Advertisement

ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಹರಡಿದ ಸಾಂಕ್ರಾಮಿಕ ರೋಗ

02:05 AM Jun 30, 2018 | Karthik A |

ವೇಣೂರು: ಆರೋಗ್ಯ ಇಲಾಖೆಯ ವಿವಿಧ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಬೆಳ್ತಂಗಡಿ ತಾ|ನ ಅಂಡಿಂಜೆ ಗ್ರಾಮವೊಂದರಲ್ಲೇ 11 ಅಧಿಕೃತ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಸುಮಾರು 20ಕ್ಕೂ ಅಧಿಕ  ಶಂಕಿತ ಡೆಂಗ್ಯೂ ಲಕ್ಷಣಗಳು ಕಂಡು ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಮಳೆಗಾಲ ಪ್ರಾರಂಭದಲ್ಲೇ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯ ಕರ್ತೆಯರು ಅಂಡಿಂಜೆ ಹಾಗೂ ಕೊಕ್ರಾಡಿ ಗ್ರಾಮದ ಮನೆಮನೆಗಳಿಗೆ ತೆರಳಿ ಮಳೆಗಾಲದ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಅಲ್ಲದೆ ಕರಪತ್ರಗಳನ್ನು ಹಂಚಿ ಮುನ್ನೆಚ್ಚರಿಕೆ ನೀಡಿದ್ದರು. ಈ ಎಲ್ಲ ಕಾರ್ಯಕ್ರಮಗಳ ಹೊರತಾ ಗಿಯೂ ಒಂದೇ ಗ್ರಾಮದಲ್ಲಿ 11ಕ್ಕೂ ಅಧಿಕ ಮಂದಿ ಡೆಂಗ್ಯೂಗೆ ತುತ್ತಾಗಿದ್ದಾರೆ. ಹಲವು ಮಂದಿಯಲ್ಲಿ ಡೆಂಗ್ಯೂ ಲಕ್ಷಣ ಪತ್ತೆಯಾಗಿದೆ. ನಾರಾವಿ ಪ್ರಾ. ಆರೋಗ್ಯ ಕೇಂದ್ರ ವ್ಯಾಪ್ತಿಯ ಎಲ್ಲ 15 ಮಂದಿ ಆಶಾ ಕಾರ್ಯಕರ್ತೆಯರು, ಇಬ್ಬರು ಆರೋಗ್ಯ ಸಹಾಯಕರು ಅಂಡಿಂಜೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.

ಮುಚ್ಚಿರುವ ಆರೋಗ್ಯ ಉಪಕೇಂದ್ರ
ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ 5 ಕಡೆಗಳಲ್ಲಿ ಉಪಕೇಂದ್ರಗಳಿವೆ. ಕೇವಲ 3 ಮಂದಿ ಆರೋಗ್ಯ ಸಹಾಯಕಿಯರು ಈ 5 ಕಡೆಯ ಉಪಕೇಂದ್ರಗಳ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಹೀಗಾಗಿ ಉಪಕೇಂದ್ರದಲ್ಲಿ ಪ್ರತೀ ದಿನ ಸಮರ್ಪಕ ಸೇವೆ ನೀಡಲು ಸಾಧ್ಯವಿಲ್ಲ ಎಂಬುದು ಸಹಾಯಕಿಯರ ಅಳಲು. ಅಂಡಿಂಜೆ ಉಪಕೇಂದ್ರದಲ್ಲಿ ವಾರದ ಪ್ರತೀ ಬುಧವಾರ ಸೇವೆ ನೀಡಬೇಕಾದ ಆರೋಗ್ಯ ಸಹಾಯಕಿ ಕೆಲವೊಮ್ಮೆ ಮೀಟಿಂಗ್‌, ಟ್ರೈನಿಂಗ್‌ಗೆಂದು ತೆರಳುತ್ತಿದ್ದು, ವಾರಪೂರ್ತಿ ಮುಚ್ಚಿರುವುದರಿಂದ ಆರೋಗ್ಯ ಉಪಕೇಂದ್ರವು ಜನರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ವಾರದ ಉಳಿದ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮಕ್ಕಾಗಿ ಆಶಾ ಕಾರ್ಯಕರ್ತರ ಸಹಕಾರದಲ್ಲಿ ಮನೆ ಭೇಟಿ ನೀಡುತ್ತಿದ್ದಾರೆ. ಅಂಡಿಂಜೆ ಗ್ರಾಮದಲ್ಲಿ  ಡೆಂಗ್ಯೂ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಕೊಕ್ರಾಡಿ ಆರೋಗ್ಯ ಉಪಕೇಂದ್ರವು ದಿನವಿಡೀ ಕಾರ್ಯಾಚರಿಸಬೇಕೆನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ. ಇದೀಗ ಈ ಸಾಂಕ್ರಾಮಿಕ ಖಾಯಿಲೆ ಅತೋಟಿಗೆ ಬಂದಿದ್ದು, ಜನ ತಕ್ಕಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

ಆರೋಗ್ಯ ನೀಡುವವರಿಗೇ ಆನಾರೋಗ್ಯ!
ಕಳೆದ ಹಲವು ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿ ಇಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗುತ್ತಲೇ ಇದೆ. ಈ ಬಾರಿ ವೇಣೂರು, ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ, ಶಿಕ್ಷಕರಿಗೆ, ಆಶಾ ಕಾರ್ಯಕರ್ತೆಯರಿಗೆ ಇದಕ್ಕಿಂತ ಮೇಲಾಗಿ ಆರೋಗ್ಯ ಸಹಾಯಕಿಯವರಲ್ಲೇ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಡೆಂಗ್ಯೂಗೆ ತುತ್ತಾದ ಕುಕ್ಕೇಡಿ ಜಿ.ಪಂ. ಸದಸ್ಯ ಹಾಗೂ ನಾರಾವಿ ಆರೋಗ್ಯಕೇಂದ್ರದ ಆರೋಗ್ಯ ಸಹಾಯಕಿ ಚೇತರಿಕೆ ಕಂಡುಕೊಂಡಿದ್ದಾರೆ.

