ರಾಧಾಷ್ಟಮಿಯನ್ನು ಯುಎಇ ದೇಶದಲ್ಲಿ ವಿದ್ಯುಕ್ತವಾಗಿ ಆಚರಿಸಲಾಗುತ್ತದೆ. ನಾನು ವಾಸವಿರುವ ನಮ್ಮ ಶಾರ್ಜಾದಲ್ಲಿ ನಡೆದ ರಾಧಾಷ್ಟಮಿಯ ಸಂಭ್ರಮವನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ರಾಧಾಷ್ಟಮಿಯಂದು, ರಾಧಾ ಕೃಷ್ಣ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಸಂಪೂರ್ಣವಾಗಿ ಹೂವುಗಳಲ್ಲಿ ಅಲಂಕರಿಸಲಾಗುತ್ತದೆ. ಹೆಚ್ಚುವರಿಯಾಗಿ, ರಾಧಾಷ್ಟಮಿಯು ರಾಧೆಯ ಪಾದಗಳ ದರ್ಶನ (ವೀಕ್ಷಣೆ) ಪಡೆಯುವ ಏಕೈಕ ದಿನವಾಗಿದೆ.
ರಾಧಾಷ್ಟಮಿಯು ಮಹಾಭಿಷೇಕದಿಂದ ಪ್ರಾರಂಭವಾಗುತ್ತದೆ. ಮನೆಗಳು ಮತ್ತು ಸತ್ಸಂಗದಲ್ಲಿ, ರಾಧಾ ದೇವಿಯ ವಿಗ್ರಹವನ್ನು ಪಂಚಾಮೃತ – ಹಾಲು, ತುಪ್ಪ, ಜೇನುತುಪ್ಪ, ಸಕ್ಕರೆ ಮತ್ತು ಮೊಸರುಗಳ ಐದು ವಿಭಿನ್ನ ಆಹಾರ ಮಿಶ್ರಣಗಳ ಸಂಯೋಜನೆಯೊಂದಿಗೆ ಅಭಿಷೇಕ ಮಾಡಲಾಗುತ್ತದೆ ಮತ್ತು ಅವಳಿಗೆ ಹೊಸ ಉಡುಪನ್ನು ಧರಿಸುತ್ತಾರೆ ಹಾಗೂ ಈ ದಿನದಂದು, ನಾವೆಲ್ಲರೂ ಸೇರಿ ಭಕ್ತಿ ಗೀತೆಗಳು, ಕೀರ್ತನೆಗಳನ್ನು ಹಾಡಿ, ರಾಧಾರಾಣಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ ಮತ್ತು ರಾಧಾರಾಣಿಗೆ, ಕೃಷ್ಣನಿಗೆ ಯಾವುದೇ ರೀತಿ ಭಕ್ತಿಭಾವಗಳನ್ನು ಸಲ್ಲಿಸುತ್ತೇವೆಯೋ ಉಯ್ಯಾ ಲೆ ಸೇವೆ, ಸಕಲ ಶೋಡಷ ಸೇವೆ ಹಾಗೂ ಮಹಾಮಂತ್ರಗಳನ್ನು ಜಪಿಸುತ್ತೇವೆಯೋ ಅದೇ ಪ್ರಕಾರವಾಗಿ ರಾಧಾರಾಣಿಯನ್ನು ಉಯ್ಯಾಲೆ ಸೇವೆಯನ್ನು ಮಾಡುವುದರ ಮೂಲಕ ಮೋಕ್ಷ ಪ್ರಾಪ್ತಿಗಾಗಿ ದೇವಿಯನ್ನು ಬೇಡಿ ಕೊಂಡು ಎಲ್ಲರೂ ಭಕ್ತಿ ಭಾವದಲ್ಲಿ ತೇಲಾಡುವ ಮೂಲಕ ದೇವಿ ರಾಧಾ ಅಷ್ಟಮಿಗೆ ಹೊಸ ಅರ್ಥಬಂದಿತ್ತು ಎನ್ನುವುದು ನನ್ನ ಭಾವನೆ.
ಭಾದ್ರಪದ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಆಚರಿಸಲಾಗುವ ಪರಿವರ್ತಿನಿ ಏಕಾದಶಿಯು ಹಿಂದೂ ಧರ್ಮದಲ್ಲಿ ಮಹತ್ತರವಾದ ಮನ್ನಣೆಯನ್ನು ಪಡೆದುಕೊಂಡಿದೆ. ಈ ಪವಿತ್ರ ಉಪವಾಸವು ರಾಕ್ಷಸ ರಾಜ ಬಲಿಯ ಮೇಲೆ ಭಗವಾನ್ ವಿಷ್ಣುವಿನ ವಿಜಯವನ್ನು ಸ್ಮರಿಸುವ ದಿನವಾಗಿದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ. ಈ ಶುಭ ದಿನದಂದು ಭಕ್ತರು ಉಪವಾಸ ವ್ರತವನ್ನು ಮಾಡಿ, ಕೃಷ್ಣನ, ಧ್ಯಾನ, ಮಹಾಮಂತ್ರ ಪಠಣ ಮಾಡಿದರೆ, ಮೋಕ್ಷ ಪ್ರಾಪ್ತಿ ಎನ್ನುವ ನಂಬಿಕೆ. ಹಿಂದಿನ ತಪ್ಪುಗಳಿಂದ ವಿಮೋಚನೆ ಮತ್ತು ಅಧ್ಯಾತ್ಮಿಕ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಾರೆ.
ಪರಿವರ್ತಿನಿ ಏಕಾದಶಿ ವ್ರತವನ್ನು ಮಾಡುವ ವ್ಯಕ್ತಿ ಜನನ ಮತ್ತು ಮರಣ ಚಕ್ರದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ. ಶಾಂತಿ, ಸಮೃದ್ಧಿ ಮತ್ತು ದೈವಿಕ ಆಶೀರ್ವಾದವನ್ನು ಹೊಂದುತ್ತಾನೆ. ಈ ಉಪವಾಸವನ್ನು ಆಚರಿಸುವ ಮೂಲಕ, ಕೃಷ್ಣನಲ್ಲಿ ದೈವಿಕದೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಕಲುಷಿತ ತುಂಬಿದ, ಮನಸ್ಸು ಶುದ್ಧವಾಗುತ್ತದೆ. ಭಗವತಿ ಶ್ರೀತುಳಸಿಯನ್ನು ಆರಾಧಿಸುವ ಮೂಲಕ ಕೃಷ್ಣನ ಕೃಪೆಗೆ ಪಾತ್ರರಾಗಿ, ಸದಾ ಎಲ್ಲರಲ್ಲೂ ನಾರಾಯಣನನ್ನು ಕಾಣುವ ಮನಸ್ಸು ನಮ್ಮದಾಗುತ್ತದೆ.
*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