Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಬಾರಿ ಸ್ಪರ್ಧಿ ಸಿದವರಲ್ಲೊಬ್ಬರು ಹಾಲಿ ಸಚಿವ ಎಸ್. ಅಂಗಾರ. 7 ಬಾರಿ ಸುಳ್ಯ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಅಂಗಾರರೂ ಮೊದಲ ಬಾರಿ 1989ರಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ಅವರು 33,560 ಮತಗಳಿಸಿದರೆ ಅಂಗಾರ 27,720 ಮತಗಳನ್ನಷ್ಟೇ ಗಳಿಸಿದ್ದರು. ಅಲ್ಲಿಗೆ ನಿಲ್ಲಿಸದ ಅಂಗಾರ 1994ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದರು. ಎರಡನೇ ಬಾರಿ ಸ್ಪರ್ಧೆಯಲ್ಲಿ ಕುಶಲರನ್ನು ಸೋಲಿಸಿದ ಅಂಗಾರ ಗೆಲುವು ಸಾಧಿಸಿದರು. ಅಂದಿನಿಂದ ಇಲ್ಲಿಯವರೆಗೆ 6 ಬಾರಿ ಗೆಲುವಿನ ರುಚಿ ಕಂಡಿದ್ದಾರೆ.
ಹಿಂದೆ ಬಿಜೆಪಿಯ ಮೊದಲಿನ ಪಕ್ಷವಾದ ಜನಸಂಘಕ್ಕೆ ಗೆಲುವೇ ಅಪರೂಪ ಎಂಬ ಪರಿಸ್ಥಿತಿ ಇದ್ದ ಕಾಲ. ಆಗ ಪುತ್ತೂರಿನಿಂದ ರಾಮಭಟ್ ಕೆ. ಅವರು ಸ್ಪರ್ಧಿಸಿದ್ದರು. 1957, 1962, 1967, 1972 ಹೀಗೆ ಪ್ರತಿ ಚುನಾವಣೆಯಲ್ಲಿ ಸೋಲು ಕಾಣುತ್ತಲೇ ಹೋಯಿತು. ಆದರೂ ಹಠ ಬಿಡದೆ ಸ್ಪರ್ಧಿಸಿದ ರಾಮಭಟ್ ಕೊನೆಗೂ ತಮ್ಮ ಐದನೇ ಚುನಾವಣೆಯಲ್ಲಿ 1978ರಲ್ಲಿ ಗೆಲುವು ಸಾಧಿಸಿದರು. 1983ರಲ್ಲಿ ಮತ್ತೆ ಎರಡನೇ ಬಾರಿಗೆ ಶಾಸಕರಾದರು. ಮತ್ತೂಮ್ಮೆ 1985ರಲ್ಲಿ ಸ್ಪರ್ಧಿಸಿದರೂ ವಿನಯಕುಮಾರ್ ಸೊರಕೆ ಅವರ ವಿರುದ್ಧ ಸೋಲಾಯಿತು. ಬಳಿಕ ಅವರು ಸ್ಪರ್ಧಿಸಲಿಲ್ಲ. ಬೇರೆ ಕಡೆ ಹೋಗಿ ಗೆದ್ದರು!
ಬಿಜೆಪಿ ಹಿರಿಯ ನಾಯಕ ರುಕ್ಮಯ ಪೂಜಾರಿ ಅವರೂ 1972ರಲ್ಲಿ ಬಂಟ್ವಾಳ (ಪಾಣೆಮಂಗಳೂರು) ಕ್ಷೇತ್ರದಿಂದ ಸ್ಪರ್ಧಿಸಿ ಸಿಪಿಐನ ಬಿ.ವಿ. ಕಕ್ಕಿಲ್ಲಾಯರ ವಿರುದ್ಧ ಸೋಲನುಭವಿಸಿದರು. 1978ರಲ್ಲಿ ಮತ್ತೆ ಸೋಲಾಯಿತು. ಬಂಟ್ವಾಳ ಕ್ಷೇತ್ರದಿಂದ ಆ ಬಳಿಕ ನೆರೆಯ ವಿಟ್ಲ ಕ್ಷೇತ್ರಕ್ಕೆ ರುಕ್ಮಯ ಪೂಜಾರಿ ವರ್ಗಾವಣೆಗೊಂಡರು. ಅಲ್ಲಿ 1983ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಕಾಂಗ್ರೆಸ್‌ನ ಬಿ. ಶಿವರಾಮ ಶೆಟ್ಟಿ ಅವರ ವಿರುದ್ಧ ಗೆಲುವು ಅವರ ಪಾಲಿಗೆ ದಕ್ಕಿತು. 1985ರಲ್ಲಿ ಅವರಿಗೆ ಮತ್ತೆ ಸೋಲು, 1989, 1994ರಲ್ಲಿ ನಿರಂತರ ಎರಡು ಗೆಲುವು. 1999ರಲ್ಲಿ ಸೋತ ಬಳಿಕ ಸ್ಪರ್ಧೆಗೆ ಇಳಿಯಲಿಲ್ಲ.
