Advertisement
ಹೊನ್ನಾವರದಿಂದ ಸುಮಾರು ಆರು ಕಿಲೋ ಮೀಟರ್ ದೂರದ ವರನಕೇರಿಯಲ್ಲಿದೆ ನಮ್ಮ ಮನೆ. 1900ರಲ್ಲಿ ಕಟ್ಟಿದ ನಮ್ಮ ಮನೆ ಊರಿನಲ್ಲಿ ಕಟ್ಟಿದ ಮೊದಲ ಹೆಂಚಿನ ಮನೆಯಾಗಿತ್ತು. ಹೀಗಾಗಿ ಹೆಂಚಿನ ಮನೆಯೆಂದೇ ಹೆಸರು ಪಡೆದಿತ್ತು. ಅವಿಭಕ್ತ ಕುಟುಂಬವಾಗಿದ್ದು, ದೊಡ್ಡಪ್ಪ, ಚಿಕ್ಕಪ್ಪನವರು, ಮಕ್ಕಳು, ಮೊಮ್ಮಕ್ಕಳು ಸೇರಿ ಸುಮಾರು ಮೂವತ್ತು ಮಂದಿ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿದ್ದ ಮನೆಯದು.
Related Articles
Advertisement
ಬತ್ತದ ಗದ್ದೆಯಲ್ಲಿ ಒಂದು ಮರದ ಮೇಲೆ ಗುಡಿಸಲು ಕಟ್ಟಿಕೊಂಡು ಅದರಲ್ಲಿ ಕುಳಿತು ತಮಟೆ ಬಾರಿಸುವುದು ಬಹಳ ಆನಂದ ಕೊಡುತ್ತಿತ್ತು. ರಾತ್ರಿ ಅಣ್ಣ ಅಥವಾ ತಂದೆ ಇಲ್ಲಿಗೆ ಹೋಗಿ ದೊಡ್ಡದಾಗಿ ಕೊಹೋ ಎಂದು ಕೂಗುತ್ತ ಅಲ್ಲಿಯೇ ನಿದ್ರೆ ಹೋಗುತ್ತಿದ್ದರು. ಮಧ್ಯೆ ಎಚ್ಚರವಾದಾಗ ಮತ್ತೆ ಕೋಹೋ ಎಂದು ಕೂಗುವುದು. ಒಮ್ಮೆ ನಾನೂ ರಾತ್ರಿ ಒಬ್ಬನೇ ಹೋಗಿ ಮರದ ಮೇಲಿನ ಗುಡಿಸಲಿನಲ್ಲಿ ಮಲಗಬೇಕೆಂದು ಹಠ ಹಿಡಿದು ಹೋಗಿದ್ದೆ. ರಾತ್ರಿ ದೀಪಗಳೆಲ್ಲ ಆರಿದಾಗ, ಊಂ ಊಂ ಎನ್ನುತ್ತಿದ್ದ ಗುಮ್ಮಕ್ಕಿಯ ಕೂಗಿಗೆ ಹೆದರಿ ತಿಂಗಳ ಬೆಳಕಿನಲ್ಲಿ ಮನೆಗೆ ಬಂದು ತಂದೆಯವರ ಪಕ್ಕ ಮಲಗಿ ನಿದ್ರೆ ಹೋಗಿದ್ದೆ.
ನಮ್ಮ ಕೊಟ್ಟಿಗೆ ಮನೆ ಹಿಂದೆ ಸುಮಾರು ಹತ್ತು ಮೀಟರ್ ದೂರದಲ್ಲಿತ್ತು. ಬಹಳ ಸಣ್ಣವನಿದ್ದಾಗ ಹುಲಿ ನಮ್ಮ ಕೊಟ್ಟಿಗೆಗೆ ಬಂದು ದನ ತಿಂದ ಪ್ರಸಂಗವೊಂದು ನಡೆದಿತ್ತು. ತಂದೆಯವರು ಆಗಾಗ ಪಕ್ಕದ ಊರಿನ ಜನರು ಸೇರಿ ಕಾಡಾನೆಯನ್ನು ಓಡಿಸಿದ್ದು, ಕಾಡು ನಾಯಿಯ ಹಿಂಡನ್ನು ಕಂಡು ಓಡಿದ ಕಥೆಗಳನ್ನು ಹೇಳುತ್ತಿದ್ದರು. ಮನೆಯ ಅಂಗಳದಲ್ಲಿ ನಾಗರ ಹಾವು ತಿರುಗಾಡುವುದು ಬಹಳ ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ಹಾಸಿಗೆಯಡಿ ಪಡಚುಳ, ಹಾವಿನ ಮರಿ ಕಾಣುವುದು ಸಾಮಾನ್ಯವಾಗಿತ್ತು.
