Advertisement

Desi Swara : ರೈನ್‌ಮೈನ್‌ ಕನ್ನಡ ಸಂಘಮಹಿಳಾ ದಿನಾಚರಣೆ: ಸ್ತ್ರೀ ಎಂದರೆ ಅಷ್ಟೇ ಸಾಕೇ ?

12:37 PM Apr 06, 2024 | Nagendra Trasi |

ಫ್ರಾಂಕ್‌ಫ‌ರ್ಟ್‌:‘ಸ್ವರ್ಗದ ಕಾವ್ಯ ನಕ್ಷತ್ರವಾದರೆ, ವಿಶ್ವದ ಕಾವ್ಯ ಮಹಿಳೆ’. ವಾತ್ಸಲ್ಯ, ಅಕ್ಕರೆ, ತಾಳ್ಮೆಯ ಸಂಗಮವಲ್ಲದೆ ನವಿರಾದ ಭಾವನಾತ್ಮಕ ತಂತುಗಳ ಬೆಸುಗೆ ಬೆಸೆವ ಬಂಧು ಹೆಣ್ಣು . ‘ಗಂಡು ಆಳ್ವಿಕೆಗೆ, ಹೆಣ್ಣು ಅಧೀನತೆಗೆ’ ಎಂಬ ಭಾವ ನಿಧಾನವಾಗಿ ಬದಲಾಗುತ್ತಾ ಮಹಿಳೆ ಹೊರಗೂ ದುಡಿದು, ಮನೆಯೊಳಗೂ ಮಿಡಿದು ತನ್ನವರನ್ನು ಸಲಹುವ ಪರಿ ವಿಶೇಷವಾದುದು. ಇಂತಹ ಮಹಿಳೆಯರನ್ನು ಸಂಭ್ರಮಿಸಲು ರೈನ್‌ಮೈನ್‌ ಕನ್ನಡ ಸಂಘ ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಂಡಿತ್ತು.

Advertisement

ಸ್ವಾತಿ ಅಜೀತ್‌ ಅವರು ಮಾಧುರ್ಯವಾಗಿ ಹಾಡಿದ ಪ್ರಾರ್ಥನೆ ಎಲ್ಲರಲ್ಲೂ ಭಕ್ತಿಭಾವವನ್ನು ಸ್ಫುರಿಸಿದರೆ, ಡಾ| ಉಷಾ ಕಾಂತೀಮಠ ಅವರು ನಡೆಸಿಕೊಟ್ಟ ಯೋಗ, ಚಿತ್ತವನ್ನು ಕೇಂದ್ರೀಕರಿಸಿತು. ಅನಂತರದ ಡಾ| ಅನುರಾಧಾ ದೊಡ್ಡ ಬಳ್ಳಾಪುರ ಅವರ ಜೀವನದ ಕ್ರೀಡಾಪಯಣ, ಇಂದು-ಮುಂದಿನ ಮಹಿಳಾ ಪೀಳಿಗೆಗೆ ಕಿವಿಮಾತು, ಸ್ಫೂರ್ತಿಯ ಚಿಲುಮೆ ಕಾರ್ಯಕ್ರಮಗಳು ನಡೆದವು. ಬಾಲಿಸ್ಟೆಪ್‌ ಅವರಿಂದ ನಡೆಸಿಕೊಟ್ಟ ನೃತ್ಯ ಹೆಂಗೆಳೆಯರ ಮನದೊಂದಿಗೆ ಹೆಜ್ಜೆಯನ್ನೂ ಕುಣಿಸಿತ್ತು. ಇದರೊಟ್ಟಿಗೆ ಆಯೋಜಿಸಿದ್ದ ಸಂಗೀತ ಕುರ್ಚಿ ಮತ್ತು ಒಂದು ನಿಮಿಷದಲ್ಲಿ ಅನ್ಯಭಾಷಾ ಬಳಕೆಯಿಲ್ಲದೆ ಕನ್ನಡದಲ್ಲೇ ಮಾತನಾಡುವ ಸ್ಪರ್ಧೆ ಮೋಜಿನ ಕಚಗುಳಿಯಿಟ್ಟಿತು.

