Advertisement

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

03:26 PM Nov 16, 2024 | Team Udayavani |

ಕೊವೆಂಟ್ರಿ: ಚುಮುಚುಮು ಚಳಿ ಮತ್ತು ಮೋಡಗಳ ಹಿಂದೆ ಮರೆಯಾಗಿದ್ದ ಸೂರ್ಯನೊಂದಿಗೆ ನ. 9ರ ಬೆಳಗಾಯಿತು. ಕನ್ನಡ ಬಳಗ UK (41ರ ಹರೆಯದ ಕನ್ನಡ ಬಳಗ, UKಯ ಮೊಟ್ಟ ಮೊದಲ ಕನ್ನಡ ಸಂಘ), ಮಿಡ್‌ಲ್ಯಾಂಡ್ಸ್‌ ಕನ್ನಡಿಗರೊಂದಿಗೆ ಕೈಗೂಡಿ ಆಯೋಜಿಸಿದ ದೀಪಾವಳಿ ಮತ್ತು ಕರ್ನಾಟಕ ರಾಜ್ಯೋತ್ಸವದ ಸಮಾರಂಭದ ಬೆಳಗು! ಚಳಿ ಮತ್ತು ಮೋಡತುಂಬಿದ ವಾತಾವರಣವನ್ನು ಲೆಕ್ಕಿಸದೆ ಖೀಓಯ ವಿವಿಧ ಪ್ರಾಂತಗಳಿಂದ ಕನ್ನಡಿಗರು ಕೊವೆಂಟ್ರಿ ನಗರದ ಮರ್ಸಿಯಾ ಸಭಾಂಗಣಕ್ಕೆ ಬಂದಿಳಿದರು.

Advertisement

ಮುಖ್ಯ ಅತಿಥಿಯಾಗಿ ಕರ್ನಾಟಕದಿಂದ ಬಂದ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್‌ ಅವರೊಂದಿಗೆ ಕನ್ನಡ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸ್ಥಳೀಯ ಕಲಾವಿದರಿಂದ ಬಹಳಷ್ಟು ಉತ್ತಮ ಕಲಾ ಪ್ರದರ್ಶನಗಳಾದವು. ಕೆಲವು ಪುಟಾಣಿಗಳು ಪ್ರದರ್ಶಿಸಿದ “ಪ್ರಹ್ಲಾದ ಚರಿತ್ರೆ’, ಪ್ರಬುದ್ಧ ಭರತನಾಟ್ಯ ಕಲಾವಿದೆಯರಿಂದ “ರಾಮಾಯಣ’ ನೃತ್ಯ ನಾಟಕ, ಡಿ.ವಿ.ಜಿ. ಅವರ ಅಂತಃಪುರ ಗೀತೆಯೊಂದರ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ಕಾರ್ಯಕ್ರಮಕ್ಕೆ ಸ್ಥಳೀಯ ಅಧಿಕಾರಿಗಳಾದ ಮಿಡ್‌ಲ್ಯಾಂಡ್ಸ್‌ನ ಪೊಲೀಸ್‌ ಕಮಿಷನರ್‌ ಸೈಮನ್‌ ಫಾಸ್ಟರ್‌, ಬರ್ಮಿಂಗ್‌ಹ್ಯಾಮ್‌ನ ಭಾರತೀಯ ಕಾನ್ಸುಲೇಟಿನ ಉಪಆಡಳಿತಾಧಿಕಾರಿ ಪ್ರಮೋದ ಯಾದವ ಮತ್ತು ಕೊವೆಂಟ್ರಿ (ದಕ್ಷಿಣ)ದ ಪಾರ್ಲಿಮೆಂಟ್‌ ಸದಸ್ಯೆ ಝಾರಾ ಸುಲ್ತಾನಾ ಉಪಸ್ಥಿತರಿದ್ದುದು ಒಂದು ವಿಶೇಷ. ಇವರೆಲ್ಲರನ್ನೂ ವೇದಿಕೆಗೆ ಆಹ್ವಾನಿಸಿ, ಸಮ್ಮಾನಿಸಲಾಯಿತು.

Advertisement

ಸಂಜೆ ಅನುರಾಧ ಭಟ್‌ ಅವರ ಸಂಗೀತ ಕಾರ್ಯಕ್ರಮ ಅವಿಸ್ಮರಣೀಯ! ತಮ್ಮ ಸುಶ್ರಾವ್ಯ ಕಂಠಸಿರಿಯಲ್ಲಿ ಕನ್ನಡದ ಹಲವಾರು ಸುಪ್ರಸಿದ್ಧ ಹಾಡುಗಳನ್ನು ಹಾಡಿ ಖೀಓ ಕನ್ನಡಿಗರನ್ನು ರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅವರು ಹಾಡಿದ “medley’ ಹಾಡುಗಳಿಗೆ ಜನ ಹುಚ್ಚೆದ್ದು ಕುಣಿದರೆಂದರೆ ಅತಿಶಯೋಕ್ತಿಯಲ್ಲ!

