Advertisement

Desi Swara:Yorkshire Day‌’ನಲ್ಲಿ ಸಂಸ್ಕೃತಿಗಳ ಸಮಾಗಮ-ಏನಿದು ಯಾರ್ಕ್‌ಶೈರ್‌ನ ವೈಶಿಷ್ಟ್ಯ?

11:38 AM Aug 10, 2024 | Team Udayavani |

ಇಲ್ಲಿಯ ಜನರು “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ನಾ ಇವ ನಮ್ಮವ ಇವ ನಮ್ಮವ’ ಎಂಬ ಬಸವ ತತ್ತ್ವವನ್ನು ಮರೆತರೇನೋ ಅನ್ನುವಂತೆ ನೂರಾರು ಅಸಹನೆಯ, ದುಷ್ಟ ಶಕ್ತಿಯಿಂದ ಪ್ರೇರಿತರಾದ ಜನರ ನಡವಳಿಕೆಯಿಂದ ಕಳೆದ ವಾರದಲ್ಲಿ ದೇಶದಲ್ಲಿ ಅಲ್ಲಲ್ಲಿ ಹತೋಟಿಗೆ ಮೀರಿದ ಗಲಭೆ ಅಶಾಂತಿಗಳಿಂದ ಯುಕೆ ತತ್ತರಿಸುತ್ತಿದೆ. ಅದರ ಬಗ್ಗೆ ಅನಂತರ ಚರ್ಚಿಸುವಾ. ಆದರೂ ಪೂರ್ವ ನಿಗದಿತ ಕ್ಯಾಲಂಡರ್‌ ತಾರೀಕಿನ ಪ್ರಕಾರ ಕಳೆದ ವಾರಾಂತ್ಯದ ಎರಡು ದಿನಗಳಲ್ಲಿ ಕಾಲ್ಡರ್‌ಡೇಲ್‌ನಲ್ಲಿಯ ಹ್ಯಾಲಿಫಾಕ್ಸ್‌ ಪಟ್ಟಣದ ಪೀಪಲ್ಸ್‌ ಪಾರ್ಕ್‌ನಲ್ಲಿ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಅದರ ಸುಳಿವೂ ಇರಲಿಲ್ಲ. ಮೊದಲಿಂದಲೇ ವರ್ಷಪೂರ್ತಿ ಸಿದ್ಧತೆ ಮಾಡಿಕೊಂಡಿದ್ದರಿಂದ ಇಲ್ಲಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಪ್ರತೀ ವರ್ಷದಂತೆ ಯಥಾ ಪ್ರಕಾರ ಭಾಗವಹಿಸಿ ಅದನ್ನು ಸಫಲಗೊಳಿಸಿದವು. ಅದರಲ್ಲಿ ಅನೇಕ ಭಾರತದ ಮೂಲದ ಮತ್ತು ಉಳಿದ ಸಮುದಾಯಗಳು ಇದ್ದವು. ಅದರೊಳಗೆ ಅನ್ನಪೂರ್ಣಾ ಇಂಡಿಯನ್‌ ಡಾನ್ಸ್‌ ವತಿಯಿಂದ ಕರ್ನಾಟಕದ ಸಂಗೀತ ಮತ್ತು ನೃತ್ಯದೊಂದಿಗೆ ಅಚ್ಚುಕಟ್ಟಾದ ಡಾನ್ಸ್‌ ಮತ್ತು ಯಕ್ಷಗಾನದ ಪ್ರದರ್ಶನವಾದದ್ದು ಮರವಂತೆ ಕುಟುಂಬದ ಸಹಕಾರದಿಂದ.

