Advertisement

ಉಪಕೃಷಿಯಾಗಿ ಅರಶಿಣ: ಆದಾಯ ವೃದ್ಧಿಗೆ ದಾರಿ

06:15 AM Aug 13, 2017 | |

ಹೇರಳ ಔಷಧೀಯ ಗುಣಗಳನ್ನು ಹೊಂದಿರುವ ಅರಶಿಣವು ಒಂದು ಪ್ರಮುಖ ಸಾಂಬಾರ ಪದಾರ್ಥವೂ ಹೌದು. ತೆಂಗು, ಅಡಿಕೆ, ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಕೃಷಿ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಆದಾಯ ವೃದ್ಧಿಸಿಕೊಳ್ಳಬಹುದು. 

Advertisement

ಹೇಗೆಂದರೆ ತೋಟಗಳಲ್ಲಿ ಬೆಳೆಯುವುದರಿಂದ ಪ್ರತ್ಯೇಕ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕೆಂದಿಲ್ಲ. ಅಲ್ಲದೆ ನಿರ್ವಹಣೆ ವೆಚ್ಚವು ತೋಟದ ಕೆಲಸದೊಂದಿಗೆ ಸಾಗುತ್ತದೆ. ಆಂಗ್ಲ ಭಾಷೆಯಲ್ಲಿ “ಟರ್ಮರಿಕ್‌’ ಎಂದು ಕರೆಯಲ್ಪಡುವ ಅರಶಿಣ ಜಿಂಜಿಎರೇಶಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು, “ಕರ್ಕ್ನೂಮ ಲಾಂಗ’ ಇದರ ವೈಜ್ಞಾನಿಕ ಹೆಸರು. 

ಹವಾಗುಣ, ಮಣ್ಣು 
ಅರಶಿನ ಒಂದು ಉಷ್ಣ ವಲಯದಲ್ಲಿ ಬೆಳೆಯುವ ಸಸ್ಯ. ಈ ಬೆಳೆಗೆ ಮಣ್ಣು ತೇವಾಂಶದಿಂದ ಕೂಡಿರಬೇಕು. ಹಾಗಾಗಿ ಸಾಧಾರಣ ಮಳೆ ಬರುವ ಪ್ರದೇಶ ಹಾಗೂ ನೀರು ಇಂಗಿ ಹೋಗುವ ಮಣ್ಣು ಉತ್ತಮ. ಸಾವಯವಯುಕ್ತ ಮರಳು ಮಿಶ್ರಿತ ಕಪ್ಪು, ಕೆಂಪು, ಗೋಡು ಮಣ್ಣಿನಲ್ಲಿ ಇಳುವರಿ ಹೆಚ್ಚು. ಸಾಮಾನ್ಯವಾಗಿ ಮೇ- ಜೂನ್‌ ತಿಂಗಳು ಅರಶಿಣ ಕೋಡು ನಾಟಿಗೆ ಸೂಕ್ತ ಸಮಯ. ಸುಮಾರು 8ರಿಂದ 9 ತಿಂಗಳುಗಳಲ್ಲಿ ಅದರ ಫ‌ಸಲು ಕೀಳಬಹುದು. 

ತಳಿಗಳು
ಸಾಮಾನ್ಯವಾಗಿ ಅವಿಭಜಿತ ದ.ಕ. ಜಿಲ್ಲೆಯ ತೋಟಗಳಲ್ಲಿ ಅರಶಿಣ ಬೆಳೆಯುವ ಕೃಷಿಕರು ಊರ ತಳಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದಲ್ಲದೆ ಎಲೆಚಗ, ಮುಂಡಗ, ಕಸ್ತೂರಿ, ಬಾಳಗ, 1-ಎ, 3-ಡಿ ಇತ್ಯಾದಿ ತಳಿಗಳನ್ನು ಕೃಷಿಯಲ್ಲಿ  ಬಳಸಲಾಗುತ್ತವೆ. 

ಕೃಷಿ ಹೇಗೆ ?
ಶುಂಠಿ ಕೃಷಿಯಂತೆ ಇದರಲ್ಲೂ ಉತ್ತಮ ಬಿತ್ತನೆ ಗೆಡ್ಡೆಗಳನ್ನು ಆರಿಸಿಕೊಳ್ಳಬೇಕು. ಗದ್ದೆಗಳಲ್ಲಿ ಎಕ್ರೆಗಟ್ಟಲೆ ಕೃಷಿ ಮಾಡುವುದಾದರೆ ಹಟ್ಟಿಗೊಬ್ಬರ ಅಥವಾ ಕಾಂಪೋಸ್ಟ್‌ ಗೊಬ್ಬರ ಹಾಕಿ ಉಳುಮೆ ಮಾಡಬೇಕು. ಬಳಿಕ ಎರಡು ಅಡಿ ಅಗಲ ಮತ್ತು ಒಂದೂವರೆ ಅಡಿ ಎತ್ತರದ ಮಡಿಗಳನ್ನು ತಯಾರಿಸಿ ಎರಡು ಅಡಿ ಅಂತರದಲ್ಲಿ ಬಿತ್ತನೆ ಮಾಡಿ. ಪ್ರತಿ ಮಡಿಗಳ ಮಧ್ಯೆ ನೀರು ಬಸಿದು ಹೋಗಲು ಸಣ್ಣ ಕಾಲುವೆ ನಿರ್ಮಿಸಿ. ಮಡಿಗಳ ಮಧ್ಯೆಯೂ ಎರಡು ಅಡಿ ಅಂತರವಿರಲಿ. 

