Advertisement

ಕೋಟ್ಯಂತರ ವೆಚ್ಚವಾದರೂ ಸಿಕ್ಕಿಲ್ಲ ನೀರು

04:49 PM Mar 12, 2020 | Suhan S |

ಹುಕ್ಕೇರಿ: ಮೂಲಭೂತ ಸೌಲಭ್ಯಗಳಲ್ಲಿ ಮುಖ್ಯವಾದುದು ಕುಡಿಯುವ ನೀರು. ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆಂದು ಸರ್ಕಾರಗಳು ಹಲವಾರು ಯೋಜನೆಗಳ ಮುಖಾಂತರ ಕೊಟ್ಯಂತರ ರೂ. ವೆಚ್ಚ ಮಾಡಿದರೂ ಜನರಿಗೆ ಸಮರ್ಪಕ ನೀರು ಸಿಗದೇ ಇರುವುದು ವಿಪರ್ಯಾಸ.

Advertisement

ಹುಕ್ಕೇರಿ ಹಾಗೂ ಯಮಕನಮರಡಿ ವಿಧಾನ ಸಭಾ ಕ್ಷೇತ್ರದಲ್ಲಿರುವ ಕೆಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಸರಿಯಾಗಿಲ್ಲ. ತಾಲೂಕಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಘಟಕಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಅಧಿಕಾರಿಗಳ ಪುಸ್ತಕದಲ್ಲಿ ಮಾತ್ರ ಸರಿಯಾದ ಲೆಕ್ಕವಿದೆ.ಕಳೆದ ಹಲವಾರು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ಗ್ರಾಮಗಳಿಗೆ ಶುದ್ಧ ನೀರಿಗಾಗಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೀರಿನ ಘಟಕ ಇಂದು ನಾಯಿಗಳ ವಾಸಸ್ಥಾನಗಳಾಗಿವೆ. ಒಂದು ಬಾರಿಯೂ ಘಟಕದಿಂದ ನೀರು ಪೂರೈಕೆಯಾಗಿಲ್ಲ. ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಎನ್ನುವುದು ಮರೀಚಿಕೆ ಆಗಿದೆ. ಇನ್ನು ಕೆಲ ಗ್ರಾಮ ಪಂಚಾಯತಿ ಕಾರ್ಯಲಯ ಸಮೀಪವೇ ಈ ನೀರಿನ ಘಟಕ ಇದ್ದರೂ ಬೀದಿ ನಾಯಿಗಳ ಮಲಗುವ ತಾಣವಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರು ಮಾತ್ರ ಕಣ್ಣಿದ್ದೂ ಕುರುಡರಾಗಿ ಜಾಣ ಮೌನವಹಿಸಿದ್ದಾರೆ. ಹೆಸರಿಗೆ ಮಾತ್ರ ಇರುವ ಈ ಘಟಕಗಳಿಂದ ಉದ್ಘಾಟನೆಯಾದಾಗಿನಿಂದ ಇಲ್ಲಿಯವರೆಗೆ ಒಂದು ಹನಿ ನೀರು ಕೂಡ ಪೂರೈಕೆಯಾಗದೇ ಬೇಸತ್ತ ಜನತೆ ಇದು ಶುದ್ಧ ನೀರಿನ ಘಟಕದ ಜಾಹೀರಾತು ಡಬ್ಬಿ ಎನ್ನುತ್ತಿದ್ದಾರೆ.

ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಭೂ ಸೇನಾ ನಿಗಮ, ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳು ಸರಿಯಾಗಿ ನಿರ್ವಹಣೆ ಜವಾಬ್ದಾರಿ ಹೊರದೇ ಇರುವುದರಿಂದ ಈ ಘಟಕಗಳು ಗ್ರಾಮಸ್ಥರಿಗೆ ಕಳೆದ ನಾಲ್ಕು ವರ್ಷದಿಂದ ಒಂದು ಬಾರಿಯೂ ಶುದ್ಧ ನೀರು ಒದಗಿಸಿಲ್ಲ. ಸುಮಾರು ಆರೇಳು ಸಾವಿರ ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಗ್ರಾಮದ ಜನತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ಉಡಾಫೆ ಉತ್ತರ ಹೇಳುತ್ತಾ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಕಾಲ ಹರಣ ಮಾಡುತ್ತಿದ್ದಾರೆ.

ಎಲಿಮುನ್ನೋಳಿ ಗ್ರಾಮವು ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ. ಹೆಸರಿಗೆ ಮಾತ್ರ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿವೆ ಆದರೆ ಉಪಯೋಗವಿಲ್ಲ. ಅಧಿಕಾರಿಗಳು ಇತ್ತ ಗಮನಹರಿಸಬೇಕು.  -ರಸೂಲ ತಹಶಿಲ್ದಾರ ಅಧ್ಯಕ್ಷರು ತಾಜ್‌ ಯುವಕ ಮಂಡಳ, ಎಲಿಮುನ್ನೋಳಿ.

Advertisement

 

-ವಿಶ್ವನಾಥ ನಾಯಿಕ

Advertisement

Udayavani is now on Telegram. Click here to join our channel and stay updated with the latest news.

Next