ಸಂಗೀತ ಕಾರ್ಯಕ್ರಮದ ಇನ್ನೊಂದು ವೈಶಿಷ್ಟ್ಯವೆಂದರೆ ಅನುರಾಧಾ ಭಟ್‌ ಅವರೊಡನೆ ನೋಂದಾಯಿಸಿದ ಸಭಿಕರು ಸಹ ಹಾಡಲು ಅವಕಾಶ ದೊರೆತದ್ದು. ಅದು ಅವರ ಜೀವನದ ಅವಿಸ್ಮರಣೀಯ ಅನುಭವವಾಗಿತ್ತು. ಮಧ್ಯಾಹ್ನದ ಪುಷ್ಕಳ ಊಟ, ಸಂಜೆಯ ಲಘು ಉಪಹಾರ (ಮಿರ್ಚಿ ಬಜ್ಜಿ) ಮತ್ತು ರಾತ್ರಿಯ ಊಟ ಬಹಳ ಸ್ವಾದಿಷ್ಟವಾಗಿದ್ದವು. ಪ್ರತಿಯೊಂದು ಪದಾರ್ಥವೂ ಹಿತಮಿತವಾದ ಉಪ್ಪು, ಹುಳಿ, ಖಾರದೊಂದಿಗೆ ನಾಲಿಗೆಗೆ ಮುದನೀಡಿತು.

ನಮ್ಮ ಕಾರ್ಯಕ್ರಮಕ್ಕೆ ವಿಶೇಷ ಕರ್ನಾಟಕ ಶೈಲಿಯ ಸವಿರುಚಿಯಾದ ತಿಂಡಿ ಮತ್ತು ಭೋಜನ ಮಾ ಫ್ಲೆವರ್ಷ್‌ ಕಡೆಯಿಂದ ಏರ್ಪಾಡಾಗಿತ್ತು ಹಾಗೂ ಓದುಗರಿಗೆ ಕನ್ನಡ ಪುಸ್ತಕ ಮಳಿಗೆ ಇತ್ತು. ದಿನವಿಡೀ ಹಾಜರಿದ್ದವರು ಕರ್ನಾಟಕದ ಖಾದ್ಯಗಳನ್ನು ಸವಿಯುತ್ತ, ಮಕ್ಕಳೂ ಹಿರಿಯರು ಭಾಗವಹಿಸುವಂತೆ ಮಾಡುತ್ತ ಈ ಕಾರ್ಯಕ್ರಮವು ಯುಕೆಯಾದ್ಯಂತದ ಕನ್ನಡಿಗರನ್ನು ಯಶಸ್ವಿಯಾಗಿ ಒಟ್ಟುಗೂಡಿಸಿತು.

ಕಾರ್ಯಕ್ರಮದ ಗೆಲುವಿಗಾಗಿ ಕೈ ಜೋಡಿಸಿದ ಮುಖ್ಯ ಪ್ರಾಯೋಜಕರು “ಕರ್ನಾಟಕ ಸೋಪ್ಸ್‌ ಡಿಟರ್ಜೆಂಟ್ಸ್‌(ಮೈಸೂರು ಸ್ಯಾಂಡಲ್‌)” ಮತ್ತು ಇತರೆ ಪ್ರಾಯೋಜಕರು “ಲಂಡನ್‌ ಫೈನಾನ್ಶಿಯಲ್‌ ಲಿ”, ” ಟೊಟಲ್‌ ಇನ್ವಿರಾನ್ಮೆಂಟ್‌ ಹೋಮಸ್‌” , “ಆಹಾ ಬರ್ಜಾ”, “ಶ್ರೀ ರುಚಿ” ; “ಮಿಡಿಯ ಕನೆಕಟ್‌”. ಯು.ಕೆ.ಯ ಹಾಗೂ ಜಗತ್ತಿನಾದ್ಯಾಂತ ಹಾಸು ಹೊಕ್ಕಾಗಿರುವ ಸಮಸ್ತ ಕನ್ನಡ ಜನತೆಗೆ ನಮ್ಮೆಲ್ಲರ ನಮನಗಳು ಹಾಗೂ ಇದಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಧಾನ್ಯವಾದಗಳು. “ಕನ್ನಡ ಬಳಗ ಯುಕೆ ” ಮತ್ತು “ಮಿಡ್ಲಾಂಡ್ಸ್‌ ಕನ್ನಡಿಗರ” ಸ್ಥಳೀಯ ಗುಂಪುಗಳಾದ “ಕೋವೆಂಟ್ರಿ ಕನ್ನಡಿಗರು”, “ಲೀಮಿಂಗ್ಟನ್‌ ಸ್ಪಾ/ವಾರ್ವಿಕ್‌ ಕನ್ನಡಿಗರು, “ಬರ್ಮಿಂಗ್‌ಹ್ಯಾಮ್‌ ಕನ್ನಡ ಗ್ರೂಪ್‌”, “ಯುಕೆ ನಮ್ಮವರು” , “ರಗ್ಬಿ ಕನ್ನಡಿಗರು” , “ಶ್ರಾಪ್‌ಶೈರ್‌ಕನ್ನಡಿಗರು” , “ಸ್ಟ್ರಾಟ್‌ಫೋರ್ಡ್‌ ಕನ್ನಡಿಗರು” ಸಂಸ್ಥೆಗಳು ಒಗ್ಗಟ್ಟಾಗಿ ಬಂದು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದವು.

ವರದಿ: ಅನ್ನಪೂರ್ಣ ಆನಂದ್‌, ಮಿಲ್ಟನ್‌ಕೀನ್ಸ್‌

 

Advertisement

Udayavani is now on Telegram. Click here to join our channel and stay updated with the latest news.

Next