Advertisement

ಹಾಡುಗಳ ದೇಸಿಮಯ್ಯ

03:26 PM Sep 25, 2017 | |

 ಸಂಗೀತ ಎಂದರೆ ಎಂ.ರಂಗರಾವ್‌- ರಾಜನ್‌ ನಾಗೇಂದ್ರ, ಸಾಹಿತ್ಯ ಎಂದರೆ ಚಿ. ಉದಯಶಂಕರ್‌, ಆರ್‌.ಎನ್‌. ಜಯಗೋಪಾಲ್‌ ಅನ್ನೋ ಕಾಲದಲ್ಲಿ ಗಿಟಾರು ಹಿಡಿದು ಗಾಂಧೀನಗರಕ್ಕೆ ಬಂದವರು ಈ ಹಂಸಲೇಖ. ಮ್ಯೂಸಿಕ್‌ ಮಾಡಬೇಕಾದರೆ, ಸಾಹಿತ್ಯ ರಚಿಸಬೇಕಾದರೆ ರೂಂ ಹಾಕಬೇಕು, ಮೂಡು ಬರಬೇಕು ಅಂತೆಲ್ಲ ಇದ್ದ ಮಿಥ್‌ ಅನ್ನು ಹೊಡೆದುರುಳಿಸಿ, ಸಂಗೀತ, ಸಾಹಿತ್ಯ, ಚಿತ್ರಕತೆ, ಸಂಭಾಷಣೆ ಹೀಗೆ ಬೇರೆ, ಬೇರೆಯವರು ಮಾಡುತ್ತಿದ್ದ ಅಷ್ಟೂ ಕೆಲಸಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡು- ಸತತ ಮೂರು ದಶಕಗಳ ಕಾಲ  “ಹೀಗೂ ಮಾಡಬಹುದು’ ಅಂತ ಚಿತ್ರ ಜಗತ್ತಿಗೆ ತೋರಿಸಿ ನಿಬ್ಬೆರಗಾಗಿಸಿದರು.  ಇಂತಿಪ್ಪ,  ಹಂಸಲೇಖ ಕಳೆದ ಒಂದು ದಶಕದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾದರು.  ಫಾರಮ್‌ನಲ್ಲಿ ಇದ್ದಾಗಲೇ ರಿಟೈರ್‌ ಆಗಬೇಕು ಅನ್ನೋ ಕ್ರಿಕೆಟಿಗರ ನಿಯಮವನ್ನು ಇವರೂ ಜಾರಿ ಮಾಡಿದ್ದಾರೆ ಅಂತ ಗಾಂಧಿನಗರ ಮಾತನಾಡಿಕೊಳ್ಳುವ ಹೊತ್ತಿಗೆ ದಿಢೀರಂತ ಮತ್ತೆ ಗಿಟಾರು ಹಿಡಿದು, “ಶಕುಂತ್ಲೆ’ ಜೊತೆಗೆ ಬಂದು ನಿಂತಿದ್ದಾರೆ ಹಂ.ಲೇ;  ಈ ಸಲ ಚಿತ್ರನಿರ್ದೇಶಕರಾಗಿ. 

Advertisement

  ಇಷ್ಟು ದಿನ ಎಲ್ಲಿದ್ದರು, ಏನು ಮಾಡುತ್ತಿದ್ದರು? ಈ ವಯಸ್ಸಲ್ಲಿ ಮುಂದೆ ಏನು ಮಾಡಲು ಹೊರಟಿದ್ದಾರೆ?
ದೇಸಿಮಯ್ಯ ಉರುಫ್ ಹಂಸಲೇಖ ಇಲ್ಲಿ ಮಾತನಾಡಿದ್ದಾರೆ ಕೇಳಿ. 

ಅದು ಟೇಬಲ್ಲೋ, ಪಿಯಾನಾನೋ? ತಿಳಿಯಲಿಲ್ಲ. ಟೇಬಲ್ಲಿನ ಪೂರ್ತಿ ಪಿಯಾನೋ ಮನೆಗಳಿದ್ದವು.  ಅದರ ಮೇಲೆ ಬೆರಳುಗಳು ಓಡುತ್ತಿದ್ದವು. ಮತ್ತೆ ಯೂ ಟರ್ನ್ ತೆಗೆದು ಕೊಳ್ಳುತ್ತಿದ್ದವು. ಆರೋಹಣ, ಅವರೋಹಣ ಮಾಡುತ್ತಲೇ ಇದ್ದವು. 

 “ಮತ್ತೆ ಯೂ ಟರ್ನ್ ತಗೊಂಡಿದ್ದೀನಿ’  ಅಂದರು ಹಂಸಲೇಖ.
  ತುಂಬು ತೋಳಿನ ಬಿಳಿ ಅಂಗಿ ಸರಿ ಮಾಡಿಕೊಂಡು, ಮತ್ತೆ ತಲೆಗೆ ಬಂದ ಯಾವುದೋ ಸ್ವರವನ್ನು ಬೆರಳ ತುದಿಗೆ ತಂದುಕೊಂಡು ಪಿಯಾನೋ ಮಣೆಯಲ್ಲಿ ಓಡಿ ವಾಪಸ್ಸು ಬಂದವು. ಸ್ವರೋತ್ಪತ್ತಿ ಆಗಲಿಲ್ಲ.