ಆರ್‌ಎಂಕೆಎಸ್‌ನ ಈ ಮಹಿಳಾ ಸಂಭ್ರಮಾಚರಣೆಗಾಗಿ ‘ನಮಸ್ತೆ ಜರ್ಮನಿ’ಯ ಸಂಸ್ಥಾಪಕರಾದ ಪಲಂಶ್‌ ಅವರು ಆರ್ಥಿಕವಾಗಿ ಸಹಾಯಹಸ್ತ ನೀಡಿದ್ದಾರೆ. ಉತ್ತಮ ಉದ್ದೇಶಗಳಲ್ಲಿ ಸಹಾಯ ಹಸ್ತವೂ ಸದಾ ಜತೆಯಿರುವಂತೆ ಅನೂಪ್‌ ವದನಹಳ್ಳಿ ಚಂದರ್‌ ಹಾಗೂ ಜಯಂತ್‌ ಬದ್ರಿ, ತುಂಗಾ ಹಾಗೂ ಪ್ರದೀಪ್‌ ಶೆಟ್ಟಿ ಹಾಗೂ ಲೋಕನಾಥ ಅವರು ಸ್ವಯಂ ಸೇವಕರಾಗಿ ಸಹಾಯಹಸ್ತ ನೀಡಿದ್ದಾರೆ. ಎಲ್ಲರ ಸಹಯೋಗದೊಂದಿಗೆ ಸಹಕಾರ್ಯಕಾರಿ ಸಮಿತಿಯ ಪೂಜಾ ಚಿರಂತ್‌ ಹುಲ್ಗೂರ್‌, ಸಿತಾರಾ ಮಾಕಂ, ಸರಿತಾ ಪಿಟ್ಟಾ , ಬೃಂದಾ ಹರ್ಷ, ಶ್ರವಂತಿ ಜಯಚಂದ್ರನ್‌ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಪೂರ್ವ ಬೆಳೆಯೂರು ಅವರು ವಂದಿಸಿದರು.

ಕೆಲವೇ ಕುಟುಂಬದವರೊಂದಿಗೆ ಪ್ರಾರಂಭವಾದ ಸ್ನೇಹಕೂಟ ಹಲವಾರು ಕನ್ನಡಿಗರನ್ನು ಒಳಗೊಂಡು ಜರ್ಮನಿಯ ಫ್ರಾಂಕ್‌ಫ‌ರ್ಟ್‌ ನಗರದ ಬಹುಮುಖ್ಯ ಕನ್ನಡ ಸಂಘವಾಗಿ ರೈನ್‌ಮೈನ್‌ ಕನ್ನಡ ಸಂಘ ಬೆಳೆದು ನಿಂತಿದೆ.

ಸಾಧನೆ, ಸಾಧಕರು ಎಂದಾಕ್ಷಣ ಅದೆಲ್ಲೋ ದೂರದಲ್ಲಿರುವವರ ವಿವರಗಳನ್ನು ಅಂತರ್ಜಾಲದಲ್ಲಿ ಹುಡುಕಿ ಸಂಗ್ರಹಿಸಿ ಎಲ್ಲರ ಮುಂದೆ ಪ್ರಸ್ತುತ ಪಡಿಸಿ ಚಪ್ಪಾಳೆ ಹೊಡೆದು ಸುಮ್ಮನಾಗುವುದೇ ಅನೂಚಾನಾಗಿ ನಡೆದುಕೊಂಡು ಬಂದಿರುವ ಏಕತಾನತೆಯನ್ನು ಬದಿಗೊತ್ತಿ ನಮ್ಮ ನಡುವಿನ ಮಹಿಳೆಯರ ಸಾಧನೆಯನ್ನು ಗುರುತಿಸಿ ಅವರಿಗೆ ವಿಶೇಷ ವೇದಿಕೆಯನ್ನಿತ್ತು ಗೌರವಿಸಿ, ಪ್ರತೀ ಗೃಹಿಣಿ ಗೃಹದಾಚೆಗೂ ಮಾನ್ಯಳು, ವಿಶೇಷಳು ಎಂಬುದಕ್ಕೆ ಆರ್‌ಎಂಕೆಎಸ್‌ ಮುನ್ನುಡಿ ಬರೆದಿದೆ.