ಒಮ್ಮೆ ನಾನು ಬೆಳಗ್ಗೆ ದೋಸೆ ತಿನ್ನುತ್ತಾ ಕುಳಿತಿದ್ದೆ. ಆಗ ಹೊಳೆ ಬದಿಯಿಂದ ಯಾರೋ ಜೋರಾಗಿ ತಂದೆಯವರನ್ನು ಕೂಗಿದರು. ನಾವೆಲ್ಲ ಓಡಿ ಹೋಗಿ ನೋಡಿದಾಗ ಆಶ್ಚರ್ಯ ಕಾದಿತ್ತು. ದೊಡ್ಡ ಹೆಬ್ಟಾವೊಂದು ಹೊಳೆಯ ದಡದಲ್ಲಿ ಮಲಗಿತ್ತು. ಯಾವುದೋ ಪ್ರಾಣಿಯನ್ನು ತಿಂದು ನಿದ್ರೆ ಮಾಡುತ್ತಿತ್ತು. ಊರ ಜನರೆಲ್ಲರೂ ಸೇರಿ ಹರಿತವಾದ ಕಟ್ಟಿಗೆಯಿಂದ ಇರಿದು ಹಾವನ್ನು ಕೊಂದರು. ಅದರ ಮೇಲೆ ಕಟ್ಟಿಗೆ ಇಟ್ಟು, ಚಿಮಣಿ ಎಣ್ಣೆ ಸುರಿದು, ಬೆಂಕಿ ಹಚ್ಚಿದರು. ತತ್‌ಕ್ಷಣ ನಿದ್ದೆಯಿಂದ ಎದ್ದ ಹಾವು ಒದ್ದಾಡಿತು. ನಾವೆಲ್ಲ ಹೆದರಿ ಓಡಿದ್ದೆವು. ಹೀಗೆ ಕಡ್ಕಲ್ ಎಷ್ಟು ಸುಂದರವಾಗಿತ್ತೋ ಅಷ್ಟೇ ಅಪಾಯಕಾರಿಯೂ ಆಗಿತ್ತು!
ಬಹಳ ಸೌಮ್ಯ ಸ್ವಭಾವದ ತಂದೆಯವರು ನೋಡಲಿಕ್ಕೆ ಗಾಂಧಿ ತಾತನಂತೆ ಇದ್ದರು. ಅಮ್ಮ ಬಹಳ ಬುದ್ಧಿವಂತೆ. ಮನೆಯ ಯಜಮಾನಿಯಾಗಿ ಪ್ರತಿಯೊಂದು ಕೆಲಸ, ಹಣಕಾಸಿನ ವ್ಯವಹಾರ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಳು. ಮನೆ ನಡೆಸಿಕೊಂಡು ಹೋಗುವಲ್ಲಿ ಎಷ್ಟು ಬಿಗಿಯೋ ಅಷ್ಟೇ ಮೃದು ಮನಸ್ಸು ಅವಳದ್ದು. ಮನೆಯ ಮುಂದೆ ಹಾದು ಹೋಗುವ ಯಾವುದೇ ವ್ಯಕ್ತಿಯನ್ನು ಮಾತನಾಡಿಸದೆ ಬಿಡುವವಳಲ್ಲ. ಅವರನ್ನು ಕರೆದು ಕುಳ್ಳಿರಿಸಿ ಅವರಿಗೆ ಏನಾದರೂ ಕುಡಿಯಲಿಕ್ಕೆ ಅಥವಾ ತಿನ್ನಲಿಕ್ಕೆ ಕೊಡಲೇಬೇಕು. ಮನೆಯ ಕೆಲಸಕ್ಕೆ ಬರುವ ಒಕ್ಕಲಿಗರಿಗೆ ಪ್ರೀತಿಯಿಂದ ಉಣಬಡಿಸಿ ಉಪಚಾರ ಮಾಡುತ್ತಿದ್ದಳು. ಹೀಗಾಗಿ ಊರಿನ ಒಕ್ಕಲಿಗರಿಗೆ ನನ್ನ ತಾಯಿಯನ್ನು ಕಂಡರೆ ತುಂಬಾ ಗೌರವ. ಒಡತಿ ಎಂದೇ ಸಂಬೋಧಿಸುತ್ತಿದ್ದರು.