 “ಈಗ ನನ್ನ ಧ್ಯಾನ “ಶಕುಂತ್ಲೆ’. “ಶಕುಂತ್ಲೆ’ ಮೂಲಕ ವಾಪಸ್ಸು ಬಂದಿದ್ದೀನಿ. ಹಾಗಂತ ಇಷ್ಟು ದಿನ ಎಲ್ಲಿ ಹೋಗಿದ್ದೀರಿ, ಏನು ಮಡ್ತಾ ಇದ್ದೀರಿ? ಅಂತೆಲ್ಲ ನೀವು ಕೇಳುತ್ತೀರಿ. ಅದಕ್ಕೂ ನನ್ನ ಬಳಿ ಉತ್ತರವಿದೆ’ ಹೀಗಂತ ಹೇಳಿ ಹಂಸಲೇಖ ಪೊಳ್ಳಂತ ನಕ್ಕರು. ಅವರ ನಗು ಅರ್ಧ ಆವರ್ತಕ್ಕಿಂತ ಹೆಚ್ಚಿರಲಿಲ್ಲ.  ನಗು ಮುಗಿಯುತ್ತಿದ್ದಂತೆ ಮಾತು ಶುರುವಾಯಿತು.  “ಯಾವ ಕ್ಷೇತ್ರದಲ್ಲೂ ಗಟ್ಟಿಯಾಗಿ ನಿಲ್ಲೋದು ಗುಣ ಅಲ್ಲ ನನ್ನದಲ್ಲ. ಒಂಥರ ಸಂಚಾರಿ ಜೀವ. ಲಾಂಗ್‌ ಟೈಂ ನನ್ನ ಉಳಿಸಿಕೊಂಡಿದ್ದು ಸಿನಿಮಾ ಕ್ಷೇತ್ರ. ಸಿನಿಮಾ ಮಾಡುವುದು ಕಡಿಮೆ ಆಗಿರಬಹುದು. ಹಾಗಂತ ಗಾಂಧೀನಗರಿಂದ ದೂರ ಏನೂ ಇಲ್ಲ.  ಅಲ್ಲಿನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೆ. ವಿಚಾರಗಳಿಗೆ ಕಿವಿಗೊಡುತ್ತಿದ್ದೆ. ಎಷ್ಟೋ ಕಾರ್ಯಕ್ರಮಕ್ಕೆ ಬಂದು ಹೋಗುತ್ತಿದ್ದೆ. ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಗಾಂಧಿನಗರದ ಪ್ರತಿ ಕದಲಿಕೆ, ಕನವರಿಕೆ, ಮೈ ಮುರಿತಕ್ಕೆ  ಸಾಕ್ಷಿಯಾಗಿದ್ದೇನೆ.  ಹೀಗಿರಬೇಕಾದರೆ ಇನ್ನೆಲ್ಲಿ ದೂರ ಇರೋದು?’ ಹಂಸಲೇಖ ಪ್ರಶ್ನೆ ಕೇಳಿದರು.

Advertisement

  “ಮತ್ಯಾಕೆ ನೀವು ಯೂ ಟರ್ನ್ ತಗೊಂಡು ದೂರ ಇದ್ದದ್ದು ? ಮುಂದಿನ ನಿಮ್ಮ ಪ್ರಶ್ನೆ ಇದೇ ಅಲ್ವೇ?’  ಹಂಲೇ ಮತ್ತೂಮ್ಮೆ ಬೊಗಸೆ ಕಣಳನ್ನು ಬಿಟ್ಟು ಕೇಳಿದರು. ಅದಕ್ಕೆ ಉತ್ತರವನ್ನೂ ಕೊಟ್ಟರು.