Advertisement

ಏನಿದು ಯಾರ್ಕ್‌ಶೈರ್‌ನ ವೈಶಿಷ್ಟ್ಯ?
ಭಾರತೀಯರಲ್ಲಿ, ಅದರಲ್ಲೂ ಕ್ರಿಕೆಟ್‌ ಹುಚ್ಚಿನವರು ಯಾರ್ಕ್‌ಶೈರ್‌ ಕೌಂಟಿಯ ಹೆಸರನ್ನು ಕೇಳಿರುತ್ತಾರೆ. ಲೀಡ್ಸ್‌ ಶಹರದ ಹೆಸರನ್ನು ಕೇಳಿರಲಿಕ್ಕಿಲ್ಲ, ಆದರೆ ಹೆಡಿಂಗ್ಲಿ ಎಂದ ಕೂಡಲೇ “ಕಿವಿ ನಿಮಿರುವುದು’! ಕ್ರಿಕೆಟ್‌ ಗ್ರೌಂಡ್‌ ಯಾರ್ಕ್‌ಶೈರ್‌ನ ಲೀಡ್ಸ್‌ನಲ್ಲಿದೆ. ಮೊದಲನಿಂದಲೂ ತಮ್ಮ ಶೈರಿನ ಭೌಗೋಳಿಕ ಪರಿಧಿಯ ಹೊರಗೆ ಹುಟ್ಟಿದ ಯಾರಿಗೂ ಯಾರ್ಕ್‌ಶೈರ್‌ ಕ್ರಿಕೆಟ್‌ ಕ್ಲಬ್‌ನಲ್ಲಿ ಆಡಲು ಅನಿಮತಿಯಿಲ್ಲ ಎನ್ನುವ ನಿಯಮವನ್ನು ಮುರಿದಿದ್ದು ನಮ್ಮ ನೆಚ್ಚಿನ ಸಚಿನ್‌ ತೆಂಡುಲ್ಕರ್‌ ಅದರ ಪ್ರಪ್ರಥಮ ವಿದೇಶಿ ಆಟಗಾರನಾಗಿ ಆರಿಸಲ್ಪಟ್ಟು ದಾಖಲೆ ಮಾಡಿದಾಗ! ಅದಾಗಿ ಸ್ವಲ್ಪ ವರ್ಷಗಳು ಸಂದರೂ ಕ್ರಿಕೆಟ್‌ ನಮ್ಮ ನರನಾಡಿಗಳಲ್ಲಿ ಮಿಡಿಯುವುದರಿಂದ ಈ ವಿಷಯ ಈಗಲೂ ಪ್ರಸ್ತುತವೇ. ಅದೂ ನಮ್ಮ ತಂಡ ಇತ್ತೀಚಿನ ಕಪ್‌ ಗೆದ್ದಮೇಲೆ!

ಬ್ರಿಟನ್‌ನ ಮಧ್ಯಭಾಗದಲ್ಲಿಯ ಎರಡು ಮುಖ್ಯ ಪ್ರಾಂತ(ಶೈರ್‌)ಗಳೆಂದರೆ ಪಶ್ಚಿಮ ಕರಾವಳಿಯ ವರೆಗೆ ವ್ಯಾಪಿಸಿರುವ ಮ್ಯಾಂಚೆಸ್ಟರ್‌ನಿಂದ ಹೆಸರಾದ ಲ್ಯಾಂಕಶೈರ್‌ ಎಂದಾದರೆ, ಮಧ್ಯಭಾಗದಿಂದ ಪೂರ್ವದ ಕರಾವಳಿಯ ತನಕ ಇರುವ ಪ್ರದೇಶವೇ ಯಾರ್ಕ್‌ ನಗರಕ್ಕೆ ಪ್ರಸಿದ್ಧವಾದ ಯಾರ್ಕ್‌ಶೈರ್‌. ಇದು ದೇಶದಲ್ಲಿಯೇ ಅತೀ ದೊಡ್ಡ ಪ್ರದೇಶ. ಹೆಚ್ಚು ಕಡಿಮೆ ಮೂರು ಮಿಲಿಯ ಎಕ್ರೆಗಳಷ್ಟು ದೊಡ್ಡದು. ಅದರ ಲಾಂಛನ ಬಿಳಿಯ ಗುಲಾಬಿಯಾದರೆ ಲ್ಯಾಂಕಶೈರ್‌ದು ಕೆಂಗುಲಾಬಿ. ಐತಿಹಾಸಿಕವಾಗಿ, ಪಲ್ಲವರು-ಚೋಳರಂತೆ ಈ ಎರಡು ರಾಜ್ಯಗಳು ಸದಾ ಕಾದಾಡುತ್ತಲೇ ಇದ್ದವು, ಹದಿನೈದನೆಯ ಶತಮಾನದಲ್ಲಿ ಮೂವತ್ತು ವರ್ಷಗಳ ಕಾಲ ಸಂಭವಿಸಿದ ಈ ಕಾಳಗವನ್ನೇ “ವಾರ್‌ ಆಫ್‌ ದ ರೋಸಸ್‌’ ಅಂತ ಕರೆಯುತ್ತಾರೆ ಇತಿಹಾಸಕಾರರು. ತಮ್ಮ ಹೆಮ್ಮೆಯ ಬಿಳಿ ರೋಸ್‌ ಶೈರನ್ನು “ಗಾಡ್ಸ್‌ ಓನ್‌ ಕಂಟ್ರಿ’ ಎಂದು ಕರೆದುಕೊಳ್ಳುತ್ತಾರೆ.