ಒಕ್ಕಲಿಗರಲ್ಲಿ ಮನೆಗೆ ಖಾಯಂ ಆಗಿ ಬರುತ್ತಿದ್ದ ಮಾಸ್ತಿ, ಹನುಮಂತ ಮತ್ತು ರಾಮ ಅವರ ಮೇಲೂ ನಮ್ಮ ತಾಯಿಗೆ ಅತಿ ಪ್ರೀತಿ. ರಾಮನು ರೌಡಿಯಂತೆ ನಮ್ಮ ಊರನ್ನೇ ಹೆದರಿಸುತ್ತಿದ್ದ, ಆದರೆ ನನ್ನ ಅಮ್ಮನ ಮುಂದೆ ಮಾತ್ರ ಮೊಲದ ಮರಿಯಂತೆ ಇರುತ್ತಿದ್ದ.
ಕೊಟ್ಟಿಗೆಯಲ್ಲಿ ಹಾಲು ಕೊಡುವ ಮೂರು ಹಸುಗಳಿದ್ದವು. ಅವುಗಳಲ್ಲಿ ಎರಡು ಹಸುಗಳು ದೊಣ್ಣೆ ಹಿಡಿದು ಮುಂದೆ ನಿಂತರೆ ಮಾತ್ರ ಹಾಲು ಕೊಡುತ್ತಿತ್ತು. ಹೀಗಾಗಿ ಹಾಲು ಕರೆಯುವಾಗ ಯಾರಾದರೊಬ್ಬರು ಅವುಗಳ ಮುಂದೆ ದೊಣ್ಣೆ ಹಿಡಿದು ನಿಲ್ಲಬೇಕಿತ್ತು.
ಒಂದು ದಿನ ಬೆಳಗ್ಗೆ ದೊಣ್ಣೆ ಹಿಡಿದು ನಿಲ್ಲಲು ಅಮ್ಮ ನನಗೆ ಕೊಟ್ಟಿಗೆಗೆ ಬಾ ಎಂದು ಕರೆದುಕೊಂಡು ಹೋದಳು. ಒಂದು ಹಸುವಿನ ಹಾಲು ಹಿಂಡಿ ಎರಡನೇ ಹಸುವಿಗೆ ಕೈ ಹಾಕುತ್ತಿದ್ದಳು. ಅದೇ ಸಮಯದಲ್ಲಿ ಕೊಟ್ಟಿಗೆಯ ಹೊರಗಿರುವ ತೋಟದಿಂದ ಕೂಗೊಂದು ಕೇಳಿ ಬಂತು. ಹೊರಗೆ ಓಡಿ ಬಂದು ನಾನು ನೋಡಿದೆ. ರಾಮ ಓಡಿ ಬರುತ್ತಿದ್ದ. ಅವನ ಹಿಂದೆ ಹಂದಿಯೊಂದು ಅಟ್ಟಿಸಿಕೊಂಡು ಬರುತ್ತಿತ್ತು. ನಾನು ಗಾಬರಿಯಾಗಿ ದಿಕ್ಕು ತೋಚದೆ ಮನೆಯತ್ತ ಓಡಲು ಪ್ರಾರಂಭಿಸಿದೆ.
