ಅರಬ್ ಸಂಯುಕ್ತ ಸಂಸ್ಥಾನ ಮರಳುಭೂಮಿ, ಗಗನಚುಂಬಿ ಕಟ್ಟಡಗಳು, ಗಿನ್ನೆಸ್ ದಾಖಲೆಯ ವಾಸ್ತು ಶಿಲ್ಪಗಳು ಹಾಗೂ ಹಸುರು ನಾಡಾಗಿ ಪರಿವರ್ತನೆಯಾಗಿರುವ ವಿಶ್ವ ದರ್ಜೆಯ ನವ್ಯ ನಗರವಾಗಿದೆ. ಇನ್ನೂರೈವತ್ತಕ್ಕಿಂತಲೂ ಹೆಚ್ಚು ದೇಶವಾಸಿಗಳು ಅನಿವಾಸಿ ಪ್ರಜೆಗಳಾಗಿ ನೆಲೆಸಿದ್ದಾರೆ. ಯುಎಇ ವಿಶ್ವದ ಹೆಚ್ಚಿನ ಭಾಗಗಳಿಗೆ ವಾಯು ಮಾರ್ಗ, ಜಲಮಾರ್ಗ, ನೆಲಮಾರ್ಗಗಳ ಸಂಪರ್ಕ ಹೊಂದಿದೆ. ಇದೀಗ ಮರುಭೂಮಿಯ ಮೇಲೆ ಹಳಿಗಳ ಮೂಲಕ ರೈಲು ಸಂಚಾರಕ್ಕೆ ಸರ್ವ ಸನ್ನದ್ಧಾಗಿದೆ. ಯುಎಇ ವಿಷನ್ 2021, ಅಬುಧಾಬಿ ವಿಷನ್ 2030ರ ಪರಿಕಲ್ಪನೆಯನ್ನು ಸಾಕಾರ ಗೊಳಿಸುವ ಸಾಲಿನಲ್ಲಿ ರೈಲ್ವೇ ಪ್ರಯಾಣದ ಯೋಜನೆಯನ್ನು 2009ರಲ್ಲಿ ಪ್ರಾರಂಭಿಸಲಾಯಿತು. ಎಲ್ಲ ಪೂರ್ವಭಾವಿ ತಯಾರಿಯನ್ನು ಮಾಡಿಕೊಂಡು 2016ರಲ್ಲಿ ರೈಲ್ವೇ ಯೋಜನೆಗೆ ಚಾಲನೆಯನ್ನು ನೀಡಲಾಯಿತು.
ಅರಬ್ ಸಂಯುಕ್ತ ಸಂಸ್ಥಾನದ ಏಳು ಏಮಿರೇಟ್ಸ್‌ಗಳನ್ನು ಸಂಪರ್ಕಿಸುವ ರೈಲ್ವೇ ಯಾನವು ಪೂರ್ಣಗೊಂಡಾಗ 1,200 ಕಿಲೋ ಮೀಟರ್ ಉದ್ದವಾಗಿರುತ್ತದೆ. ಸೌದಿ ಅರೇಬಿಯಾಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಸಹ ಇದರೊಂದಿಗೆ ಸೇರಿಸಲ್ಪಟ್ಟಿದೆ. ಪ್ರಸ್ತುತ ಡಿಸೆಲ್ ಎಂಜಿನ್ ಮೂಲಕ ಸಾಗುವ ರೈಲು ಮುಂಬರುವ ವರ್ಷಗಳಲ್ಲಿ ಸಂಪೂರ್ಣ ವಿದ್ಯುದ್ದೀಕರಣ ಮಾಡುವ ಯೋಜನೆಗಳನ್ನು ಸಹ ರೂಪಿಸಲಾಗಿದೆ.
ವಿವಿಧ ನಗರಗಳ ಸಂಪರ್ಕ
ಅಬುಧಾಬಿಯ ಕೈಗಾರಿಕ ನಗರ ಮುಸಾಫಾದಲ್ಲಿ ಕೇಂದ್ರ ರೈಲ್ವೇ ಟರ್ಮಿನಲ್ ಹೊಂದಿದ್ದು, ಖಲಿಫಾ ಪೋರ್ಟ್, ದುಬೈಯ ಕೈಗಾರಿಕ ನಗರ ಜೆಬೆಲ್ ಆಲಿ ಪೋರ್ಟ್, ದುಬೈಯ ಕೈಗಾರಿಕ ನಗರ, ಶಾರ್ಜಾ, ಫ್ಯೂಜೇರಾ ಬಂದರು, ರಾಸ್ ಅಲ್ ಖೈಮಾಕ್ಕೆ ಸಂಪರ್ಕ ಸಾಧಿಸಲಾಗುತ್ತದೆ.