 “ಆಸರಿಕೆ, ಬೇಸರಿಕೆ ಆದರೆ,  ಏಕತಾನತೆ ಶುರುವಾಯ್ತು ಅನಿಸಿದರೆ ಆ ಕ್ಷೇತ್ರದಿಂದ ಎದ್ದು ಬರೋದು ನನ್ನ ಗುಣ. ಮತ್ತೆ ಇನ್ನೊಂದು ಕ್ಷೇತ್ರದಲ್ಲಿ ತೊಡಗುವುದು. ತೊಡಗುವುದು ಎಂದರೇನು ಪ್ರಪಂಚವನ್ನೇ ಮರೆತು ಬದುಕೋದು. ಹಾಗೇ ಮಾಡುತ್ತಿದ್ದೆ.  ಸಿನಿಮಾದಲ್ಲೂ ಹೀಗೆ ಮಾಡಿಯೇ ಹೆಚ್ಚಾ ಕಮ್ಮಿ ಮೂನ್ನೂರು ಚಿಲ್ಲರೆ ಚಿತ್ರ ಮಾಡಿದ್ದು.  ಒಂದು ಚಿತ್ರ ಹಿಟ್‌ ಆದರೆ ಸಾಕು- ಅಂತಂತದೇ ಚಿತ್ರಗಳು ಕ್ಯೂ ನಿಂತು ಬಿಡೋದು. ಅದೇ ಪ್ರೇಮ, ಅದೇ ದ್ವೇಷ- ಅದದನ್ನೇ ಎಷ್ಟು ವರ್ಷ ಅಂತ ಮಾಡೋದು. ಇನ್ನೇಷ್ಟು ಟ್ಯೂನ್‌ಗಳನ್ನು ತೇಯೋದು? ಏಕಾತಾನತೆ ಶುರುವಾಯ್ತು. ಬೋರು ಅನಿಸಿತು. ನಾನು ಕಾಯ್ತಾ ಇದ್ದೆ. ತಮಿಳಿನಲ್ಲಿ ಎಲ್ಲಾ ಅಸೋಸಿಯೇಟ್‌ಗಳು ಒಂದೊಂದು ಹೊಸ ಕತೆಗಳನ್ನು ಕಟ್ಟಿ, ಸಕ್ಸಸ್‌ ಮಾಡ್ತಾರೆ.  ಅಂಥದ್ದೊಂದು ಟ್ರೆಂಡ್‌ ನಮ್ಮಲ್ಲಿ ಬರಲೇ ಇಲ್ಲ. ಯಶಸ್ಸಿನ ಶಿಖರದಲ್ಲಿ ಇದ್ದಾಗಲೇ ಇವೆ°ಲ್ಲೋ ನಾಪತ್ತೆ ಆದ್ನಲ್ಲ ಅಂತ ಸರ್‌ಪ್ರೈಸ್‌ ಇರಲಿ ಅಂತ ಗಿಟಾರು ಹಿಡಿದು ಗಾಂಧಿನಗರಿದಿಂದ ಎದ್ದು ಬಂದೆ. ದೇಸಿ ಸಂಗೀತದ ತೆಕ್ಕೆಗೆ ಬಿದ್ದೆ’ ಹಂಸಲೇಖ ಕಥೆ ಹೇಳಲು ಶುರುಮಾಡಿದರು.  ಮತ್ತೆ ಪೂರ್ತಿ ಆವರ್ತದಲ್ಲಿ ನಕ್ಕರು. 
  “ನಾನು ಸಾಧಿಸಿದ್ದೇನೆ. ಸಂಶೋಧಿಸಿದ್ದೇನೆ. ಗೆದ್ದಿದ್ದೇನೆ’ ಹೀಗೆ ಒಗಟಾಗಿ ಮಾತನಾಡಿದರು. ಆರ್ಕಿಮಿಡೀಸರಂತೆ ಕಂಡರು.  

 “ಸತತ 12 ವರ್ಷ. ಬಿಟ್ಟು ಬಿಡದೇ ದೇಸಿ ನೊಟೇಷನ್‌ಗಳನ್ನು ಸಂಶೋಧನೆ ಮಾಡಿದ್ದೇನೆ. ಪ್ರಪಂಚದ ಸಂಗೀತದಲ್ಲಿ ಕರ್ನಾಟಕಕ್ಕೆ ದೊಡ್ಡ ಹೆಸರು ಸಿಕ್ಕಿದೆ.  ಸ್ಟಾಫ್ ನೊಟೇಷನ್‌ ಪಕ್ಕದಲ್ಲಿ ದೇಸಿ ನೊಟೇಷನ್‌ ಬಂದಿದೆ. ಇನ್ನು 300 ವರ್ಷಗಳಾದರೂ ಈ ಸಾಧನೆಯನ್ನು ಯಾರೂ ಮಾಡೋಲ್ಲ. ಬದುಕಲ್ಲಿ ಸಾಧಿಸಬೇಕಾಗಿದ್ದು ಸಾಧಿಸಿದ್ದೇನೆ. ಬದುಕಿದ್ದು ಸಾರ್ಥಕ ಅಂತ ಈಗ ಅನ್ನಿಸುತ್ತಿದೆ ‘ ಹಂಸಲೇಖ ಖುಷಿಯಾಗಿ ಹೇಳಿದರು.  