Related Articles
ಜನತಾ ದಳದ ಅಮರನಾಥ ಶೆಟ್ಟಿ ಜಿಲ್ಲೆಯಲ್ಲಿ ಹೆಸರಾಂತ ರಾಜಕಾರಣಿ. ಅವರೂ 1972ರಲ್ಲಿ ಮೂಡುಬಿದಿರೆ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಸೋತರು. ಮತ್ತೆ 1978ರಲ್ಲೂ ಕಾಂಗ್ರೆಸ್ ವಿರುದ್ಧ ಸೋಲು. 1983ರಲ್ಲಿ ಅವರು ಜನತಾಪಾರ್ಟಿಯಿಂದ ಸ್ಪರ್ಧಿಸಿ ಗೆದ್ದರು. 1985ರಲ್ಲೂ ಅವರೇ ಶಾಸಕರು. 1989ರಲ್ಲಿ ಸೋಲು, 1994ರಲ್ಲಿ ಮತ್ತೆ ಗೆಲುವು. ಜಿಲ್ಲೆಯಲ್ಲಿ ಜನತಾದಳದ ಪ್ರಭಾವ ಕಡಿಮೆಯಾಯಿತು, 1999, 2004, 2008, 2013ರಲ್ಲಿ ಸ್ಪರ್ಧಿಸಿದರೂ ಅವರಿಗೆ ಅವರದ್ದೇ ಆದ ಒಂದಷ್ಟು ಮತಗಳು ಸಿಕ್ಕಿದ್ದು ಬಿಟ್ಟರೆ ಗೆಲ್ಲಲಾಗಲೇ ಇಲ್ಲ!
Advertisement
ಹಲವರಿಗೆ ಮೊದಲ ಯತ್ನದಲ್ಲೇ ಯಶಮೊದಲ ಯತ್ನದಲ್ಲೇ ಗೆಲುವು ಸಾಧಿಸಿದವರು ಹಲವು ಮಂದಿ ಇದ್ದಾರೆ. ಅದರಲ್ಲೂ ಸುರತ್ಕಲ್ ಕ್ಷೇತ್ರದಲ್ಲಿ ಅಂತಹ ವಿದ್ಯಮಾನ ಹೆಚ್ಚು. ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್, ಕಾಂಗ್ರೆಸ್‌ನ ವಿಜಯಕುಮಾರ್ ಶೆಟ್ಟಿ, ಕೃಷ್ಣ ಪಾಲೆಮಾರ್, ಹಾಲಿ ಶಾಸಕ ಡಾ| ವೈ. ಭರತ್ ಶೆಟ್ಟಿ ಇವರೆಲ್ಲ ಮೊದಲ ಯತ್ನದಲ್ಲೇ ಗೆದ್ದು ಬಂದವರು.
ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಕೂಡ 1999ರಲ್ಲಿ ಮೊದಲ ಸ್ಪರ್ಧೆಯಲ್ಲೇ ಗೆದ್ದರು. ಅಷ್ಟೇ ಅಲ್ಲ ನಿರಂತರವಾಗಿ 2004, 2008, 2013ರಲ್ಲಿ ಗೆದ್ದರು, ಸಚಿವರೂ ಆದರು. 2018ರಲ್ಲಿ ಸೋತಿರುವ ಅವರು ಈಗ ಕಣದಲ್ಲಿಲ್ಲ. - ವೇಣುವಿನೋದ್ ಕೆ.ಎಸ್.