35 ಸೇತುವೆ, 15 ಸುರಂಗ
ರೈಲ್ವೇ ಮಾರ್ಗದಲ್ಲಿ ಮೂವತ್ತೈದು ಸೇತುವೆಗಳು, 32 ಅಂಡರ್ ಪಾಸ್‌ಗಳು ಮತ್ತು ಕಡಿದಾದ ಬೆಟ್ಟಗಳ ಸಾಲಿನಲ್ಲಿ 15 ಸುರಂಗಗಳನ್ನು ದಾಟಿ ಹೋಗುತ್ತದೆ. ಎತಿಹಾದ್ ರೈಲು ಕಂಟೈನರ್ ಸಂಗ್ರಹಣೆ ಮತ್ತು ವಿಲೇವಾರಿಯನ್ನು ನಿರ್ವಹಿಸುತ್ತದೆ. ಗಲ್ಫ್ ಪ್ರದೇಶದ ಹೆಚ್ಚಿನ ತಾಪಮಾನ ಮತ್ತು ತೇವಾಂಶವನ್ನು ತಡೆದುಕೊಳ್ಳಲು ವಿಶೇಷವಾಗಿ ಎತಿಹಾದ್ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಎಂಜಿನ್‌ಗಳು ಅತ್ಯಾಧುನಿಕ ಏರ್ ಫಿಲ್ಟರೇಶನ್ ಸಿಸ್ಟಂನೊಂದಿಗೆ ಸುಸಜ್ಜಿತವಾಗಿದ್ದು ಗಾಳಿಯ ಸೇವನೆ ಮತ್ತು ಮರಳುಗಳ ಮಿಶ್ರಣವನ್ನು ಫಿಲ್ಟರ್ ಮಾಡುತ್ತದೆ.
ಪ್ರಾಣಿಗಳಿಗೆ ಸೌಲಭ್ಯ
2030ರ ವೇಳೆಗೆ 60 ಮಿಲಿಯನ್ ಟನ್ ಸರಕು ಸಾಗಾಟ, 36.5 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ರೈಲು ಮಾರ್ಗದಲ್ಲಿ ಒಂಟೆಗಳು ಅಡ್ಡಾಡಲು 10 ಸುರಂಗಳು, ಪ್ರಾಣಿಗಳು ಸಂಚರಿಸಲು 78 ಅಂಡರ್‌ಪಾಸ್‌ಗಳನ್ನು ನಿರ್ಮಾಣ ಮಾಡಲಾಗಿದೆ.
ಮುಸಾಫಾದಿಂದ ರಾಸ್ ಅಲ್ ಖೈಮಾ ತಲುಪಲು 279 ಕಿಲೋಮೀಟರ್ ಉದ್ದದ ಟ್ರ್ಯಾಕ್ ಹೊಂದಿದೆ. ಬಹಳಷ್ಟು ಮುಕ್ತಾಯ ಹಂತಕ್ಕೆ ತಲುಪಿರುವ ಎತಿಹಾದ್ ರೈಲು ನೆಟ್‌ವರ್ಕ್ ಸ್ಟ್ಯಾಂಡರ್ಡ್ ಗೇಜನ್ನು ಬಳಸಿ ಡಬ್ಬಲ್ ಟ್ರ್ಯಾಕ್ ಹೊಂದಿದ್ದು, ಯುರೋಪಿಯನ್ ಸಿಗ್ನಲ್ ಸಿಸ್ಟಂನ್ನು ಬಳಸುತ್ತದೆ. 32.5 ಟನ್ ಯಾಕ್ಸಲ್ ಲೋಡ್ ಭಾರದೊಂದಿಗೆ ರೈಲು ಚಲಿಸುತ್ತದೆ.
ಗಂಟೆಗೆ 120 ಕಿಲೋ ಮೀಟರ್ ಸಂಚಾರದಲ್ಲಿ ಸರಕು ಸಾಗಣೆ ರೈಲು ಸಂಚರಿಸªರೆ, ಪ್ರಯಾಣಿಕರ ರೈಲು 200 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ಎತಿಹಾದ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ವಿಶಾಲ ಬೇರೆಬೇರೆ ಬಣ್ಣಗಳ ಮರುಭೂಮಿ, ಹಸುರು ಕಾನನ, ಗಗನಚುಂಬಿ ಕಟ್ಟಡಗಳು, ಮಾನವ ನಿರ್ಮಿತ ಕಾಲುವೆಗಳು, ಅಂಡರ್ ಪಾಸ್ ಗಳು, ಶಿಲಾಮಯ ಪರ್ವತಗಳ ಸುರಂಗಗಳಲ್ಲಿ ಸಾಗುವ ಅವಿಸ್ಮರಣೀಯ ಅನುಭವಗಳನ್ನು ನೀಡಲಿದೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೂತನ ರೈಲು ಪ್ರಯಾಣದ ಅನುಭವ ಪಡೆಯಲು ಕಾತರದಿಂದ ಇರುವ ಜನತೆಗೆ, ಎತಿಹಾದ್ ರೈಲ್ವೇ ಆಡಳಿತ ವ್ಯವಸ್ಥೆಯು ಅಧಿಕೃತವಾಗಿ ಚಲಿಸುವ ದಿನಾಂಕವನ್ನು ಪ್ರಕಟಿಸುವ ದಿನಕ್ಕಾಗಿ ಕಾಯುತ್ತಿದ್ದಾರೆ.
*ಬಿ. ಕೆ. ಗಣೇಶ್ ರೈ, ದುಬೈ