 ಇ ದೇಸಿ ಶಾಲೆ ಹಂಸಲೇಖರನ್ನು ಗಾಂಧೀನಗರಿಂದ ದೂರ ಇಡಲು ಕಾರಣ ಅನ್ನೋ ಆರೋಪವೂ ಇದೆ. ಅದಕ್ಕೆ ಅವರು ಹೇಳಿದ್ದು…
 “ಅದಕ್ಕು ಇದಕ್ಕೂ ಸಂಬಂಧವೇ ಇಲ್ಲ. ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದು ನಾನೇ, ದೇಸಿ ಶಾಲೆ  ಶುರು ಮಾಡುವ ಆಯ್ಕೆ ಮಾಡಿಕೊಂಡದ್ದು ನಾನೇ. “ಹೊಟ್ಟೆಗೆ ಏನು ಮಾಡಿಕೊಂಡಿದ್ದೀರಿ’ – ಅಂತ ನೀವು ಕೇಳಬಾರದಲ್ವಾ. ಅದಕ್ಕಾಗಿ ಫಾರ್ಮ್ನಲ್ಲಿ ಇರುವಾಗಲೇ ಯೂ ಟರ್ನ್ ತೆಗೆದು ಕೊಂಡೆ. ಈಗ ಫಾರಂಗೆ ಬಂದಿದ್ದೀನಿ. ಅಲ್ಲಿಂದ ಮತ್ತೆ ಯೂಟರ್ನ್ ತಗೊಂಡು ಗಾಂಧೀನಗರಕ್ಕೆ ಬಂದಿದ್ದೇನೆ.  ಸಿನಿಮಾದಿಂದ ದೂರ ನಿಂತಾಗಲು ಸಂಗೀತ ಮಾಡಿಕೊಡಿ ಅಂತ ಬಹಳಷ್ಟು ಜನ ಕೇಳಿದರು.  ನಾನೇ ಒಲ್ಲೆ ಅಂತ ದೂರ ನಿಂತೆ. ಏಕೆಂದರೆ, ಹೋಮ್‌ವರ್ಕ್‌ ಮಾಡದೇ ನನ್ನ ಹತ್ತಿರ ಬರುತ್ತಿದ್ದರು. ನಾನು ಅವರಿಗೆ ಗಂಟೆಗಳಲ್ಲಿ ಸಂಗೀತ ಕೊಡುತ್ತಿದ್ದೆ. ಅವರಿಗೆ ಇಷ್ಟವಾಗುತ್ತಿರಲಿಲ್ಲ. ಥ್ರಿಲ್ಲಾಗಿ ಏನೋ ಸಂಶೋಧನೆ ಮಾಡಿದಂತೆ, ಕಷ್ಟಪಟ್ಟಂತೆ ನಟಿಸಿ ಟ್ಯೂನ್‌ ಕೊಡಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಹೀಗೆ ನಾನು ಅವರಿಗೆ ಸೆಟ್‌ ಆಗ್ತಾ ಇರಲಿಲ್ಲ. ಅವರು ನನಗೆ ಸೆಟ್‌ ಆಗ್ತಾ ಇರಲಿಲ್ಲ. ಇಂಥವರ ಹತ್ತಿರ ಕೆಲಸ ಮಾಡೋ ಬದಲು ಸುಮ್ಮನಿರುವುದೇ ಮೇಲೆ ಅಂತ ಅನಿಸಿತು. ಹಾಗಂತ ಸುಮ್ಮನೆ ಕೂರತಿರಲಿಲ್ಲ. 5-6 ಚಿತ್ರ ಕಥೆ ಮಾಡಿಕೊಂಡಿದ್ದೇನೆ. ಸೌಂಡ್‌ ಸ್ಕ್ರಿಫ್ಟ್ ರೆಡಿ ಮಾಡಿಟ್ಟುಕೊಂಡಿದ್ದೇನೆ’ ಹಂ.ಲೇ ವಿವರಣೆ ಕೊಟ್ಟರು.  

ಹಂಸಲೇಖರಿಗೆ ನಿರ್ದೇಶನ ಮಾಡುವ ಹುಕಿ ಇಂದು ನಿನ್ನೆಯದಲ್ಲ. ಅವರ 19ನೇ ವಯಸ್ಸಿನಲ್ಲಿ ನಾಟಕ ಬರೆದು, ನಿರ್ದೇಶನ ಮಾಡಿದಾಗಲೇ ಮುಂದೆ ಒಂದು ಸಿನಿಮಾ ನಿರ್ದೇಶನ ಮಾಡಲೇಬೇಕು ಅನ್ನೋ ಕನಸು ಹೆಮ್ಮರವಾಗಿತ್ತು. ಆದರೆ ಸಮಯ ಕೂಡಿ ಬರಲಿಲ್ಲ.  ಒಂದು ಸಲ ಹಿಂದಿ ಚಿತ್ರದ ವಾಲ್‌ಪೋಸ್ಟ್‌ ನೋಡುತ್ತಿದ್ದರಂತೆ. ಅದರಲ್ಲಿ ಲಕ್ಷ್ಮೀಕಾಂತ್‌ ಪ್ಯಾರೇಲಾಲ್‌ ಅವರ ಹೆಸರು 24 ಷೀಟ್‌ಪೂರ್ತಿ ಇತ್ತಂತೆ. ಅರೆ, ನಿರ್ದೇಶಕ ಕುಳ್ಳಗಾಗಿದ್ದಾನೆ, ಸಂಗೀತ ನಿರ್ದೇಶಕ ದೊಡ್ಡವನಾಗಿದ್ದಾನಲ್ಲ. ನನ್ನದೂ 24 ಷೀಟಲ್ಲಿ ಹೆಸರು ಬರಬೇಕು ಅಂತ ಕನಸು ಕಂಡರು. ಹಾಗೆ ನೋಡಿದರೆ ಹಂಸಲೇಖ, “ರಾಹುಚಂದ್ರ’ ಅನ್ನೋ ಚಿತ್ರ ನಿರ್ದೇಶನ ಮಾಡಿದರು. ಬಿಡುಗಡೆ ಭಾಗ್ಯದೊರೆಯಲಿಲ್ಲ. ಆ ಮೇಲೆ ನಿರ್ದೇಶನದ ಹುಚ್ಚೇನು ಬಿಟ್ಟಿರಲಿಲ್ಲ. ಗುರುದತ್‌ ಥರ ಸೀನ್‌ ಮಾಡಬೇಕು, ಶಾಂತಾರಾಮ್‌ ಥರ ಹಿಟ್‌ ಹಾಡುಗಳು ಕೊಡಬೇಕು ಅನ್ನೋ ಕೆಚ್ಚು ಶುರುವಾಯ್ತು. ಅದಕ್ಕಾಗಿ ಮ್ಯೂಸಿಕ್‌, ಕಥೆ, ಕಥೆ ಸ್ಕ್ರಿಪ್ಟ್, ಸ್ಕೆಚ್‌ಗಳನ್ನು ಮಾಡುತ್ತಿದ್ದರಂತೆ. ಎಲ್ಲದರ ಅನುಭವವನ್ನು “ಪ್ರೇಮಲೋಕ’, “ರಣಧೀರ’, “ಕಿಂದರಜೋಗಿ’ ಹೀಗೆ ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದಾಗ ತಂದು ಹಾಕಿದರು. ಆದರೆ ಸ್ವತಂತ್ರ ನಿರ್ದೇಶಕರಾಗಲಿಲ್ಲ. 

