ಹುಬ್ಬಳ್ಳಿ: ಅವಳಿ ನಗರದಲ್ಲಿ ಫ್ಲೈಓವರ್ ನಿರ್ಮಾಣ ನಿಟ್ಟಿನಲ್ಲಿ ವಿನ್ಯಾಸ ಪೂರ್ಣಗೊಂಡಿದ್ದು, ಇನ್ನು 8-10 ದಿನಗಳಲ್ಲಿ ಮಹಾನಗರ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರದರ್ಶಿಸಲು ವಿನ್ಯಾಸ ರೂಪಣೆ ಮಾಡಲು ಸಂಸ್ಥೆ ನಿರ್ಧರಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫ್ಲೈಓವರ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ಮಂಜೂರಾತಿ ನೀಡಿದ ಹಿನ್ನೆಲೆಯಲ್ಲಿ ಮುಂಬೈನ ಸಂಸ್ಥೆಯೊಂದರ ಮೂಲಕ ಸಮೀಕ್ಷೆ ಹಾಗೂ ವಿನ್ಯಾಸ ರೂಪಣೆ ಕಾರ್ಯ ಕೈಗೊಳ್ಳಲಾಗಿತ್ತು. ವಿನ್ಯಾಸ ಸಿದ್ಧಗೊಂಡಿದ್ದು, ಮೂಲ ಯೋಜನೆಗಿಂತ ವಿಸ್ತೃತ ಯೋಜನೆಗೆ ವಿನ್ಯಾಸ ರೂಪಿಸಲಾಗುತ್ತಿದೆ ಎಂದರು.
ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಕಮರಿಪೇಟೆವರೆಗೆ ಮಾತ್ರ ಫ್ಲೈಓವರ್ ನಿರ್ಮಾಣ ಯೋಜನೆ ಇತ್ತು. ಅದನ್ನು ಬಂಕಾಪುರ ವೃತ್ತದ ವರೆಗೆ ವಿಸ್ತರಿಸಲಾಗುತ್ತಿದೆ. ಅದೇ ರೀತಿ ಚನ್ನಮ್ಮ ವೃತ್ತದಿಂದ ಬಸವ ವನ ಬದಲು ಕ್ಲಾರ್ಕ್ಸ್ ಇನ್ ಹೋಟೆಲ್‌ವರೆಗೆ, ಚನ್ನಮ್ಮ ವೃತ್ತದಿಂದ ಗದಗ ರಸ್ತೆಯಲ್ಲಿ ಅಶೋಕ ಹೋಟೆಲ್‌ವರೆಗೆ, ವಿಜಯಪುರ ರಸ್ತೆಯಲ್ಲಿ ದೇಸಾಯಿ ಕ್ರಾಸ್‌ವರೆಗೆ ಫ್ಲೈಓವರ್ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದರು.
ಈ ಮೊದಲು ಫ್ಲೈಓವರ್ ಯೋಜನೆಗೆ ಸುಮಾರು 300 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿತ್ತು. ಕೇಂದ್ರ ಸರಕಾರ ಇದಕ್ಕೆ ಅನುಮೋದನೆಯನ್ನೂ ನೀಡಿತ್ತು. ಇದೀಗ ಯೋಜನೆ ವಿಸ್ತರಿಸಲಾಗಿದ್ದು, ಒಟ್ಟು ಅಂದಾಜು 500-600 ಕೋಟಿ ರೂ. ಆಗಬಹುದೆಂದು ಹೇಳಲಾಗಿದ್ದು, ತಾವು ಹಾಗೂ ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ವಿಸ್ತೃತ ಯೋಜನೆಗೆ ಮಂಜೂರಾತಿ ಪಡೆಯುವುದಾಗಿ ತಿಳಿಸಿದರು.
ಪುಣೆ-ಬೆಂಗಳೂರು ರಸ್ತೆಯಲ್ಲಿ ಚನ್ನಮ್ಮ ವೃತ್ತದಿಂದ ಬಂಕಾಪುರ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸಕರಾರ 50 ಕೋಟಿ ರೂ. ಮಂಜೂರು ಮಾಡಿದ್ದು, ಅತಿಕ್ರಮಣಗೊಂಡ ರಸ್ತೆ ತೆರವು ಕಾರ್ಯ ಆಗಬೇಕಾಗಿದೆ. ಅದೇ ರೀತಿ ಗದಗ ರಸ್ತೆಯಿಂದ ಕಾರವಾರ ರಸ್ತೆಯ ಅಂಚಟಗೇರಿವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 200 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಬಿಆರ್‌ಟಿಎಸ್ ಕಾಮಗಾರಿ ಆಮೆವೇಗ ಹಾಗೂ ಕೆಲವೊಂದು ಸಮಸ್ಯೆಗಳ ನಿವಾರಣೆ ಕುರಿತಾಗಿ ತಾವು ಹಾಗೂ ಸಂಸದ ಜೋಶಿಯವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರಲ್ಲದೆ, ಹುಬ್ಬಳ್ಳಿ ಇಲ್ಲವೆ ಬೆಂಗಳೂರಿನಲ್ಲಿ ಕೇಂದ್ರ ಸಚಿವರ ನೇತೃತ್ವದಲ್ಲಿ ಬಿಆರ್‌ಟಿಎಸ್ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.