Advertisement

ಡಾ| ಅನುರಾಧಾ ದೊಡ್ಡಬಳ್ಳಾಪುರ: ದಾವಣಗೆರೆಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ಇವರು ಚಿಕ್ಕವಯಸ್ಸಿನಿಂದಲೇ ಕ್ರಿಕೆಟ್‌ನಲ್ಲಿ ಒಲವನ್ನು ಬೆಳೆಸಿಕೊಂಡವರು. ಟಿ20 ಕ್ರಿಕೆಟ್‌ನಲ್ಲಿ ಡಬಲ್‌ ಹ್ಯಾಟ್ರಿಕ್‌ ತೆಗೆದುಕೊಂಡ ಮೊದಲ ಮಹಿಳಾ ಕ್ರಿಕೆಟಿಗರಾಗಿ ವರ್ಲ್ಡ್ ರೆಕಾರ್ಡ್‌ ಮಾಡಿದ್ದು ಈ ಗಮನಾರ್ಹ ಸಾಧನೆ. ಕ್ರಿಕೆಟ್‌ ಜಗತ್ತಿನಲ್ಲಿ ಅವರ ಸ್ಥಾನವನ್ನು ಗಟ್ಟಿಗೊಳಿಸಿದೆ. ಪ್ರತಿಭಾವಂತ ಆಲ್‌ರೌಂಡರ್‌ ಆಗಿ ಅನುರಾಧಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮತ್ತು ಜರ್ಮನಿಯನ್ನು ಪ್ರತಿನಿಧಿಸಿದ್ದಾರೆ. ಫ್ರಾಂಕ್‌ಫ‌ರ್ಟ್‌ನ ಗೋಯತೆ ವಿವಿಯಿಂದ ಹೃದಯ ರಕ್ತನಾಳದ ವಿಜ್ಞಾನದಲ್ಲಿ ಪಿಎಚ್‌.ಡಿ. ಪಡೆದಿರುವ ಅನುರಾಧ ಒಬ್ಬ ವಿಶಿಷ್ಟ ಹೃದಯ ರಕ್ತನಾಳದ ವಿಜ್ಞಾನಿಯೂ ಹೌದು. ಗಿಟಾರ್‌ ನುಡಿಸುವುದರಲ್ಲೂ ಆಸಕ್ತಿ ಹೊಂದಿರುವ ಅವರಂತಹ ಬಹುಮುಖ ಪ್ರತಿಭೆಯ ರೈನ್‌ ಮೈನ್‌ ಕನ್ನಡ ಸಂಘದೊಂದಿಗಿನ ನಂಟು ಮೊದಲಿನಿಂದಲೂ ಬೆಳೆದು ಬಂದಿದೆ.

