ಸೂರ್ಯನು ಒಂದು ರಾಶಿಯಿಂದ ಮತ್ತೂಂದು ರಾಶಿಗೆ ಪಥ ಬದಲಾಯಿಸುತ್ತಾನೆ. ಇನ್ನೊಂದು ಪ್ರಾಮುಖ್ಯ ಸುಗ್ಗಿಯ ಆಗಮನ. ದವಸ-ಧಾನ್ಯಗಳು ಫಲ ಕೊಡುವ ಸಮಯ. ಇಲ್ಲೂ ಪ್ರಗತಿ, ಗ್ರಾಮೀಣರಿಗೆ ಸುಗ್ಗಿಯ ಕಾಲ. ಮನೆ ಮನೆಗಳಲ್ಲೂ ಸಂಭ್ರಮ. ಈ ಹಬ್ಬದ ಮಹತ್ವ ಸೂರ್ಯನನ್ನು ಆರಾಧಿಸುವುದು ಹಾಗೂ ರೈತರ ಬೆಳೆಗೆ ಆಗಮನ ಕೋರುವುದು.
Advertisement
ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅಗ್ರಸ್ಥಾನ. ಏಕೆಂದರೆ ಇದು ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ಜೀವನವನ್ನೊಳಗೊಂಡಿದೆ. ಸೂರ್ಯನು ಧನು ರಾಶಿಯಲ್ಲಿ ಗೋಚರಿಸುವ ಧನುರ್ಮಾಸದ ಬ್ರಹ್ಮ ಮುಹೂರ್ತದಲ್ಲಿ ವಿಷ್ಣುವಿನ ಪೂಜೆ ಶ್ರೇಷ್ಠ. ಹೇಮಂತ ಋತುವಿನ, ಪುಷ್ಯ ಮಾಸದ ತ್ರಯೋದಶಿ ದಿನದಂದು ರವಿ ಮಕರ ರಾಶಿಗೆ ಹೊರಟ ದಿನ, ಅಂದೇ ಮಕರ ಸಂಕ್ರಾಂತಿ.
Related Articles
Advertisement
ಆದರೆ ಅಂದಿನ ಆಚರಣೆ ರೀತಿಗೂ ಇಂದಿನ ರೀತಿಗೂ ಕಾಲ ಬದಲಾಗಿರುವುದರಿಂದ ವ್ಯತ್ಯಾಸವಿದೆ. ಅಂದು ಬಿಳಿಯ ಬಟ್ಟೆಯಮೇಲೆ ನೆನೆಸಿದ ಎಳ್ಳನ್ನು ಉಜ್ಜಿ ಸಿಪ್ಪೆ ತೆಗೆದು ಹರವಿ ಒಣಗಿಸಿ ಬಾಣಲೆಯಲ್ಲಿ ಘಮಘಮ ಹುರಿಯುತ್ತಿದ್ದ ಅಮ್ಮನ ನೆನಪು ಇಂದಿಗೂ ಅಚ್ಚಳಿ. ಮಕ್ಕಳಿಗೆ ಹೊಸ ಬಟ್ಟೆ ಹೊಲಿಸುತ್ತಿದ್ದ ತಂದೆಯವರ ಆತ್ಮೀಯತೆ ಮರೆಯಲಸಾಧ್ಯ. ಹೀಗೆ ಹಬ್ಬದ ಸಡಗರ ವಾರಗಳ ಮುಂಚೆಯೇ ಆರಂಭವಾಗುತ್ತಿತ್ತು.
ಎಳ್ಳಿಗೂ ಸಂಕ್ರಾಂತಿಗೂ ಏನು ಸಂಬಂಧ ?ನಾವು ಒಬ್ಬೊಬ್ಬರಿಗೂ ಯಾವುದೋ ರೀತಿಯಲ್ಲಿ ಋಣಿ ಆಗಿರುತ್ತೇವೆ. ಅಂದರೆ ಪರೋಕ್ಷವಾಗಿ ಸಾಲ ಪಡೆದ ಹಾಗೆ ಅಂದುಕೊಳ್ಳೋಣ. ಋಣ ಅಂದರೆ ಹಂಗು, ಸಾಲ ಅಂತಲೂ ಹೇಳಬಹುದು. ಈ ಸಾಲವನ್ನು ತೀರಿಸುವ ಬಗೆಯೇ ಎಳ್ಳು ಹಂಚುವ ಸಂಕೇತ. ಎಳ್ಳಿನ ರುಚಿ ಹೆಚ್ಚಿಸಲು ಕಡಲೇಕಾಯಿ, ಕೊಬ್ಬರಿ, ಹುರಿಗಡಲೆ, ಬೆಲ್ಲ ಇವುಗಳನ್ನು ಸೇರಿಸಿ ಬಂಧು ಮಿತ್ರರಿಗೆ ಹಂಚುತ್ತೇವೆ.
