Advertisement
ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಸದಂತೆ ವರ್ತಕರ ಸಭೆ ಕರೆದು ಪುರಸಭೆ ಆದೇಶಿಸಿದ್ದರೂ ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವರ್ತಕರು ಪ್ಲಾಸ್ಟಿಕ್ ಕೈಚೀಲವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಇನ್ನು ತಾಲೂಕಿನ ಹೋಬಳಿ ಕೇಂದ್ರದಲ್ಲಿ ಪ್ಲಾಸ್ಟಿಕ್ ದಾಳಿ ಮಾಡದೇ ಇರುವುದರಿಂದ ವರ್ತಕರು ನಿರ್ಭೀತವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕಾಗಿರುವ ತಾಲೂಕು ಆಡಳಿತ ಮೌನಕ್ಕೆ ಶರಣಾಗಿದೆ.
Related Articles
Advertisement
ಪುರಾತತ್ವ ಇಲಾಖೆ ಮೌನ: ಪ್ರಧಾನಿ ನರೇಂದ್ರ ಮೋದಿ ಗಾಂಧಿ ಜಯಂತಿ ಯಂದು ಭಾರತ ಪ್ಲಾಸ್ಟಿಕ್ ಮುಕ್ತ ದೇಶವಾಗಬೇಕೆಂಬ ಉದ್ದೇಶದಿಂದ ಪ್ಲಾಸ್ಟಿಕ್ ನಿಷೇಧದ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಪುರಾತತ್ವ ಇಲಾಖೆಯು ಪ್ಲಾಸ್ಟಿಕ್ ಬಳಕೆ ಮಾಡುವವರನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ತನ್ನ ವ್ಯಾಪ್ತಿಗೆ ಬರುವ ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಕೈಚೀಲ ಹಿಡಿದು ತೆರಳುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೆ ವಿಂದ್ಯಗಿರಿ ಚಂದ್ರಗಿರಿ ಪ್ಲಾಸ್ಟಿಕ್ ಮಯವಾಗಲಿದೆ.
ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ: ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜು ಪುರಸಭೆಯಲ್ಲಿ ಎರಡು ಸಭೆ ಮಾಡಿ ತಾಲೂಕಿನಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಯಂತ್ರಣ ಮಾಡಲು ಏಳು ತಂಡ ರಚಿಸಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿ ಎಂ.ಕುಮಾರ್, ತಹಶೀಲ್ದಾರ್ ಜೆ.ಬಿ.ಮಾರುತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಿರಣಕುಮಾರ್, ಅಬಕಾರಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಆಹಾರ ನಿರೀಕ್ಷಕ ಸೇರಿದಂತೆ ಏಳು ತಂಡವಿದ್ದರೂ ಗೋದಾಮುಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಕ್ಕೆ ಪಡೆಯುವಲ್ಲಿ ತಂಡಗಳು ವಿಫಲವಾಗಿವೆ.
ಬೀದಿ ನಾಟಕಗಳ ಮೂಲಕ ಜಾಗೃತಿ: ಪ್ಲಾಸ್ಟಿಕ್ ನಿಷೇಧ ಕುರಿತು ಮಾಹಿತಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಗ್ರಾಮಗಳಲ್ಲಿ ಬೀದಿ ನಾಟಕ, ದಸರಾ ರಜೆ ಮುಗಿದ ಮೇಲೆ ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೂಲಕ ಜಾಗೃತಿ ಜಾಥಾ, ಕರಪತ್ರ ವಿತರಣೆ ಮಾಡಿಸಲಾಗುವುದು ಎಂದರು. ತಾಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ 5 ಗ್ರಾಪಂಗಳನ್ನು ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲಿಗೆ ಆಟೋ ಟಿಪ್ಪರ್ ಮೂಲಕ ಪ್ರತಿ ಮನೆಬಾಗಿಲಿಗೆ ತೆರಳಿ ಕಸ ಸಂಗ್ರಹಣೆ ಮಾಡಲಾಗುವುದು. ಪ್ರತಿ ಮನೆಗೆ ಎರಡು ಬಕೆಟ್ ನೀಡಿ ಒಣಕಸ ಹಾಗೂ ಹಸಿಕಸ ವಿಂಗಡಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚು ದಂಡ ವಸೂಲಿ ಹಾಗೂ ಪ್ಲಾಸ್ಟಿಕ್ ವಶ ಪಡಿಸಿಕೊಂಡಿರುವುದು ಚನ್ನರಾಯಪಟ್ಟಣದಲ್ಲಿ. ಅಕ್ರಮ ಪ್ಲಾಸ್ಟಿಕ್ ಬಳಕೆದಾರರಿಂದ ಪುರಸಭೆ ಈ ವರೆಗೆ ಸುಮಾರು 58 ಸಾವಿರ ರೂ. ದಂಡ ವಸೂಲಿ ಮಾಡಿ ನಾಲ್ಕು ಟನ್ ಪಾಸ್ಲಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆದಿದೆ. ಒಂದೆರಡು ತಿಂಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಯಂತ್ರಣವಾಗಲಿದೆ.-ಎಂ.ಕುಮಾರ್ ಪುರಸಭೆ ಮುಖ್ಯಾಧಿಕಾರಿ. ಪಟ್ಟಣದಲ್ಲಿ ಮಾತ್ರ ಪ್ಲಾಸ್ಟಿಕ್ ಬಳಕೆ ನಿಯಂತ್ರವಾದರೆ ಸಾಲುವುದಿಲ್ಲ. ಗ್ರಾಮೀಣ ಭಾಗದಲ್ಲಿಯೂ ನಿಯಂತ್ರಣ ಆಗಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಿದರೆ ಮಾತ್ರ ತಾಲೂಕು ಪ್ಲಾಸ್ಟಿಕ್ ಮುಕ್ತ ವಾಗಲಿದೆ.
-ಹರ್ಷವರ್ಧನ್, ಸಾಮಾಜಿಕ ಕಾರ್ಯಕರ್ತ * ಶಾಮಸುಂದರ್ ಕೆ. ಅಣ್ಣೇನಹಳ್ಳಿ