    “”ರಣಧೀರ’ ಚಿತ್ರದ ನಂತರ ನನಗೆ ನಿರ್ದೇಶಕರಾಗುವ ಆಫ‌ರ್‌ಗಳು ಬಂದಿದ್ದವು. 5-6 ಚಿತ್ರಕ್ಕೆ ಅಡ್ವಾನ್ಸ್‌ ತಗೊಂಡಿದ್ದೆ. ಆಮೇಲೆ ನಿರ್ದೇಶಕನಾಗುವುದಾ, ಸಂಗೀತ ನಿರ್ದೇಶಕನಾಗಿ ಮುಂದುವರಿಯುವುದಾ ಎಂಬ ಗೊಂದಲ ಶುರುವಾಯ್ತು. ಗೆಳೆಯರು- ನೋಡಪ್ಪಾ,  ಡೈರಕ್ಟ್ ಮಾಡೋಕೆ ಬೇಕಾದಷ್ಟು ಜನ ಇದ್ದಾರೆ. ನಿನ್ನ ಕೈಯಲ್ಲಿ ಇರೋ ಸಂಗೀತ-ಸಾಹಿತ್ಯ ಕ್ಷೇತ್ರದಲ್ಲಿ ಇಲ್ಲಿ ಯಾರೂ ಸ್ಪರ್ಧಿಗಳಿಲ್ಲ. ಇನ್ನು 20 ವರ್ಷ ಯಾವುದೇ ಯೋಚನೆ ಮಾಡುವ ಹಾಗಿಲ್ಲ. ಮೊದಲು ಇಲ್ಲಿ ಕೆಲಸ ಮಾಡು. ಕೈಯಲ್ಲಿ ದುಡ್ಡು ಇದ್ದರೆ ಡೈರೆಕ್ಟ್ ಮಾಡು ಅಂತ ಸಲಹೆ ಕೊಟ್ಟರು. ಸರಿ ಅನಿಸಿತು. ತಗೊಂಡಿದ್ದ ಅಡ್ವಾನ್ಸ್‌ ಎಲ್ಲವನ್ನೂ ವಾಪಸ್ಸು ಕೊಟ್ಟೆ’ ಹಂಸಲೇಖ ನೆನಪಿಸಿಕೊಂಡರು. 

   ಹಂಸಲೇಖರ ವಯಸ್ಸು 67.  “ನಿಮಗೆ ವಯಸ್ಸಾಗ್ತಾ ಇದೇರೀ. ಇನ್ನು ಮೂರು ನಾಲ್ಕು ವರ್ಷ ಆದರೆ ಡೈರೆಕ್ಷನ್‌ ಮಾಡಕ್ಕೂ ಆಗೋಲ್ಲ’ ಹೀಗಂತ ಎಚ್ಚರಿಸಿದ್ದು ಹಂಸಲೇಖ ಶ್ರೀಮತಿ ಲತಾ ಹಂಸಲೇಖ.  ಅವರಿಗೂ ” ಹೌದಲ್ವಾ’ ಅಂತ ಅನಿಸಿದ್ದೇ ಆವಾಗಂತೆ. ಆಗ ಶುರುವಾದ್ದದ್ದೇ “ಗಿಟಾರ್‌’ ಚಿತ್ರದ ಕೆಲಸ. ಆದರೆ ಸೆಟ್ಟೇರಿದ್ದು ಮಾತ್ರ “ಶಕುಂತ್ಲೆ’ ಚಿತ್ರವಂತೆ.

 ಗಿಟಾರ್‌ ಕನಸು…
  ಹಂಸಲೇಖಗೆ ದೊಡ್ಡ ಕನಸು ಮಾತೃಸಂಸ್ಥೆಗಾಗಿ ಮ್ಯೂಸಿಕ್‌ ಮತ್ತು ವಿಷ್ಯುಯಲ್ಸ್‌ ಇಟ್ಟುಕೊಂಡು ದೊಡ್ಡ ಪಿಕ್ಚರ್‌ ಮಾಡಬೇಕು ಅನ್ನೋದು.  ಈ ವಿಚಾರವನ್ನು ವೀರಸ್ವಾಮಿ ಅವರಲ್ಲೂ ಹೇಳಿಕೊಂಡಿದ್ದರಂತೆ. ಅವರೂ ಒಪ್ಪಿಕೊಂಡಿದ್ದರಂತೆ. ಆದರೆ ಕಾಲ ಕೂಡಿಬರಲಿಲ್ಲವಂತೆ.  

