ಬೆಂಗಳೂರು: ಅಧಿಕಾರಿಗಳನ್ನು ಹುದ್ದೆ ತೋರಿಸದೆ ವರ್ಗಾವಣೆಗೊಳಿಸುವ ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ವರ್ಗಾವಣೆ ಆದೇಶ ಹೊರಡಿಸಿದಾಗ ಅಧಿಕಾರಿಗಳಿಗೆ ಕಡ್ಡಾಯವಾಗಿ ಹೊಸ ಹುದ್ದೆ ತೋರಿಸಬೇಕು ಎಂದು ಆದೇಶ ಹೊರಡಿಸಿದೆ.
ಚಾಮಜರಾನಗರ ಜಿಲ್ಲೆಯ ಹನೂರು ಪುರಸಭೆ ಮುಖ್ಯಅಧಿಕಾರಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಯಾವುದೇ ಹುದ್ದೆ ತೋರಿಸಿಲ್ಲ ಎಂದು ಆಕ್ಷೇಪಿಸಿ ಮೂರ್ತಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಹನೂರು ಪುರಸಭೆ ಮುಖ್ಯಅಧಿಕಾರಿ ಹುದ್ದೆಯಿಂದ ಅರ್ಜಿದಾರರನ್ನು ವರ್ಗಾಯಿಸಿ 2021ರ ಡಿ.23ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ನ್ಯಾಯಪೀಠ, ವರ್ಗಾವಣೆ ಮುನ್ನ ಹೊಂದಿದ್ದ ಹುದ್ದೆಗೆ ಅರ್ಜಿದಾರರನ್ನು ಮರು ನಿಯೋಜಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರರ ಹುದ್ದೆಗೆ ತಮ್ಮನ್ನು ವರ್ಗಾವಣೆ ಮಡುವಂತೆ ಪರಶಿವಯ್ಯ ಅವರು ಕೋರಿದ್ದರು. ಆಗ ಹುದ್ದೆ ಖಾಲಿಯಿರಲಿಲ್ಲ. ಶಾಸಕರೊಬ್ಬರ ಪತ್ರದ ಆಧರಿಸಿ ಪರಶಿವಯ್ಯ ವರ್ಗಾವಣೆ ಮಾಡಲಾಗಿದೆ. ಏನೇ ಇದ್ದರೂ ವರ್ಗಾವಣೆ ಪ್ರಕ್ರಿಯೆಯಲ್ಲಿ ನಿಯಮಗಳು ಪಾಲನೆಯಾಗಬೇಕು. ಅರ್ಜಿದಾರರು ವರ್ಗಾವಣೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಹುದ್ದೆ ತೋರಿಸಿರಲಿಲ್ಲ. ಸಾಮಾನ್ಯ ವರ್ಗಾವಣೆ ಅವಧಿ ನಂತರ ಖಾಲಿಯಿರುವ ಹುದ್ದೆಗಳಿಗೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರರನ್ನು ಹನೂರು ಪುರಸಭೆ ಮುಖ್ಯ ಅಧಿಕಾರಿಯಾಗಿ ಮರು ನಿಯೋಜಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಪ್ರಕರಣವೇನು?
ಹನೂರು ನಗರಸಭೆ ಮುಖ್ಯ ಅಧಿಕಾರಿ ಹುದ್ದೆಯಿಂದ ಮೂರ್ತಿ ಅವರನ್ನು ವರ್ಗಾವಣೆ ಮಾಡಿ 2021ರ ಡಿ.23ರಂದು ಆದೇಶಿಸಿದ್ದ ಸರ್ಕಾರ, ಆ ಹುದ್ದೆಗೆ ಪರಶಿವಯ್ಯ ಎಂಬುವವರನ್ನು ನಿಯೋಜಿಸಿತ್ತು. ಆದರೆ, ಮೂರ್ತಿ ಅವರಿಗೆ ಹೊಸ ಹುದ್ದೆಯನ್ನು ತೋರಿಸದೆ, ಹುದ್ದೆ ಪಡೆಯುವುದಕ್ಕೆ ಸಂಬಂಧಪಟ್ಟ ಇಲಾಖೆ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ಮೂರ್ತಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದು ವಿಚಾರಣೆ ಹಂತದಲ್ಲಿರುವಾಗ 2022ರ ಜು.20ರಂದು ಮೂರ್ತಿಗೆ ಉಳ್ಳಾಲ ಪುರಸಭೆಯಲ್ಲಿ ಖಾಲಿಯಿದ್ದ ಹುದ್ದೆ ತೋರಿಸಲಾಗಿತ್ತು.