Advertisement

ತೋಟಗಳಲ್ಲಿ ಕೃಷಿ ಮಾಡುವುದಾದರೆ ಸ್ಥಳಾವಕಾಶವಿದ್ದಲ್ಲಿ ಮೇಲಿನ ಅಳತೆಯಂತೆ ಮಡಿಗಳನ್ನು ತಯಾರಿಸಿ. ಅದೇ ವೇಳೆ ಹಟ್ಟಿ ಗೊಬ್ಬರ, ಸುಡುಮಣ್ಣು ಮಿಶ್ರ ಮಾಡಿ. ಉಳುಮೆ ಮಾಡುವ, ಕಾಲುವೆ ನಿರ್ಮಿಸುವ ಅಗತ್ಯವಿಲ್ಲ. ನೆಲದಡಿಯಲ್ಲಿ ಬೆಳೆಯುವ ಅರಶಿನ ಕೋಡಿನ ಗಿಡ ಚಿಗುರಿ ಮೇಲೆ ಬಂದಾಗ ಸ್ವಲ್ಪ ಸೊಪ್ಪು, ಹಟ್ಟಿ ಗೊಬ್ಬರ ಹಾಕಬೇಕು. ನೆಲಗಡಲೆ, ಕಹಿಬೇವಿನ ಹಿಂಡಿಯನ್ನು ನೆನೆಸಿ ಅದಕ್ಕೆ ಬೂದಿ ಮಿಶ್ರ ಮಾಡಿ ಹಾಕಬಹುದು. ಅರಶಿನ ಕೋಡು ಬೆಳೆದಂತೆ ಸಸಿಯ ಎಲೆಗಳು ಹಣ್ಣಾಗಲಾರಂಭಿಸುತ್ತವೆ. ಎಲೆ ಸಂಪೂರ್ಣ ಒಣಗುತ್ತಿದ್ದಂತೆ ಕೋಡುಗಳನ್ನು ಕೀಳಬೇಕು. ಮಣ್ಣಿನಿಂದ ಬೇರ್ಪಡಿಸಿ ಅದು ಹಸಿಯಾಗಿರುವಾಗಲೇ ಅಥವಾ ಒಣಗಿಸಿಯೂ ಮಾರಾಟ ಮಾಡಬಹುದು. ಒಣ ಅರಶಿಣಕ್ಕೆ ಧಾರಣೆ ಅಧಿಕ. ರೋಗ ನಿವಾರಣೆ, ಕೀಟಗಳ ತೊಂದರೆ ತಡೆಯಲು ಔಷಧವಾಗಿ ಡಿಡಿಟಿ, ಬೋಡೋ ಮಿಶ್ರಣ, ಜೀವಾಮೃತ, ಕಹಿಬೇವಿನ ಎಲೆಯ ಕಷಾಯ ಇತ್ಯಾದಿಗಳನ್ನು ಸಿಂಪಡಿಸುವುದು ಸಹಕಾರಿ.

ಉಪಯೋಗ 
1 ವಿವಿಧ ಶುಭ ಸಮಾರಂಭಗಳಲ್ಲಿ  ಧಾರ್ಮಿಕ ಆಚರಣೆಗಳಲ್ಲಿ  ಮಂಗಲ ದ್ರವ್ಯವಾಗಿ ಬಳಕೆ ಮಾಡಲಾಗುತ್ತದೆ. 

2 ವಿವಿಧ ಕಾಯಿಲೆಗಳಿಗೆ ಔಷಧವಾಗಿ ಉಪಯೋಗಿಸ ಲಾಗುತ್ತದೆ. 

3 ಅಡುಗೆಗಳಲ್ಲಿ ಸಾಂಬಾರ ಪದಾರ್ಥವಾಗಿಯೂ ವಿನಿಯೋಗಿಸುತ್ತಾರೆ. 

4 ಆಯುರ್ವೇದ ಔಷಧ, ಸುಗಂಧ ದ್ರವ್ಯ ತಯಾರಿಕೆಯಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ. 

5 ರಂಗವಲ್ಲಿಗಳಿಗೆ ಬಣ್ಣದ ಹುಡಿಯಾಗಿ, ಕಾರ್ಖಾನೆಗಳಲ್ಲಿ ಬಟ್ಟೆಗಳಿಗೆ ಬಣ್ಣ ಹಾಕಲು ಇದನ್ನು ಬಳಸುತ್ತಾರೆ.

 ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next