ಹೊಸದಿಲ್ಲಿ : ತಾಸುಗಟ್ಟಲೆ ತಡವಾಗಿ ಗುರಿ ತಲುಪುವುದಕ್ಕೆ ಭಾರತೀಯ ರೈಲುಗಳು ಹೆಸರುವಾಸಿಯಾಗಿವೆ. ಆದರೆ ಶರವೇಗದ ತೇಜಸ್ ಎಕ್ಸ್‌ಪ್ರೆಸ್ ರೈಲಿನ ಕಥೆ ಬೇರೆಯೇ ಇದೆ.
ನಿನ್ನೆ ಭಾನುವಾರ ತೇಜಸ್ ಎಕ್ಸ್‌ಪ್ರೆಸ್ ರೈಲು ಗೋವೆಯಿಂದ ಮೂರು ತಾಸು ತಡವಾಗಿ ಹೊರಟಿತು. ಆದರೂ ಅದು ಒಂದು ನಿಮಿಷ ಮುಂಚಿತವಾಗಿ ಮುಂಬಯಿಯನ್ನು ತಲುಪಿತು !
ಭಾನುವಾರ ಬೆಳಗ್ಗೆ ಮುಂಬಯಿಗೆ 7.30ಕ್ಕೆ ಗೋವೆಯಿಂದ ಹೊರಡಬೇಕಿದ್ದ ತೇಜಸ್ ಎಕ್ಸ್‌ಪ್ರೆಸ್ ಮೂರು ತಾಸು ವಿಳಂಬಿತವಾಗಿ 10.30ಕ್ಕೆ ಹೊರಟಿತು. ರಾತ್ರಿ 7.45ಕ್ಕೆ ಮುಂಬಯಿ ತಲುಪಬೇಕಿದ್ದ ಈ ರೈಲು 7.44ಕ್ಕೆ ತಲುಪುವ ಮೂಲಕ 1 ನಿಮಿಷ ಮೊದಲೇ ಗುರಿ ತಲುಪಿದ ಸಾಧನೆ ಮಾಡಿತು.
ಗೋವೆಯಿಂದ ಹೊರಡುವಾಗ 3 ತಾಸು ತಡವಾದರೂ ತೇಜಸ್ ಎಕ್ಸ್‌ಪ್ರೆಸ್ ರೈಲು ಕರ್ಮಾಲಿ ಮತ್ತು ಕುಡಾಲ್ ನಡುವಿನ ದೂರವನ್ನು ಗಂಟೆಗೆ 153 ಕಿ.ಮೀ. ವೇಗದಲ್ಲಿ ಸಾಗುವ ಮೂಲಕ ನಷ್ಟವಾದ ಪ್ರಯಾಣ ಸಮಯವನ್ನು ಆಂಶಿಕವಾಗಿ ಭರ್ತಿ ಮಾಡಿಕೊಂಡಿತು.
ಅನಂತರದಲ್ಲಿ ಕುಡಾಲ್ ಮತ್ತು ರತ್ನಾಗಿರಿಯ ನಡುವೆ ಗಂಟೆಗೆ 137 ಕಿ.ಮೀ ವೇಗದಲ್ಲಿ ಹಾಗೂ ರತ್ನಾಗಿರಿಯಿಂದ ಪನ್‌ವೇಲ್ ವರೆಗಿನ ಮಾರ್ಗವನ್ನು ಗಂಟೆಗೆ 125 ಕಿ.ಮೀ. ವೇಗದಲ್ಲಿ ಕ್ರಮಿಸುವ ಮೂಲಕ ತೇಜಸ್ ಮುಂಬಯಿಯನ್ನು ನಿಗದಿತ ವೇಳೆಗಿಂತ ಒಂದು ನಿಮಿಷ ಮೊದಲೇ ತಲುಪಿತು.
ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ತೇಜಸ್ ಎಕ್ಸ್‌ಪ್ರೆಸ್ ಗಂಟೆಗೆ 200 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ವಾರದ 3 ದಿನಗಳಲ್ಲಿ ಹಾಗೂ ಮಳೆಗಾಲಕ್ಕೆ ಹೊರತಾದ ಅವಧಿಯಲ್ಲಿ ವಾರದಲ್ಲಿ 5 ದಿನ ತೇಜಸ್ ಎಕ್ಸ್‌ಪ್ರೆಸ್ ಕರ್ಮಾಲಿ – ಮುಂಬಯಿ ನಡುವೆ ಸಂಚರಿಸುತ್ತದೆ.