ಡಾ| ಉಷಾರಾಣಿ ಕಾಂತಿಮಠ: ಬಳ್ಳಾರಿಯಲ್ಲಿ ಜನಿಸಿದ ಉಷಾ ಭಾರತದ ಹೆಮ್ಮೆಯ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಅನಂತರ ಬೆಂಗಳೂರಿನ ಇಂಡಿಯನ್‌ ಇನ್ಸ್‌ಸ್ಟಿಟ್ಯೂಟ್‌ನ ಆಯುರ್ವೇದಿಕ್‌ ಕಾಲೇಜ್‌ ಆ್ಯಂಡ್‌ ಮೆಡಿಕಲ್‌ ರಿಸರ್ಚ್‌ ಸೆಂಟರ್‌ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ತಮ್ಮ ವೈದ್ಯಕೀಯ ಅಭ್ಯಾಸವನ್ನೂ ಪ್ರಾರಂಭಗೊಳಿಸುತ್ತಾರೆ. ಸ್ವಾéಸ್‌ ವಿವಿಯಲ್ಲಿ ಯೋಗಕ್ಕೆ ಸಂಬಂಧಪಟ್ಟ ಅಧ್ಯಯನವನ್ನು ಮುಗಿಸಿ ತಮ್ಮ ಕುಟುಂಬದೊಂದಿಗೆ ಜರ್ಮನಿಯಲ್ಲಿ ನೆಲೆಸಿ, ಕುಟುಂಬ ಮತ್ತು ವೃತ್ತಿ ಜೀವನವನ್ನು ಸಮರ್ಥವಾಗಿ ನಿಭಾಯಿಸುತ್ತಾ “ಗೃಹಿಣೀ ಗೃಹಮುಚತೆ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರು ಆರ್‌ಎಂಕೆಎಸ್‌ನ ಉಪಾಧ್ಯಕ್ಷರಾಗಿಯೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

ಬಾಲಿ ಸ್ಟೆಪ್‌: ಹೆಣ್ಣು ಮಕ್ಕಳು ನಡೆಸಿಕೊಂಡು ಬರುತ್ತಿರುವ ನೃತ್ಯ ಶಾಲೆ. ಈ ಮೂಲಕ ಆರ್ಥಿಕವಾಗಿ ಸಬಲತೆಯನ್ನು ಸಾಧಿಸುವುದಲ್ಲದೆ, ಭಾರತೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕಥಕ್‌, ಬಾಂಗ್ರಾಗಳಂತಹ ನೃತ್ಯಗಳನ್ನು ಆಸಕ್ತರಿಗೆ ಕಲಿಸುವುದರ ಮೂಲಕ ಕಲೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಮಹಿಳೆಯ ಹರಹಿನ ವಿಸ್ತಾರ ಅಗಾಧವಾದುದು. ಪ್ರತೀ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ ಎಂಬುದು ಎಷ್ಟು ಸತ್ಯವೋ ಪ್ರತೀ ಸಬಲ ಹೆಣ್ಣಿನ ಹಿಂದೆ ಆಕೆಯ ಸೂಕ್ಷ್ಮ ಮನಸ್ಸಿನ ಸಂವೇದನಾ ಶೀಲತೆಯನ್ನು ಅರ್ಥೈಸಿಕೊಂಡು ಬೆಂಬಲಿಸುವ ಗಂಡಿರುತ್ತಾನೆ. ಇಂತಹ ವಿಶೇಷ ದಿನಗಳು ನಮ್ಮೊಳಗಿನ ಆಂತರ್ಯಕ್ಕೆ ಅವ್ಯಕ್ತ ಸಮಾಧಾನ ನೀಡುವಂತಹವು. ಇಂತಹ ವಿಶೇಷ ದಿನಕ್ಕಾಗಿ ಆರ್‌ಎಂಕೆಎಸ್‌ನ ಕಾರ್ಯಕಾರಿ ಮತ್ತು ಸಹಕಾರ್ಯಕಾರಿ ಸದಸ್ಯರು ಅವಿರತ ಶ್ರಮದೊಂದಿಗೆ ಮತ್ತಷ್ಟು ವಿಶೇಷವಾಗಿದ್ದಾರೆ.

ವರದಿ: ಶೋಭಾ ಚೌಹಾಣ್‌, ಫ್ರಾಂಕ್‌ಫ‌ರ್ಟ್‌

 

Advertisement

Udayavani is now on Telegram. Click here to join our channel and stay updated with the latest news.

Next