Advertisement
ಅನಾಥರು, ಅಸಹಾಯಕರು, ನಿರ್ಗತಿಕರು, ಬುದ್ಧಿ ಮಾಂದ್ಯರಿಗೆ ಹಸಿವಾದರೆ ಅವರೆಲ್ಲಾ ಏನು ಮಾಡಬಹುದು? ಊಹಿಸಿದ್ದೀರ. ಹಸಿವಿಗೆ ಹಸಿವೇ ಊಟ. ಹಾಗೇ ಇದ್ದುಕೊಂಡೋ, ನೀರು ಕುಡಿದು ಕೊಂಡೋ ಹೊಟ್ಟೆ ತಣಿಸಿಕೊಳ್ಳಬಹುದು ಅಥವಾ ಭಿಕ್ಷೆ ಬೇಡಲು ಮುಂದಾಗಬಹುದು. ಇದಕ್ಕಿಂತ ಬೇರೇನು ಮಾಡಲು ಸಾಧ್ಯ? ನಾವು, ನೀವು ಯೋಚಿಸುವುದು ಇವಿಷ್ಟೇ ದಾರಿಗಳು.
ಸುರೇಶ್ ವೃತ್ತಿಯಲ್ಲಿ ಖಾಸಗಿ ಕಂಪನಿಯಲ್ಲಿ ಸೇಲ್ಸ್‌ಮನ್. ಇವರು ಎಂ.ಎ ಮಾಡುತ್ತಿರುವಾಗ ಫೀಲ್ಡ್ ವರ್ಕ್‌ಗೆ ಅಂತ ಬೆಂಗಳೂರಿನ ದೊಡ್ಡ ಗುಬ್ಬಿಗೆ ಹೋಗಿದ್ದರು. ಅಲ್ಲಿ ಆಟೋ ರಾಜ ಅನ್ನೋ ವ್ಯಕ್ತಿ ಸಮಾಜ ಸೇವೆ ಮಾಡುವುದನ್ನು ನೋಡಿ ದಂಗಾಗಿ ಹೋದರು. ಆಟೋ ರಾಜ ಅಶಕ್ತರು, ಬಡವರನ್ನು ಹುಡುಕಿ, ಆವರಿಗೆ ಬೇಕಾದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುತ್ತಿದ್ದರು. ಇದನ್ನು ನೋಡಿ ಸ್ಫೂರ್ತಿ ಪಡೆದ ಸುರೇಶ್, ಊರಿಗೆ ಬಂದು ತಾವೂ ವೃದ್ಧಾಶ್ರಮ ಒಂದನ್ನು ತೆರೆದು ಹೀಗೇ ಮಾಡಬೇಕು ಅಂತ ಮುನ್ನುಗಿ, ಕೈಸುಟ್ಟುಕೊಂಡರು. ಆನಂತರ ಮುಂದೇನು ಮಾಡುವುದು ಅಂತ ಯೋಚಿಸಿ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡಿಸುವುದು, ಹಾಸ್ಟೆಲ್ ಫೀ ಕಟ್ಟುವುದು… ಹೀಗೆ ಸಣ್ಣಪುಟ್ಟ ಸಮಾಜ ಸೇವೆ ಮಾಡುವ ಮೂಲಕ ಕೈ ಸುಟ್ಟುಕೊಂಡ ಬೇಜಾರನ್ನು ಕಳೆದು ಕೊಳ್ಳುತ್ತಿದ್ದರು. ಕೊನೆಗೆ, ಈ ಎಲ್ಲದರ ಮುಂದುವರಿದ ಭಾಗವಾಗಿ ಭಿಕ್ಷುಕರು ಹಾಗೂ ನಿರ್ಗತಿಕರ ಹೊಟ್ಟೆ ತುಂಬಿಸುವ ಐಡಿಯಾ ಹೊಳೆಯಿತು. ಆರಂಭದಲ್ಲಿ ವಾರದ ಎರಡು ದಿನಗಳು ಗೆಳೆಯರನ್ನು ಕಟ್ಟಿಕೊಂಡು ಊಟ ಬಡಿಸಲು ಮುಂದಾದರು. ಇವರ ಸೇವೆಯನ್ನು ನೋಡಿದ ಒಂದಷ್ಟು ಜನ ಆರ್ಥಿಕವಾಗಿ ನೆರವಾದರೆ, ಮತ್ತೂಂದಷ್ಟು ಜನ ದಿನಸಿ ವಸ್ತುಗಳನ್ನು ದಾನವಾಗಿ ನೀಡಿದರು. ಇದರ ಜೊತೆಗೆ ಹುಟ್ಟುಹಬ್ಬಗಳಂಥ ವಿಶೇಷ ಸಂದರ್ಭಗಳಲ್ಲಿ ಇಂತಿಷ್ಟು ಅಂತ ಹಣ ಕೊಟ್ಟು ಊಟ ಹಾಕಿಸಲು ಮುಂದೆ ಬಂದರು. ಇದರಿಂದ ಸುರೇಶ್ ಅವರ ಖರ್ಚಿನಲ್ಲಿ ಸ್ವಲ್ಪ ಇಳಿ ಮುಖವಾಯಿತು. ಪ್ರಸ್ತುತ, ಪ್ರತಿ ದಿನ 80ರಿಂದ 100 ಮಂದಿಯ ಹಸಿವನ್ನು ನೀಗಿಸುತ್ತಿದೆ ಸುರೇಶ್ ಅಂಡ್ ಟೀಂ.