ಇದು ಸುಗ್ಗಿಯಕಾಲ. ರೈತರು ಭತ್ತದ ಕಳೆ ಕೀಳುವ ಕಾಲ. ಭತ್ತದ ತೆನೆಗಳನ್ನು ಕಿತ್ತು ಅಕ್ಕಿಯಾಗಿ ಮಾರ್ಪಡಿಸಿ ಜನಸಮೂಹಕ್ಕೆ ಒದಗಿಸುತ್ತಾರೆ. ಅಂದಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಅಕ್ಕಿಯ ಮೂಟೆಗಳನ್ನು ಹೊತ್ತು ತಂದ ರೈತರಿಗೆ ಅದೇ ಅಕ್ಕಿಯಲ್ಲಿ ಪೊಂಗಲ್ ತಯಾರಿಸಿ ದೇವರಿಗೆ ಅರ್ಪಿಸಿ ಅವರಿಗೆ ಉಣ ಬಡಿಸುತ್ತಿದ್ದರು. ಅದು ಇಂದಿಗೂ ನೆನಪು. ಹುಗ್ಗಿ ಅಥವಾ ಪೊಂಗಲ್ ಹೆಸರುಬೇಳೆ, ಬೆಲ್ಲ, ಗೋಡಂಬಿ ತುಪ್ಪಗಳಿಂದ ತಯಾರಿಸುವ ಸಿಹಿ ಪದಾರ್ಥ. ಇದು ಏಕೀಕರಣದ ಸಂಕೇತ ! ಸಂಕ್ರಾಂತಿ ದಿನ ಎಲ್ಲರ ಮನೆಯಲ್ಲೂ ಹುಗ್ಗಿ, ಸುಗ್ಗಿ ಆಚರಿಸಲು! ಅಂದಹಾಗೆ ಸೊಪ್ಪಿನ ಕಡ್ಲೆ ಕಾಯಿ ಕೂಡ ಈ ಹಬ್ಬದ ಒಂದು ಅಂಗ. ಹಸಿಕಡಲೆ ಕಾಳಿನ ಪುಟ್ಟ ಗಿಡಗಳು. ಆ ಕಾಯಿಗಳನ್ನು ಬಿಡಿಸಿ ಬೀಜ ತಿನ್ನುವುದೇ ಒಂದು ದೊಡ್ಡ ಖುಷಿ ! ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಸಂಜೆ ಆರತಿ ಸಂಭ್ರಮ. ಸುವಾಸಿನಿಯರು ಮಕ್ಕಳಿಗೆ ಸಂಪ್ರದಾಯದ ಹಾಡುಗಳನ್ನು ಹಾಡಿ ಮಕ್ಕಳಿಗೆ ಆರತಿ ಮಾಡುವುದೇ ಕಣ್ಣಿಗೆ ದೊಡ್ಡ ಹಬ್ಬ . ಹೀಗೆ ನಮ್ಮ ಹಬ್ಬಗಳು ಹಿಂದಿನಿಂದ ಆಚರಣೆಗೆ ಬಂದು ಇಂದಿಗೂ ಇನ್ನೂ ಹೆಚ್ಚು ಹೆಚ್ಚು ಉತ್ಸಾಹದಿಂದ ವಿಜೃಂಭಣೆಯಿಂದ ನಡೆಸಲ್ಪಡುತ್ತಿದೆ. ಸಂಕ್ರಾತಿ ಹೊಸತನವನ್ನು ಹೊತ್ತು ತರಲಿ. *ಜಯಮೂರ್ತಿ, ಇಟಲಿ