ಯಾರ್ಕ್‌ಶೈರ್‌ನವರು. ಅವರಿಗೆ ತಮ್ಮದೇ ಆದ ಒಂದು ಅಸ್ಮಿತೆಯಿದೆ ಎನ್ನಬಹುದು. ನಾರ್ಷ್‌ ಭಾಷೆಯ ಛಾಯೆ ಇರುವ ಅವರ ಮಾತು ಸಹ ವಿಭಿನ್ನವಾದುದು. ಅವರ ಉಚ್ಚಾರ ಸುಲಭದಲ್ಲಿ ತಿಳಿಯುವುದಿಲ್ಲ. ”Tha gets where water can” ಅಂದರೆ ನೀರು ನುಸುಳುವ ಜಾಗವೂ ನಿನಗೆ ಅಗಮ್ಯವಲ್ಲ; ‘Suppwithee’? ಅಂದರೆ ನಿನಗೇನಾಗಿದೆ ಅಂತ. ಬಿಂಕದ ಯಾರ್ಕ್‌ಶೈರಿನವರ ಬಗ್ಗೆ ಹೇಳುವ ಒಂದು ಚಾಟೊಕ್ತಿ ಇದೆ. You can tell a Yorkshireman; but you can’t tell him much. (ಯಾಕ್‌ಶೈರಿನವ ಹೀಗಿರುತ್ತಾನೆ ಅಂತ ಬಿಡಿಸಿ ಹೇಳಬಹುದು. ಆದರೆ ಅವನಿಗೆ ಮಾತ್ರ ಏನೂ ಹೇಳುವಂತಿಲ್ಲ!)

Advertisement

ಈ ಪ್ರದೇಶ ಹಿಂದಕ್ಕೆ ಉಣ್ಣೆಯ ವ್ಯಾಪಾರದಲ್ಲಿ ಮತ್ತು ಅನಂತರ ಔದ್ಯೋಗಿಕ ಕ್ರಾಂತಿಯ ಅನಂತರದ ದೊಡ್ಡ ಪ್ರಮಾಣದಲ್ಲಿ ಬೆಳೆದ ಕಾರ್ಖಾನೆಗಳಿಂದ ಸಂಪದ್ಭರಿತವಾಯಿತು. ಜತೆಗೆ ಮಿಲ್‌ಗ‌ಳು ಮತ್ತು ಗಣಿಗಳು ಬೆಳೆದು ಜನವಸತಿ ವೃದ್ಧಿಯಾಯಿತು. ಆ ಕಾಲದಲ್ಲೇ ಅವಿಭಾಜಿತ ಭಾರತದಿಂದ ಬಂದ ಕಾರ್ಮಿಕರ ಸಂಖ್ಯೆ ಹೆಚ್ಚಾಗಿ ಸಾಂಸ್ಕೃತಿಕ ಆಮದು, ಬೆರಕೆ, ಘರ್ಷಣೆಗಳ ಫಲವಾಗಿ ಆಗಾಗ ಅಶಾಂತಿಯುಂಟಾಗಿದ್ದು ಸಹಜವೇ. ವಲಸಿಗರ ಸಂಖ್ಯೆ ಬೆಳೆದಂತೆ ಈ ಸಾಂಸ್ಕೃತಿಕ ಸಮ್ಮೇಳಗಳಿಗೆ ಸರಕಾರಗಳು ಉತ್ತೇಜನ ಕೊಡುತ್ತಿವೆ.