 “ಇದನ್ನು ದುರಹಂಕಾರದ ಮಾತು ಅಂದು ಕೊಳ್ಳಬೇಡಿ. ಅಂಥ ಚಿತ್ರವನ್ನು ನಾನೇ ಮಾಡಬೇಕು. ಏಕೆಂದರೆ, ನಾನೊಬ್ಬ ಸಂಗೀತ ನಿರ್ದೇಶಕ, ನಟ, ಬರಹಗಾರ, ಚಿತ್ರ ನಿರ್ದೇಶಕ ಇಷ್ಟೂ ಆಗಿರುವುದರಿಂದ ವಿಷ್ಯುಯಲಿ ಚಿತ್ರ ಹೇಗಿರಬೇಕು ಅನ್ನೋ ಕಲ್ಪನೆ ನನಗೆ ಮಾತ್ರ ಸಾಧ್ಯ. ಇದರ ಮಧ್ಯೆ ನನ್ನ ಶಿಷ್ಯರು ಬಂದರು. ನಾನು ಮಾಡ್ತೀನಿ ಅಂತೆಲ್ಲ ಹೇಳಿದರು. ಕೆಲವರು ಐಡಿಯಾ ಕದ್ದರು. ಯಾರೂ ಪೂರ್ತಿ ಗೊಳಿಸಲಿಲ್ಲ. ಈಗ ನಾನೇ ಪೂರ್ತಿ ನಿರ್ದೇಶನಕ್ಕೆ ಇಳಿದಿದ್ದೇನೆ. ಅದೇ “ಗಿಟಾರ್‌’ ಚಿತ್ರ. ಇಡೀ ಜಗತ್ತು ಕರ್ನಾಟಕದ ಕಡೆ ತಿರುಗಿ ನೋಡುವ ಚಿತ್ರ ಇದು. ಕೆಲಸ ಶುರು ಮಾಡಿದ್ದೇನೆ. ಸೌಂಡ್‌ ಸ್ಕ್ರಿಪ್ಟ್ ರೆಡಿ ಇದೆ. ಹರಸಾಹಸ ಪಟ್ಟು ಟೈಟಲ್‌ ಪಡೆದಿದ್ದೇನೆ’  ಹಂಸಲೇಖ ಕನಸನ್ನು ಹರಡಿದರು. ಜೊತೆಗೆ  ಬೆರಳುಗಳು ಮತ್ತೂಮ್ಮೆ ಕುಣಿ, ಕುಣಿದು ಪಿಯಾನೋ ಮೇಲೆ ಹರಿದಾಡಿತು. ಮಾತೂ ಕೂಡ ಮುಗಿಯಿತು. 

  ಬರ್ತಡೇ ಗಿಫ್ಟ್ ಆಗಿ ಬಂದ ಶಕುಂತ್ಲೆ 
“ಶಕುಂತ್ಲೆ’ ಕಥೆ ಸಿಕ್ಕಿದ್ದು ಊಟಿಯಲ್ಲಿ. 20 ವರ್ಷದ ಹಿಂದೆ.  ಹಂಸಲೇಖ ಶೂಟಿಂಗ್‌ಗೆ ಹೋದಾಗ ಸ್ಥಳೀಯ ಪ್ರದೇಶಗಳ ಪರಿಚಯ ಮಾಡಿಕೊಳ್ಳುವುದು ರೂಢಿ. ಹಾಗೇ ಊಟಿಯ ಹಳ್ಳಿಗಳ ಕಡೆ ಹೋದಾಗ ದಟ್ಟಕಾಡಿನ ದರ್ಶನವಾಯಿತಂತೆ. ಅಲ್ಲಿದ್ದವರು ನಿಮಗೆ ಒಂದು ಒಳ್ಳೇ ಸ್ಥಳ ತೋರಿಸ್ತೀನಿ ಬನ್ನಿ ಅಂತ ಕಾಡಿನ ಅಂತರಾಳಕ್ಕೆ ಕರೆದುಕೊಂಡು ಹೋದರಂತೆ. ಅಲ್ಲಿ ನೋಡಿದರೆ ಸ್ವರ್ಗ. ದೊಡ್ಡ ಬೆಟ್ಟ. ಅದರ ಮೇಲೆ ವಯ್ನಾರದಿಂದ  ಬೀಳುತ್ತಿದ್ದ ಬಿಸಿಲಕೋಲುಗಳು. ಮಧ್ಯೆ ಮಧ್ಯೆ ಹಿಮದ ಜೂಟಾಟ. ಹಂಸಲೇಖ ಖುಷಿಯಾದರು. ಬೆಟ್ಟವನ್ನು ತದೇಕಚಿತ್ತದಿಂದ ನೋಡಿದರು. ಯಾವುದೋ ಸುಂದರಿಯೊಬ್ಬಳು ಮಲಗಿದಂತೆ, ಮೇಲೆ ಚಂದ್ರ ಘೋಚರಿಸಿದಂತೆ ಆಯಿತು. ಆಗ ಹೊಳೆದದ್ದೇ ಈ ಕತೆ. 