ಫಾಗಿಂಗ್‌ ನಡೆಸದ ಇಲಾಖೆ
ಆರೋಗ್ಯ ಇಲಾಖೆ ತಕ್ಷಣ ಫಾಗಿಂಗ್‌ ನಡೆಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಅಂಡಿಂಜೆ ಗ್ರಾಮದ ಆರೋಗ್ಯ ಸಹಾಯಕಿಯನ್ನು ಕೇಳಿದರೆ ಫಾಗಿಂಗ್‌ ಗೆ ತಾಲೂಕು ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಫಾಗಿಂಗ್‌ ನಡೆಸುತ್ತೇವೆ ಎಂದಿದ್ದಾರೆ. ಆದರೆ ಕಾಯಿಲೆ ಹರಡುತ್ತಿದ್ದು, ಫಾಗಿಂಗ್‌ ನಡೆಸಲು ಆರೋಗ್ಯ ಇಲಾಖೆ ಮೀನಾವೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ರೋಗ ಲಕ್ಷಣಗಳು
ಡೆಂಗ್ಯೂ ಜ್ವರ ವೈರಸ್‌ ನಿಂದ ಉಂಟಾಗುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್‌ ಈಜಿಪ್ಟೈ, ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಹಾಗೂ ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ಬಾಯಿ-ಮೂಗು-ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದಂತಹ ಗುರುತುಗಳು ಕಾಣಿಸಿಕೊಳ್ಳುತ್ತದೆ. ರೋಗದ ಲಕ್ಷಣನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಂತಹ ಲಕ್ಷಣಗಳು ಕಂಡು ಬಂದರೆ ತತ್‌ ಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು.

ಧೈರ್ಯ ತುಂಬಿದ್ದೇವೆ
ಅಂಡಿಂಜೆ ಹಾಗೂ ಕೊಕ್ರಾಡಿ ಗ್ರಾಮಗಳಲ್ಲಿ ಜೂನ್‌ ತಿಂಗಳಿನಿಂದಲೇ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ಆಶಾ ಕಾರ್ಯಕರ್ತರ ಸಹಕಾರದಲ್ಲಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಆದರೂ 11 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದ್ದು, ನಾರಾವಿ ಆರೋಗ್ಯ ಕೇಂದ್ರದ ಎಲ್ಲ ಅಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರು ಅಂಡಿಂಜೆ ಗ್ರಾಮದಲ್ಲಿ ಫೀಲ್ಡ್‌ ಮಾಡಿ ಜನತೆಗೆ ಧೈರ್ಯ ತುಂಬಿದ್ದೇವೆ.
– ಸವಿತಾ, ಆರೋಗ್ಯ ಸಹಾಯಕಿ, ಕೊಕ್ರಾಡಿ ಆರೋಗ್ಯ ಉಪಕೇಂದ್ರ

ಪೂರ್ಣ ಸಹಕಾರ
ಅಂಡಿಂಜೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಫಾಗಿಂಗ್‌ ನಡೆಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದು, ಪಂ. ಪೂರ್ಣ ಸಹಕಾರ ನೀಡಲಿದೆ.
– ಮೋಹನ ಅಂಡಿಂಜೆ, ಅಧ್ಯಕ್ಷರು, ಅಂಡಿಂಜೆ ಗ್ರಾ.ಪಂ.

ತತ್‌ ಕ್ಷಣ ಫಾಗಿಂಗ್‌
ಸಾಂಕ್ರಾಮಿಕ ರೋಗಗಳ ಬಗ್ಗೆ ಅಂಡಿಂಜೆ ಗ್ರಾಮದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಆದರೂ ಕೆಲವು ಮಂದಿಗೆ ಡೆಂಗ್ಯೂ ಲಕ್ಷಣ ಪತ್ತೆಯಾಗಿದೆ. ಎಲಿಜ ಟೆಸ್ಟ್‌ನಿಂದ ಮಾತ್ರ ಡೆಂಗ್ಯೂ ರೋಗ ಪತ್ತೆಹಚ್ಚಲು ಸಾಧ್ಯ. ಅಲ್ಲಿ ಫಾಗಿಂಗ್‌ ನಡೆಸುವ ಬಗ್ಗೆ ಆರೋಗ್ಯ ನಿರೀಕ್ಷಕರು, ಅಲ್ಲಿನ ತಾ.ಪಂ. ಸದಸ್ಯರಲ್ಲಿ ಮತ್ತು ಅಂಡಿಂಜೆ ಗ್ರಾ.ಪಂ.ನಲ್ಲಿ ಮಾತನಾಡಿದ್ದೇನೆ. ಮಳೆಯಲ್ಲಿ ಫಾಗಿಂಗ್‌ ನಡೆಸಿದರೆ ಪ್ರಯೋಜನ ಬರುವುದಿಲ್ಲ. ಮಳೆ ಕಡಿಮೆಯಾದ ತತ್‌ ಕ್ಷಣ ಫಾಗಿಂಗ್‌ಗೆ ಕ್ರಮ ಕೈಗೊಳ್ಳುತ್ತೇವೆ.
– ಡಾ| ಕಲಾಮಧು, ತಾ| ವೈದ್ಯಾಧಿಕಾರಿ, ಬೆಳ್ತಂಗಡಿ

— ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next