ರಾಮ ಒಂದು ತೆಂಗಿನ ಮರ ಹತ್ತಿ ತಪ್ಪಿಸಿಕೊಂಡು ಬಿಟ್ಟ. ಆಗ ಹಂದಿಯ ಕಣ್ಣು ನನ್ನ ಮೇಲೆ ಬಿತ್ತು. ಓಡಿ ಬಂದು ನನ್ನನ್ನು ನೆಲಕ್ಕೆ ಬೀಳಿಸಿ, ತನ್ನ ಕೋರೆ ದಾಡೆಯಿಂದ ನನ್ನ ಕಿಬ್ಬೊಟ್ಟೆಯನ್ನು ಸಿಗಿಯಲಾರಂಭಿಸಿತು. ರಕ್ತ ಚಿಮ್ಮಿತ್ತು. ಇದನ್ನು ನೋಡಿದ ಸಹಾಯಕ್ಕಾಗಿ ಕೂಗಿದಳು. ಯಾರೂ ಕಾಣದೆ ತನ್ನ ಕೈಯಲ್ಲಿದ್ದ ತಂಬಿಗೆಯಿಂದ ಹಾಲನ್ನು ಚೆಲ್ಲಿ ಖಾಲಿ ತಂಬಿಗೆಯಿಂದ ಹಂದಿಯ ತಲೆಯ ಹೊಡೆಯ ತೊಡಗಿದಳು. ಆದರೆ ಹಂದಿಗೆ ಅದು ನಾಟಲಿಲ್ಲ. ಹಂದಿ ನನ್ನನ್ನು ಸಿಗಿಯುವುದರಲ್ಲೇ ಮಗ್ನವಾಗಿತ್ತು. ಅದನ್ನು ನೋಡಿ ಸಿಟ್ಟುಗೊಂಡ ತಾಯಿ, ಬಿಡು ಎಂದು ಕೂಗುತ್ತ ಹಂದಿಯ ತಲೆಯ ಮೇಲೆ ಮತ್ತೂ ಜೋರಾಗಿ ಬಾರಿಸತೊಡಗಿದಳು. ಏನಾಗುತ್ತಿದೆ ಎಂದು ತಿಳಿಯದೆ ನಾನು ಬಿದ್ದುಕೊಂಡಿದ್ದೆ. ಅಮ್ಮನ ಧ್ವನಿಯಷ್ಟೇ ಕೇಳುತ್ತಿತ್ತು. ಅಮ್ಮ ಹೊಡೆಯುತ್ತಿದ್ದ ನಡುವೆ ಹಂದಿಯ ಕಣ್ತಪ್ಪಿಸಿಕೊಂಡು ನಾನು ಹೋದೆ. ಆದರೆ ಅಮ್ಮ ಮಾತ್ರ ಜೋರಾಗಿ ಕೂಗುತ್ತ ಹಂದಿಯ ತಲೆಗೆ ಹೊಡೆಯುತ್ತಲೇ ಇದ್ದಳು. ಕೊನೆಗೂ ಸೋಲೊಪ್ಪಿಕೊಂಡ ಹಂದಿ ಅಲ್ಲಿಂದ ಓಡಿ ಹೋಯಿತು. ಅನಂತರ ನಾನು ಮೂರ್ಛೆ ಹೋಗಿದ್ದೆ.
ಕೂಡಲೇ ರಾಮ ಮರದಿಂದ ಇಳಿದು ಬಂದು ತಾನು ಉಟ್ಟಿದ್ದ ಲುಂಗಿಯನ್ನೇ ಬಿಚ್ಚಿ ರಕ್ತ ಒಸರುತ್ತಿದ್ದ ಕಿಬ್ಬೊಟ್ಟೆಗೆ ಕಟ್ಟಿ ಮನೆಗೆ ಕರೆದುಕೊಂಡು ಹೋದ. ಆಸ್ಪತ್ರೆಗೆ ಕೊಂಡೊಯ್ಯುವುದು ಅಸಾಧ್ಯವಾಗಿತ್ತು. ಯಾಕೆಂದರೆ ಮಳೆಯಿಂದ ಹೊಳೆ ತುಂಬಿ ಹರಿಯುತ್ತಿತ್ತು. ಹೀಗಾಗಿ ಮನೆ ವೈದ್ಯರೊಬ್ಬರನ್ನು ಕರೆದುತಂದರು. ಅವರಿಗೂ ಏನು ಮಾಡಬೇಕು ಎಂದು ತೋಚದೆ ತಮಗೆ ತಿಳಿದಿದ್ದ ಔಷಧ ಹಚ್ಚಿ ಕವಳದ ಎಲೆಗಳಿಂದ ಮುಚ್ಚಿ ಪಂಚೆ ಕಟ್ಟಿದರು.