50 ವರ್ಷಗಳ ಕೆಳಗೆ ಶೈರ್‌ಗಳ ಪುನರ್‌ ಸಂಘಟನೆಯಾದಾಗ ಯಾರ್ಕ್‌ಶೈರಿನಲ್ಲಿ ಹುಟ್ಟಿಕೊಂಡಿದ್ದು ಕಾಲ್ಡರ್‌ ನದಿಯ ಸುತ್ತಲಿನ ಪ್ರದೇಶವಾದ ಕಾಲ್ಡರ್‌ ಡೇಲ್‌ ಅಥವಾ ಕಾಲ್ಡರ್‌ ಕಣಿವೆ ಪ್ರದೇಶ. ಕಾಲ್ಡರ್‌ ಅಂದರೆ ರಭಸದಿಂದ ಹರಿಯುವ ನದಿ. ಅದರ ಮಧ್ಯದಲ್ಲಿಯೇ ಇದೆ ಹ್ಯಾಲಿಫಾಕ್ಸ್‌. ಅದರ ಮುನ್ಸಿಪಾಲಿಟಿಯ ಧ್ಯೇಯವಾಕ್ಯ: ಪರಿಶ್ರಮ, ಕಲೆ ಮತ್ತು ದೂರದೃಷ್ಟಿ. ಆ ನಿಟ್ಟಿನಲ್ಲೇ ಹುಟ್ಟಿದ್ದಿರಬೇಕು ಮೊನ್ನೆಯ ಕಾರ್ಯಕ್ರಮ ಸಹ.

ಯಾರ್ಕ್‌ಶೈರ್‌ ಡೇ
ಪ್ರತೀ ವರ್ಷ ಆ.1ರಂದು ತನ್ನ ಖಾಸಾ ದಿವಸ ಆಚರಿಸುವ ಕೌಂಟಿ ಯಾರ್ಕ್‌ಶೈರ್‌ ಒಂದೇ. ಈ ಸಲದ ಕಾರ್ಯಕ್ರಮ ಪೀಪಲ್ಸ್‌ ಪಾರ್ಕ್‌ ಎನ್ನುವ ವಿಶಾಲ ಮೈದಾನದಲ್ಲಿ ನಡೆಯಿತು. ಹಾಡು, ಸಂಗೀತ, ನೃತ್ಯ, ಬ್ಯಾಂಡ್‌, ವಸ್ತು ಪ್ರದರ್ಶನ, ಮಾರಾಟದ ತಿಂಡಿ-ಊಟದ ಮಳಿಗೆಗಳು, ಹುಲ್ಲುಗಾವಲಿನ ತುಂಬ ಕಿಕ್ಕಿರಿದ ಜನಸ್ತೋಮದಿಂದ ಮತ್ತು ಓಡಾಡಿ ಆಟ ಆಡುವ ಮಕ್ಕಳಿಂದ ಲವಲವಿಕೆಯಿಂದ ಕೂಡಿತ್ತು.

ರವಿವಾರ ಬೆಳಗ್ಗೆ ಊರಿನ ಇನ್ನೊಂದು ಕಡೆ “ಸಂಡೇ ವರ್ಶಿಪ್‌’ ಎನ್ನುವ ಚರ್ಚ್‌ನ ಪ್ರಾರ್ಥನೆಯ ಅನಂತರ ಹ್ಯಾಲಿಫಾಕ್ಸ್‌ ಮಿನ್‌ಸ್ಟರ್‌ ಎನ್ನುವ ಭವ್ಯವಾದ ಚರ್ಚ್‌ನಲ್ಲಿ ಮುಕ್ಕಾಲು ಗಂಟೆಯ ಅವಧಿಯಲ್ಲಿ ಅದೇ ಊರಿನಲ್ಲಿ ಮೂರು ದಶಕದ ಹಿಂದೆಯೇ ತಳ ಊರಿದ ಅನ್ನಪೂರ್ಣ ಡ್ಯಾನ್ಸ್‌ ತಂಡದ ವತಿಯಿಂದ ಶಾಂತಾ ರಾವ್‌ ಅವರ ನೇತೃತ್ವದಲ್ಲಿ ನೃತ್ಯಗಳನ್ನು ಪ್ರದರ್ಶಿಸಿದರು.