 “ನನ್ನ ತಲೆಯಲ್ಲಿ ಇದ್ದದ್ದು ಕನ್ಯಾಕುಮಾರಿ ಅನ್ನೋ ಟೈಟ್ಲು. ಕಥೆ ಹುಟ್ಟಿದ್ದು ಹಾಗೇ. ಆದರೆ, ನನ್ನ ಹೆಂಡ್ತಿ ಶಕುಂತ್ಲೆà ಅಂತ ಕಲೋಕಿಯೊಲ್ಲಾಗಿ ಹೇಳಿದ ಮೇಲೆ ಇದೇ ಸರಿ ಅನಿಸಿತು.  ನಿರ್ಮಾಪಕ ಸಂತೋಷ ಅಪ್ಪಣಗೆ ಐದು ಕಥೆಗಳನ್ನು ಹೇಳಿದೆ. ಅವರು ನಿಮ್ಮ ಕನ್ಯಾಕುಮಾರೀನೇ ಇರಲಿ ಅಂದರು. ನಾನು ಇನ್ನೊಂದು ಸಲ ಯೋಚನೆ ಮಾಡಿ ಅಂದೆ. ಇಲ್ಲ, ಇಲ್ಲ ಇದೇ ಇರಲಿ ಅಂತ ಹೇಳಿ ಬರ್ತಡೇ ಗಿಫ್ಟ್ ಅಂತ ಬಜೆಟ್‌ನ ಪೂರ್ತಿ ಮೊತ್ತ ಅಕೌಂಟಿಗೆ ಹಾಕಿಬಿಟ್ಟಿದ್ದಾರೆ’ ಎಂದರು ಹಂಸಲೇಖ. 

 “ಶಕುಂತ್ಲೆ’ ಚಿತ್ರದ ಶೇ. 60ರಷ್ಟು ಕೆಲಸ ಮುಗಿದಿದೆಯಂತೆ. ಇದರಲ್ಲಿ ಟೆಕ್ನಾಲಜಿಯನ್ನು ಗಿಮಿಕ್‌ಗಾಗಿ ಬಳಸುವುದಿಲ್ಲ. ಕಾವ್ಯಸೌಂದರ್ಯ ತೋರಿಸಲು ಬಳಸುವ ಉದ್ದೇಶವಿದೆ. ಆಮೇಲೆ  ಶೂಟಿಂಗ್‌ ಶುರುವಾಗುವ ಹದಿನೈದು ದಿನ ಮೊದಲು ದೊಡ್ಡ ಡೈರೆಕ್ಟರ್‌ ಅನ್ನು ಕರೆಸಿ, ನಿರ್ಮಾಪಕರಿಗೆ “ಶಕುಂತ್ಲೆ’ ಚಿತ್ರದ ಸೌಂಡ್‌ಸ್ಕ್ರಿಪ್ಟ್ ಕೊಡುವ ಯೋಚನೆಯಲ್ಲಿದ್ದಾರೆ. ಚಿತ್ರದಲ್ಲಿ ಏನಿದೆ, ಶೂಟಿಂಗ್‌ ಹೇಗೆ ಮಾಡುತ್ತಾರೆ ಅನ್ನೋದು ಕ್ಲಾರಿಟಿ ಇರಬೇಕು. ಇಷ್ಟೇ ಅಲ್ಲ, ಇನ್ನು ಮುಂದೆ ನನ್ನ ಕಂಪೆನಿಯಿಂದ ನಿರ್ಮಾಣವಾಗುವ ಎಲ್ಲ ಚಿತ್ರಗಳೂ ಮೊದಲು ಸೌಂಡ್‌ಸ್ಕ್ರಿಪ್ಟ್ ತಯಾರಾದ ಮೇಲೆಯೇ ಸೆಟ್ಟೇರುವುದು. ಕನ್ನಡ ಚಿತ್ರರಂಗದಲ್ಲಿ ಇದು ಸಂಸ್ಕೃತಿಯಾಗಬೇಕು’ ಅಂದರು ಹಂಸಲೇಖ
 
ಹಂಸಲೇಕರ ಸೌಂಡ್‌ ಮತ್ತು ಸ್ಕ್ರಿಪ್ಟ್ 
 ಸೌಂಡ್‌ ಸ್ಕ್ರಿಪ್ಟ್ ಅಂದರೆ ಇಡೀ ಚಿತ್ರವನ್ನು ಶೂಟಿಂಗ್‌ ಮೊದಲೇ ಹೇಗಿರುತ್ತದೆ ಅಂತ ನೋಡುವುದು. ಇಡೀ ಚಿತ್ರ ಶೂಟಿಂಗ್‌ ಮೊದಲೇ ಡಿಸೈನ್‌ ಆಗಿರುತ್ತದೆ. ಸಂಭಾಷಣೆ, ಸಂಗೀತ, ಮೂಮೆಂಟ್‌, ರೀರೆಕಾರ್ಡಿಂಗ್‌, ಲೋಕೇಶನ್‌ಗಳ ಸ್ಕೆಚ್‌ಗಳು- ಇವಿಷ್ಟು ಸೇರಿಯೇ ಸೌಂಡ್‌ಸ್ಕ್ರಿಪ್ಟ್ ಮಾಡಿರುತ್ತಾರೆ. 2.10 ನಿಮಿಷ ಪೂರ್ತಿ ಶೂಟಿಂಗ್‌ ಮೊದಲು ಚಿತ್ರ ನೋಡಬಹುದು. ಇಲ್ಲಿ ಬಾಕಿ ಇರೋದು ಲೋಕೇಷನ್‌ ಮತ್ತು ನಟನೆ ಮಾತ್ರ.  ಇನ್ನೂ ಸರಳವಾಗಿ ಹೇಳಬೇಕಾದರೆ- ಒಬ್ಬ ಮುಖ್ಯ ಗಾಯಕ ಹೇಗೆ ಹಾಡಬೇಕು ಅನ್ನೋದನ್ನು ಟ್ರಾಕ್‌ಸಿಂಗರ್‌ ಬಳಸಿ ಮಾಡಿರುವ ಟ್ರಾಕ್‌ ರೆಕಾರ್ಡಿಂಗ್‌ ಥರ.  ಸೌಂಡ್‌ಸ್ಕ್ರಿಪ್ಟ್ನಿಂದ ಚಿತ್ರದ ಬಗ್ಗೆ ಕ್ಲಾರಿಟಿ ಬರುತ್ತದೆ. ಯಾವುದೇ ಕಾರಣಕ್ಕೂ ಗೊಂದಲ ಇರೋಲ್ಲ, ಕ್ಲಾಷ್‌ ಆಗುವ ಸಂದರ್ಭಗಳು ಬರೋದಿಲ್ಲವಂತೆ. 

