಿ ನೀರು ಬಿಟ್ಟ ಪರಿಣಾಮ ತಾಲೂಕಿನಲ್ಲಿ ಭತ್ತದ ಫಸಲು ಉತ್ತಮವಾಗಿ ಬಂದಿದೆ. ಕಳೆದ ಬಾರಿ ಭತ್ತ ಕಡಿಮೆ ಬೆಳೆದಿದ್ದರಿಂದ ಮೇವಿನ ಕೊರತೆ ಕಾಣಿಸಿಕೊಂಡಿತ್ತು. ಆದರೆ, ಈ ಬಾರಿ ಹುಲ್ಲು ಸಮೃದ್ಧವಾಗಿದೆ. ಆದರೂ ಬೇಡಿಕೆ ಹೆಚ್ಚಾಗಿದೆ. ಕಳೆದ ಬಾರಿಗೆ ಹೋಲಿಸಿಕೊಂಡಲ್ಲಿ ಈಗ ಹುಲ್ಲಿನ ಬೆಲೆ ತಗ್ಗಿದೆ.
ತಾಲೂಕಿನಲ್ಲಿ ಈ ಬಾರಿ 3500 ಹೆಕ್ಟೇರ್‌ಗಿಂತ ಹೆಚ್ಚು ಭೂ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದೆ. ಈಗಾಗಲೇ ಭತ್ತವನ್ನು ಕಟಾವು ಮಾಡಲಾಗುತ್ತಿದೆ. ಭತ್ತ ಕೊಯ್ಯುವ ಯಂತ್ರಗಳು ಎಲ್ಲೆಡೆ ಯಂತ್ರಗಳ ಸದ್ದು ಕೇಳುತ್ತಿದೆ. ಕಳೆದ ಬಾರಿ ಬರವಿದ್ದರಿಂದ ಗೋ ಶಾಲೆಗಳನ್ನು ತೆರೆಯಲಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಸಮೃದ್ಧ ಮೇವು ಸಿಗುವ ಆಶಾ ಭಾವನೆ ಹೈನುಗಾರರಲ್ಲಿ ಮೂಡಿದೆ.
ರಾಸುಗಳಿಗೆ ಹುಲ್ಲು ಸಂಗ್ರಹ: ಭತ್ತದ ಹುಲ್ಲನ್ನು ಹೈನುಗಾರರು ತಾವು ಸಾಕಿರುವ ರಾಸುಗಳಿಗೆ ವರ್ಷ ಪೂರ್ತಿ ತಿನ್ನಿಸಲು ದಾಸ್ತಾನುಗಳನ್ನು ಮಾಡಿಕೊಳ್ಳುವ ಪರಿಪಾಠವಿದೆ. ಇದಕ್ಕಾಗಿ ದೊಡ್ಡ ದೊಡ್ಡ ಬಣವೆಗಳನ್ನು ಹಾಕಲಾಗುತ್ತದೆ. ಒಂದು ರಾಸು ಹಸಿ ಹುಲ್ಲು, ತಿಂಡಿಗಳನ್ನು ನೀಡಿಯೂ ಪ್ರತಿನಿತ್ಯ ಸರಾಸರಿ 5ರಿಂದ 6 ಕಿಲೋ ಒಣ ಹುಲ್ಲನ್ನು ತಿನ್ನುತ್ತದೆ. ಈ ಹಿನ್ನೆಲೆಯಲ್ಲಿ ಹೈನುಗಾರರು ಹುಲ್ಲನ್ನು ಸಂಗ್ರಹಿಸಲು ಗದ್ದೆಗಳಿಗೆ ತೆರಳಿ ಅಲ್ಲೇ ಖರೀದಿ ಮಾಡುವ ಪ್ರಕ್ರಿಯೆಗೆ ತಾಲೂಕಿನಲ್ಲಿ ಚಾಲನೆ ಸಿಕ್ಕಿದೆ.
ಯಂತ್ರದಿಂದ ಕೊಯ್ದ ಹುಲ್ಲಿಗೆ ಬೆಲೆ ಕಡಿಮೆ: ಯಂತ್ರದಿಂದ ಕಟಾವು ಮಾಡುವ ಹುಲ್ಲಿಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದೆ. ಕೈಯಲ್ಲಿ ಕೊಯ್ಯುವ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಿದೆ. ಆದರೆ, ಈಗ ಎಲ್ಲೆಡೆ ಯಂತ್ರಗಳೇ ಭತ್ತ ಕಟಾವು ಮಾಡಿ ಒಕ್ಕಣೆ ಮಾಡುವುದರಿಂದ ಈ ಹುಲ್ಲು ಕಾಣುವುದು ಕಡಿಮೆಯಾಗಿದೆ. ಕಳೆದ ಬಾರಿ ಒಂದು ಕಂತೆ ಹುಲ್ಲಿಗೆ 12ರಿಂದ 15 ರೂ. ಬೆಲೆ ಇತ್ತು. ಈಗ 10ರಿಂದ 12 ರೂ.ಗೆ ಬೆಲೆ ಕಡಿಮೆಯಾಗಿದೆ. ಆಲ್ಲದೆ, ಒಂದು ಎಕರೆಗೆ ಹುಲ್ಲಿಗೆ ಕಳೆದ ಬಾರಿ 3000 ರೂ. ಇದ್ದ ಬೆಲೆ ಈಗ 2500 ರೂ.ಗೆ ಕಡಿಮೆಯಾಗಿದೆ. ಕಂತೆಗಳನ್ನು ಕಟ್ಟಲು ಯಂತ್ರದ ಹುಲ್ಲು ಕಿರಿದಾಗುವುದರಿಂದ ಕೈಯಲ್ಲೇ ಭತ್ತವನ್ನು ಕೊಯ್ದು ಒಕ್ಕಣೆ ಮಾಡಿ, ಕಂತೆ ಕಟ್ಟಲು ಹದಗೊಳಿಸಲಾಗುತ್ತದೆ.
–ಪೈರೋಜ್ ಖಾನ್