ಹೊಸದಿಲ್ಲಿ: ಉದ್ಯೋಗ, ಕೌಟುಂಬಿಕ ಜವಾಬ್ದಾರಿ, ಸಮಯಾವಕಾಶದ ಕೊರತೆಯಿಂದಾಗಿ ಬಹುತೇಕ ಮಂದಿ ತಮ್ಮ ಅಭಿರುಚಿ, ಹವ್ಯಾಸಗಳಿಗೆ ಎಳ್ಳುನೀರು ಬಿಡುತ್ತಾರೆ. ಆದರೆ ಕೇರಳದ ಈ ತಾಯಿ-ಮಗ ಮಾತ್ರ ಇಂಥ ಎಲ್ಲ ನೆಪಗಳನ್ನೂ ಬದಿಗೊತ್ತಿ, ಕೇವಲ 51 ದಿನಗಳಲ್ಲಿ 28 ರಾಜ್ಯಗಳನ್ನು ಸುತ್ತಿದ್ದಾರೆ. ಸೋಜಿಗದ ಭಾರತದ ಮೂಲೆ ಮೂಲೆಯನ್ನು ಕಣ್ತುಂಬಿಕೊಳ್ಳಲು ಇವರು ಬರೋಬ್ಬರಿ 16,800 ಕಿ.ಮೀ.ಗಳಷ್ಟು ದೂರ ಕಾರು ಚಲಾಯಿಸಿದ್ದಾರೆ!
ಈ ಸಾಧನೆ ಮಾಡಿದವರು ಕೊಚ್ಚಿಯ ಸರಕಾರಿ ಆಯುರ್ವೇದ ಕಾಲೇಜಿನ ಪ್ರೊಫೆಸರ್ ಆಗಿರುವ ಡಾ| ಮಿತ್ರಾ ಸತೀಶ್. ಮಾರ್ಚ್ ತಿಂಗಳಲ್ಲಿ ತಮ್ಮ 10 ವರ್ಷದ ಪುತ್ರ ನಾರಾಯಣನೊಂದಿಗೆ ಇವರು ಈ ಕ್ರಾಸ್ ಕಂಟ್ರಿ ಟ್ರಿಪ್ ಕೈಗೊಂಡು, ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಮಾ.17ರಂದು ಕೊಚ್ಚಿಯಿಂದ ಆರಂಭವಾದ ಇವರ “ಒರು ದೇಸಿ ಡ್ರೈವ್’ (ಒಂದು ದೇಸೀ ಪಯಣ) ತಮಿಳುನಾಡು, ಕರ್ನಾಟಕ, ಪುದುಚೇರಿ, ಆಂಧ್ರ, ತೆಲಂಗಾಣ, ಒಡಿಶಾ, ಪ.ಬಂಗಾಲದಿಂದ ಕಾಶ್ಮೀರ, ಈಶಾನ್ಯ ಭಾರತದವರೆಗೂ ತಲುಪಿದೆ. ಕರ್ನಾಟಕದ ಹಂಪಿಯ ಸೊಗಡು, ಉದಕಮಂಡಲದ ಬುಡಕಟ್ಟು ಜನಾಂಗೀಯರ ಸಂಸ್ಕೃತಿ, ಪಶ್ಚಿಮ ಬಂಗಾಲದ ಟೆರಾಕೋಟಾ ಟೈಲ್ ತಯಾರಿಕೆ, ಅಸ್ಸಾಂನ ಮಡಿಕೆ ತಯಾರಿಯ ಕೌಶಲದವರೆಗೆ ಎಲ್ಲವನ್ನೂ ನೋಡಿ, ಕಲಿತು ಈ ಅಮ್ಮ-ಮಗ ಸಂಭ್ರಮಿಸಿದ್ದಾರೆ.
ಇವರ ಈ “ಭಾರತ ದರ್ಶನ’ಕ್ಕೆ ವೆಚ್ಚವಾಗಿದ್ದು ಕೇವಲ 1.5 ಲಕ್ಷ ರೂ.ಗಳು ಮಾತ್ರ. “ಪತಿ ಹಾಗೂ ಕುಟುಂಬದ ಇತರ ಸದಸ್ಯರ ಬೆಂಬಲದಿಂದಾಗಿ 51 ದಿನಗಳ ಅವಧಿಯಲ್ಲಿ 16,800 ಕಿ.ಮೀ. ಪ್ರಯಾಣಿಸಿ, ದೇಶದ ಎಲ್ಲ 28 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ನನ್ನ ಕನಸು ಈಡೇರಿಕೊಂಡಿದ್ದೇನೆ’ ಎಂದಿದ್ದಾರೆ ಡಾ| ಮಿತ್ರಾ ಸತೀಶ್.