Advertisement

ಜಾಗೃತಿ ಮೂಡಿಸಿದರೂ ಪಿಒಪಿ ಮೂರ್ತಿಗೆ ಒಲವು

05:41 PM Aug 20, 2019 | Team Udayavani |

ತುಮಕೂರು: ಶ್ರಾವಣ ಮುಗಿದ ನಂತರ ಭಾದ್ರಪದ ಮಾಸ ಆರಂಭವಾಗುತ್ತಲೇ ಬರುವ ಪವಿತ್ರ ಹಬ್ಬ ಗಣೇಶ ಚತುರ್ಥಿ. ಈ ಸಂದರ್ಭ ಮನೆ, ಸಾರ್ವ ಜನಿಕರವಾಗಿ ಪೂಜಿಸುವ ವಿನಾಯಕನ ಮೂರ್ತಿ ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡ ಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ್ದರೂ, ಕೆಲವೆಡೆ ಪಿಒಪಿ ಮೂರ್ತಿಗಳ ಮಾರಾಟ ಸದ್ದಿಲ್ಲದೇ ನಡೆಯುತ್ತದೆ.

Advertisement

ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಿಂದಲೂ ಪಿಒಪಿ ಗಣೇಶ ಮೂರ್ತಿಗಳು ಮಾರಾಟಕ್ಕೆ ಬರುತ್ತಿವೆ. ಇದನ್ನು ಕೆರೆ-ಕಟ್ಟೆಗಳಲ್ಲಿ ವಿಸರ್ಜಿಸುವುದರಿಂದ ನೀರಿನ ಮಾಲಿನ್ಯ ಉಂಟಾಗಿ ಕೆರೆಯಲ್ಲಿರುವ ಸೂಕ್ಷ್ಮ ಜೀವಿಗಳು ಮೃತಪಡುತ್ತವೆ. ಕ್ಯಾಡ್ಮಿಯಂ, ಪ್ರೋಮಿಯಂ ಮುಂತಾದ ವಿಷದ ರಾಸಾಯನಿಕಗಳು ನೀರಿನಲ್ಲಿ ಕರಗುವುದಿಲ್ಲ ವಾದ್ದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ.

ಕ್ರಮ ವಹಿಸುವಂತೆ ಸೂಚನೆ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿವರ್ಷ ಜಿಲ್ಲೆಯಲ್ಲಿ ಗಣೇಶ ತಯಾರಿಸುವವರ ಕರೆಸಿ ಸಭೆ ನಡೆಸಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಿ ಎಂದು ಹೇಳುತ್ತದೆ. ಆದರೂ ಮಾರುಕಟ್ಟೆಗೆ ಪಿಒಪಿ ಗಣೇಶನ ಮೂರ್ತಿ ಬರುತ್ತದೆ. ಜನರೂ ಅದನ್ನೆ ಖರೀದಿಸಿ, ಪೂಜಿಸಿ ನೀರಿಗೆ ಬಿಡುತ್ತಾರೆ.

ಪೊಲೀಸ್‌ ಇಲಾಖೆಗೂ ಸೂಚಿಸಿರುವ ಮಂಡಳಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಪ್ಲಾಸ್ಟರ್‌ ಆಫ್ ಪ್ಯಾರೀಸ್‌ ಮೂರ್ತಿ ಪ್ರತಿಷ್ಠಾಪಿಸದಂತೆ ಕ್ರಮ ವಹಿಸುವಂತೆ ಹೇಳಿದೆ. ಮಹಾನಗರ ಪಾಲಿಕೆಗೆ ಮೇ 25ರಂದು ಪತ್ರ ಬರೆದು ಪರಿಸರಕ್ಕೆ ಹಾನಿ ಮಾಡುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಬಾರದು ಎಂದು ತಿಳಿಸಿದೆ.

ಪೇಪರ್‌ ಮೋಲ್ಡ್ ಗಣೇಶ ಉಪಕಾರಿ: ನಾವು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿದ್ದು, ಪೇಪರ್‌ ಮೋಲ್ಡ್ ಗಣೇಶನಿಂದ ಪರಿಸರಕ್ಕೆ ಹಾನಿ ಯಾಗುವುದಿಲ್ಲ, ತೂಕವೂ ಇರುವುದಿಲ್ಲ, ಇದರಿಂದ ಜಲಚರಗಳಿಗೆ ತೊಂದರೆಯಿಲ್ಲ.

Advertisement

ನಮಗೆ ಪರಿಸರ ಅಧಿಕಾರಿಗಳು ಸೂಚನೆ ನೀಡಿದಂದಿನಿಂದ ಪರಿಸರ ಸ್ನೇಹಿ ಗಣೇಶನನ್ನೆ ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಮೂರ್ತಿ ತಯಾರಕ ಮಧುಗಿರಿ ತಾಲೂಕಿನ ಪುರವರದ ಗಂಕಾರನಹಳ್ಳಿಯ ಮೋಹನ್‌ಕುಮಾರ್‌. ಪರಿಸರಕ್ಕೆ ಹಾನಿಯಾಗುವ ಬಣ್ಣ ಬಳಸುತ್ತಿಲ್ಲ. ಬದಲಿಗೆ ಗಿಡಗಳಿಂದ ತಯಾರಿಸಿದ ಬಣ್ಣ ಮೂರ್ತಿಗೆ ಬಳಕೆ ಮಾಡುತ್ತಿದ್ದೇವೆ. ಆದರೆ ಪರಿಸರಸ್ನೇಹಿ ಮೂರ್ತಿ ಕೊಳ್ಳುವವರೆ ಇಲ್ಲ. ಎಲ್ಲರೂ ಬಣ್ಣ ಬಣ್ಣದ ಮೂರ್ತಿ ಖರೀದಿಸುತ್ತಾರೆ. ಹಿಂದೆ ಆಯಿಲ್ ಬಣ್ಣ ಮೂರ್ತಿ ಗಳಿಗೆ ಬಳಿಯಲಾಗುತ್ತಿತ್ತು, ಆದರೆ ಇತ್ತೀಚೆಗೆ ವಾಟರ್‌ ಪೈಂಟ್ ಬಳಿಯುತ್ತಿದ್ದೇವೆ ಎಂದು ಹೇಳುತ್ತಾರೆ.

ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತಿತರೆ ಭಾಗಗಳಿಂದ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಬಣ್ಣ ತುಂಬಿದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬರುತ್ತವೆ. ಅವುಗಳಿಗೆ ಬೇಡಿಕೆ ಇರುತ್ತದೆ. ಎಲ್ಲ ಕಡೆ ಒಂದೇ ರೀತಿಯ ಬಣ್ಣ ರಹಿತ ಗಣೇಶ ಮೂರ್ತಿ ಮಾರಾಟ ಮಾಡಿ ಎಂದು ಕಟ್ಟುನಿಟ್ಟಿನ ಆದೇಶ ಮಾಡಿದರೆ ಎಲ್ಲರೂ ಮಣ್ಣಿನಿಂದ ತಯಾರಿಸಿದ ಗಣೇಶ ಮಾರಾಟ ಮಾಡಬಹುದು.

ಸಾರ್ವಜನಿಕರೂ ಇದನ್ನು ಅರಿತು ಪರಿಸರ ಸ್ನೇಹಿ ಗಣೇಶ ಮೂರ್ತಿ ಖರೀದಿಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂಬುದು ಉದಯವಾಣಿ ಕಳಕಳಿ.

 

● ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next