Related Articles
Advertisement
ಎರಡು ಹೊತ್ತು ಚಿತ್ರಾನ್ನ, ಪಲಾವ್, ಅನ್ನ-ಸಾಂಬಾರ್,ನೀರಿನ ಪ್ಯಾಕೇಟ್ ನೀಡುತ್ತಿದ್ದಾರೆ. ಇದಕ್ಕಾಗಿ ಪ್ರತಿ ದಿನಕ್ಕೆ 1,200ರೂ.ನಂತೆ, ಮಾಸಿಕ ಅಂದಾಜು ರೂ. 32ರಿಂದ 35 ಸಾವಿರದವರೆಗೆ ಖರ್ಚಾಗುತ್ತದೆ. ಸರ್ಕಾರದಿಂದ ಯಾವುದೇ ಸಹಾಯ ಧನ ಪಡೆಯುತ್ತಿಲ್ಲ. ಊಟ ತಯಾರಾಗುವುದು ಸುರೇಶ್ ಅವರ ಮನೆಯಲ್ಲೇ. ಪ್ರತಿನಿತ್ಯ ಅಡುಗೆ ತಯಾರಿಸಲು ಬೇಕಾಗುವ ತರಕಾರಿಯನ್ನು ಮಾರುಕಟ್ಟೆಗೆ ಹೋಗಿ ತರುತ್ತಾರೆ. ದಿನಸಿಯನ್ನು ತಿಂಗಳಿಗೊಮ್ಮೆ ಸದಸ್ಯರೆಲ್ಲರೂ ಸೇರಿ ಖರೀದಿಸುತ್ತಾರೆ. ಉತ್ತಮ ಗುಣಮಟ್ಟದ ದಿನಸಿಯನ್ನು ಖರೀದಿಸುವುದಲ್ಲದೆ, ರುಚಿಶುಚಿಯಾಗಿ ಆಹಾರವನ್ನು ತಯಾರಿಸಲು ಹೆಚ್ಚಿನ ಗಮನ ನೀಡುತ್ತಿದ್ದಾರೆ. “ಬೀದರ್‌ನಲ್ಲಿ ಇಲ್ಲಿನಂತೆ ನಮ್ಮ ಸ್ವಯಂ ಸೇವಕರಿದ್ದು ಅವರುಗಳೇ ಪ್ರತಿನಿತ್ಯ ಅಡುಗೆ ತಯಾರಿಸಿ ವಿತರಿಸುತ್ತಾರೆ. ನಾವ ಮೊದಲು ದಿನಕ್ಕೆ ಒಂದು ಹೊತ್ತು ಊಟ ನೀಡುತ್ತಿದ್ದೆವು. ನಂತರ ಸದಸ್ಯರ ಧನ ಸಹಾಯದ ಮೇರೆಗೆ ಎರಡು ಹೊತ್ತು ಊಟ ನೀಡುತ್ತಿದ್ದೇವೆ’ ಎನ್ನುತ್ತಾರೆ ಸುರೇಶ್.
ಇತರೆ ಸೇವೆಗಳುಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೂ ಈ ತಂಡ ತನ್ನ ಸೇವೆಯನ್ನು ವಿಸ್ತರಿಸಿದೆ. ಅನಾಥ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಪರಿಕರಗಳನ್ನು ನೀಡುತ್ತಿದೆ. ಬಟ್ಟೆ, ಬೆಡ್ ಶೀಟ್, ಸೀರೆ, ಪಂಚೆ, ಶರ್ಟ್ ಹಾಗೂ ಅಗತ್ಯ ವಸ್ತುಗಳನ್ನು ನೀಡುತ್ತದೆ. ಪ್ರತಿ ತಿಂಗಳಿಗೊಮ್ಮೆ ತನ್ನ ಸದಸ್ಯರ ಬಳಗದಲ್ಲಿರುವ ವೈದರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸುತ್ತದೆ. ಉಚಿತವಾಗಿ ಔಷಧಗಳನ್ನೂ ನೀಡುತ್ತದೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದರೆ, ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ನಗರದಲ್ಲಿ ಅಲ್ಲಲ್ಲಿ ಬಟ್ಟೆ ಶಿಬಿರಗಳನ್ನು ಆಯೋಜಿಸುತ್ತಾರೆ. ಸಾರ್ವಜನಿಕರು ತಾವು ಬಳಸದೇ ಇರುವ ಉತ್ತಮ ಬಟ್ಟೆಗಳನ್ನು, ಇತರೆ ವಸ್ತುಗಳನ್ನು ಈ ಶಿಬಿರಕ್ಕೆ ತುಂದು ಕೊಡುತ್ತಾರೆ. ಸಾರ್ವಜನಿಕರಿಂದ ಪಡೆದ ವಸ್ತುಗಳನ್ನು ಸಂಸ್ಥೆ ಸದಸ್ಯರು ನಿರ್ಗತಿಕ, ಅನಾಥರಿಗೆ,ವೃದ್ಧರಿಗೆ ವ್ಯವಸ್ಥಿತವಾಗಿ ತಲುಪಿಸುವ ಕಾರ್ಯಮಾಡುತ್ತಾರಂತೆ. ಭಾಗ್ಯ.ಆರ್.ಗುರುಕುಮಾರ