  “ನಮ್ಮಲ್ಲಿ ಬಹುತೇಕ ನಿರ್ದೇಶಕರಿಗೆ ಕ್ಲಾರಿಟಿ ಇರೋಲ್ಲ. ಸೆಟ್‌ಗೆ ಹೋಗಿ ಪ್ಲಾನ್‌ ಮಾಡೋರು, ಡೈಲಾಗ್‌ ಬರೆಯೋರು ಇದ್ದಾರೆ.  ನಿರ್ದೇಶಕರು ಔಟ್‌ಪುಟ್‌ ಏನ್‌ ಕೊಡ್ತಾರೆ ಅನ್ನೋದಕ್ಕೆ ನಿರ್ಮಾಪಕರಾದವರು ಚಿತ್ರ ಮುಗಿಯುವ ತನಕ ಕಾಯಬೇಕು. ಸೌಂಡ್‌ಸ್ಕ್ರಿಪ್ಟ್ನಲ್ಲಿ ಹಾಗಲ್ಲ. ಎಲ್ಲವೂ ಪೈನಲ್‌ ಆಗಿರುತ್ತದೆ. ಇಡೀ ಚಿತ್ರ ಹೇಗಿರುತ್ತದೆ ಅನ್ನೋ ಕಲ್ಪನೆ ನಿರ್ಮಾಪಕರಿಗೆ ಇರುತ್ತದೆ. ಈ ಕಾರಣದಿಂದ ನಮಗೆ ಬೇಡವಾದದ್ದನ್ನು ಬದಲಾಯಿಸಬಹುದು’ ಎನ್ನುತ್ತಾರೆ ಹಂಸಲೇಖ.

ಸೌಂಡ್‌ಸ್ಕ್ರಿಪ್ಟ್ನ ಇನ್ನೊಂದು ವಿಶೇಷ ಇದೆ.  ಚಿತ್ರಕ್ಕೆ ಬೇಕಾಗುವ ಪ್ರಾಪರ್ಟಿ( ಪರಿಕರಗಳು) ಕೂಡ ಮೊದಲೇ ನಿರ್ಧಾರವಾಗಿರುವುದರಿಂದ ಶೂಟಿಂಗ್‌ ಸಮಯದಲ್ಲಿ ಪ್ರಾಪರ್ಟಿಗೋಸ್ಕರ್‌ ಹುಡುಕಾಟ ನಡೆಸುವ ಪ್ರಮೇಯ ಎದುರಾಗುವುದಿಲ್ಲವಂತೆ.  “ಲೋಕೇಷನ್‌ ಯಾವುದು ಅನ್ನೋದಕ್ಕೆ ಸಂಬಂಧಿಸಿದಂತೆ ಸ್ಕೆಚ್‌ಗಳು ರೆಡಿಯಾಗಿರುತ್ತವೆ. ಅಲ್ಲಿ ವಾತಾರವಣ ಹೇಗಿರುತ್ತದೆ, ಸ್ಥಳೀಯ ಸೌಲಭ್ಯಗಳು ಏನಿರುತ್ತವೆ ಎಲ್ಲದರ ಮಾಹಿತಿ ಸೌಂಡ್‌ಸ್ಕ್ರಿಪ್‌ನಲ್ಲೇ ಇರುತ್ತದೆ. ಆ ಸಮಯದಲ್ಲಿ ಮಲ್ಲಿಗೆ ಹೂ ಹುಡ್ಕೊಂಡು ಬಾ, ತಗಡು ತಗೊಂಡು ಬಾ ಅನ್ನೋ ಪ್ರಮೇಯವೇ ಇರೋಲ್ಲ. ಇದರಿಂದ ನಿರ್ದೇಶಕರಿಗಾಗಲಿ, ನಿರ್ಮಾಪಕರಿಗಾಗಲಿ ಒತ್ತಡ ಇರೋಲ್ಲ’ ಎಂದು ವಿವರಿಸುತ್ತಾರೆ ಹಂಸಲೇಖ.

ಕಟ್ಟೆ ಗುರುರಾಜ್‌; ಚಿತ್ರಗಳು: ಮನು 

Advertisement

Udayavani is now on Telegram. Click here to join our channel and stay updated with the latest news.

Next