ಸುದ್ದಿ ತಿಳಿದು ಊರಿನವರೆಲ್ಲ ಬರಲಾರಂಭಿಸಿದರು. ನಾಲ್ಕು ಜನ ಸೇರಿ ಒಂದು ಬಂದೂಕು ಹಿಡಿದು ಹಂದಿಯನ್ನು ಹುಡುಕಲು ಹೋದರು. ಅದು ಎಲ್ಲಿಯೂ ಕಾಣದೆ ನಿರಾಶರಾಗಿ ಮರಳಿದರು. ವಾರದ ಅನಂತರ ಗಾಯ ಹಾಗೆಯೇ ಇತ್ತು. ಮಳೆಯೂ ಕೊಂಚ ತಗ್ಗಿತ್ತು. ಹೀಗಾಗಿ ನನ್ನನ್ನು ತೆಂಗಿನ ಕಾಯಿ ಹೊರುವ ಚೂಳಿಯಲ್ಲಿ ಮಲಗಿಸಿ ತಲೆಯ ಮೇಲೆ ಹೊತ್ತು ಆಸ್ಪತ್ರೆಗೆ ಕೊಂಡೊಯ್ದರು. ಗಾಯವನ್ನು ನೋಡಿದ ವೈದ್ಯರು ಯಾಕೆ ಇಷ್ಟು ತಡವಾಗಿ ಬಂದದ್ದು ಎಂದು ಕೇಳಿ ತಂದೆಯನ್ನು ಬೈದರು. ಅದೇ ಮೊದಲ ಬಾರಿ ತಂದೆಯವರು ಅತ್ತಿದ್ದನ್ನು ನಾನು ನೋಡಿದ್ದೆ. ಕೂಡಲೇ ವೈದ್ಯರು ನನ್ನ ಗಾಯಕ್ಕೆ ಹೊಲಿಗೆ ಹಾಕಿದರು. ಗಾಯ ಗುಣವಾಗುವ ತನಕ ಪ್ರತಿ ದಿನ ಬಂದು ಗಾಯಕ್ಕೆ ಹೊಸ ಪಟ್ಟಿ ಹಾಕಿಕೊಂಡು ಹೋಗಬೇಕು ಎಂದು ಸೂಚಿಸಿದರು. ಅಂತೂ ನನ್ನ ಪ್ರಾಣ ಉಳಿಯಿತು.
ಈ ಘಟನೆ ನಡೆದು ನಲ್ವತ್ತು ವರ್ಷಗಳೇ ಕಳೆದಿವೆ. ಆದರೂ ಈಗಲೂ ಮನಸ್ಸಿನಲ್ಲಿ ಅಚ್ಚತ್ತಿದ ಹಾಗಿದೆ. ಹಂದಿಗೆ ತಂಬಿಗೆಯಿಂದ ಹೊಡೆಯುತ್ತಿದ್ದ ಅಮ್ಮ ಒನಕೆ ಓಬವ್ವನಂತೆ ಕಂಡಿದ್ದಳು. ಮಮತಾಮಯಿ ತಾಯಿ ಮಕ್ಕಳಿಗೆ ಎದುರಾಗುವ ಅಪತ್ತನ್ನು ಎದುರಿಸಲು ಒನಕೆ ಓಬವ್ವಳಾಗುವುದು ಖಂಡಿತಾ.
- ಶ್ರೀಕಾಂತ್ ಹೆಗ್ಡೆ, ಟೊರೊಂಟೊ