ಮೊದಲು ಸುನಿಧಿ ಮರವಂತೆಯವರಿಂದ ಅಸ್ಖಲಿತ ಭರತನಾಟ್ಯದಲ್ಲಿ ಪುಷ್ಪಾಂಜಲಿ, ಅನಂತರ ಆಕ್ಷಿತಾ ತೋಗಿಲ್ಲ ಮತ್ತು ರೇಶ್ಮಾ ನಾಯರ್‌, ಸಿದ್ದೇಶ್‌ ಅವರಿಂದ ಸಂಗೀತ ಜತೆಗೂಡಿ ಮನರಂಜನೆ. ಕೊನೆಯಲ್ಲಿ ರವೀಂದ್ರನಾಥ ಟಾಗೋರರ ಬಂಗಾಲಿ “ಗೀತಾಬಿತೇನ’ದಿಂದ ಆಯ್ದ “ಅಂತರ ಮಮೊ ಬಿಕಶಿತ ಕರೋ’ ಎನ್ನುವ ಸುಂದರ ಕವಿತೆಯೊಂದರ ಕವಿತಾ ವಾಚನ, ನನ್ನಿಂದ. ವಿಲಿಯಂ ರೆಡಿಚೆ ಅವರ ಅನುವಾದದ ಸಂದೇಶ ಹೀಗಿದೆ; “ಹೇ ಅಂತರ್ಯಾಮಿ, ನನ್ನ ಆಂತರ್ಯವನ್ನರಳಿಸು, ಇನ್ನೂ ಆಳಕ್ಕಿಳಿದು ನನ್ನೆದೆಯ ಕಮಲವನ್ನರಿಳಿಸು.’ ಕಾಕತಾಳಿಯದಂತೆ ಆ ದಿನ ನಾನು ಈ ದೇಶದಲ್ಲಿ ಕಾಲಿಟ್ಟು ಸರಿಯಾಗಿ 50 ವರ್ಷಗಳಾಗಿದ್ದವು; ಅದು ಕಾಲ್ಡರ್‌ಡೇಲ್ಸ್ ಹುಟ್ಟು ವರ್ಷ ಸಹ. ವರ್ಣದ್ವೇಷ ಮತ್ತು ಅಸಹನತೆಯ ಅನುಭವ ನನಗೇನೂ ಹೊಸತಲ್ಲ. ಆದರೆ ಈಗಿನ ಈ ಪ್ರಯತ್ನ ಶ್ಲಾಘನೀಯವೇ ಸರಿ.‌

ಚೌಕಿಮನೆಯಿರದಿದ್ದರೇನು, ಬ್ಯಾಂಡ್‌ ಸ್ಟಾಂಡ್‌ ಉಂಟು ಇಲ್ಲಿ!
ಮಧ್ಯಾಹ್ನದ “ಸಾಂಸ್ಕೃತಿಕ’ ಕಾರ್ಯಕ್ರಮದಲ್ಲಿ ಯಕ್ಷಗಾನ ಪಟು ಯೋಗೀಂದ್ರ ಮರವಂತೆಯವರಿಂದ ವನವಿಹಾರದ ಒಂದು ಚಿಕ್ಕ ಪ್ರಸ್ತುತಿ. ಮರವಂತೆ ಊರಿನವರಾದ ಇವರು ಯಕ್ಷಗಾನ ಕಲೆಯನ್ನು ಚಿಕ್ಕಂದಿನಿಂದಲೇ ಕರಗತ ಮಾಡಿಕೊಂಡದ್ದಲ್ಲದೇ ಈ ದೇಶದಲ್ಲಿ ಮತ್ತು ಊರಿಗೆ ಹೋದಾಗ ವೃತ್ತಿಪರ ಯುಕ್ಷಗಾನ ಕಲಾವಿದರೊಂದಿಗೆ ಸಹ ಭಾಗವಹಿಸಿದ ಹೆಗ್ಗಳಿಕೆ ಅವರದು. ಅವರೊಬ್ಬ ಬಹುಮಾನಿತ ಬರಹಗಾರರು ಸಹ. ಅಂದಿನ ಪ್ರಸ್ತುತಿ “ಕಾರ್ತವೀರ್ಯನ ಜಲಕ್ರೀಡೆ’ಯಿಂದ ಆಯ್ದುದು. “ನೀಲಗಗನದಲ್ಲಿ ಆಗಲೇ ಮೇಘಗಳು, ಮೋಡಗಳನ್ನು ಕಂಡಾಗ ನವಿಲು ಕುಣಿಯುತಿದೆ ನೋಡಾ’ ಅನ್ನುವ ಸಾಲುಗಳ ಹಿನ್ನೆಲೆಯಲ್ಲಿ ಅವರ ಅಮೋಘ ಕಲಾಪ್ರದರ್ಶನವನ್ನು ನೋಡಿ ರಸಿಕರು ಕರತಾಡನದಿಂದ ಮೆಚ್ಚಿದರು.

ಇಳಿಜಾರಿನ ಹುಲ್ಲು ಹಾಸಿನ ಭೂಮಿಯ ಮೇಲೆ ಬರಿಗಾಲಿನಲ್ಲಿ ಕುಣಿದು ಅವರು ಮತ್ತು ಅನಂತರ ಬಂದ ರೇಶ್ಮಾ ಮತ್ತು ಅಕ್ಷಿತಾ ಸಹ ತಮ್ಮ ಅನುಭವದ ಬೆನ್ನ ಮೇಲೆ ಸಂಭಾಳಿಸಬೇಕಾಯಿತು. ಅವರ ಹಿನ್ನೆಲೆಯಲ್ಲಿ ಬ್ಯಾಂಡ್‌ಸ್ಟಾಂಡ್‌. ಅದರಡಿಯಲ್ಲೇ ಕುಣಿದಿದ್ದರೆ ಅವರ ಪಾದಗಳೂ ಸಂತೋಷಪಡುತ್ತಿದ್ದವೇನೋ! ಯೋಗೀಂದ್ರ ಅವರ ವರ್ಣರಂಜಿತ ಯಕ್ಷಗಾನದ ಕಿರೀಟ ಮತ್ತು ಪೋಷಾಕು ಎಲ್ಲರ ಕಣ್ತುಂಬಿಸಿದ್ದು ಮಾತ್ರ ಸುಳ್ಳಲ್ಲ.

ವಚನಗಳಲ್ಲಿ ಏನಿಲ್ಲ?
ಉತ್ತರ ಇಂಗ್ಲೆಂಡಿನಲ್ಲಿ ಎರಡು ವಾರಗಳ ಹಿಂದೆ ಹಾಡೇ ಹಗಲು ಡಾನ್ಸ್‌ ಕ್ಲಾಸಿನಲ್ಲಿ ಭಾಗವಹಿಸುತ್ತಿದ್ದ ಮೂರು ಮಕ್ಕಳ ಭೀಕರ ಕೊಲೆಯಾಯಿತು. ಆ ದಾರುಣ ಹತ್ಯಾಕಾಂಡ ಎಲ್ಲರನ್ನೂ ನಡುಗಿಸಿತು. ಅದರ ಆರೋಪಿತನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ತಪ್ಪು ಮಾಹಿತಿ ಕಾಳ್ಗಿಚ್ಚಿನಂತೆ ಪಸರಿಸಿ ಕಳೆದ ವಾರದಿಂದ ಯುಕೆಯ ಅನೇಕ ನಗರಗಳಲ್ಲಿ ಗಲಭೆಗಳು ಶುರುವಾಗಿವೆ. ಎಲ್ಲೆಡೆ ಭಯಾನಕ ವಾತಾವರಣ ಹಬ್ಬಿದೆ. ಆಶ್ರಯಾರ್ಥಿ ವಲಸಿಗರ (ಅಸೈಲಂ ಸೀಕರ್ಸ್‌) ಬಗ್ಗೆ ಜನರಲ್ಲಿ ಹುದುಗಿದ್ದ ದ್ವೇಷ ಮತ್ತು ಅಸಹನೆಯನ್ನು ಸೈಪ್ರಸ್ ನಲ್ಲಿ ತಲೆಮರೆಸಿಕೊಂಡವನಾದ ಒಬ್ಬ ದುಷ್ಟ ಬಲಪಂಥೀಯ ಮತ್ತು ಇತರ ಫ್ಯಾಸಿಸ್ಟ್‌ ಶಕ್ತಿಗಳು ಭುಗಿಲೆದಿದ್ದ ದ್ವೇಷದ ದಳ್ಳುರಿಗೆ ಗಾಳಿ ಹಾಕುತ್ತಿರುವುದು ಶೋಚನೀಯ. ಶಾಂತಿಗಾಗಿ ನಾವೆಲ್ಲ ಕಾಯುತ್ತಿರುವಾಗ ಈ ಲೇಖನದ ಆದಿಯಲ್ಲಿ ಉಲ್ಲೇಖಿಸಿದ ಬಸವಣ್ಣನವರ ವಚನವನ್ನು ನೆನೆಯುತ್ತೇನೆ. ಈ ಪರಕೀಯ ದ್ವೇಷ ಶಮನವಾಗುವುದಕ್ಕೆ ಕಾಯುತ್ತೇವೆ. ಇನ್ನೊಂದು ಆಕಸ್ಮಿಕವೆಂದರೆ ಇತ್ತೀಚಿನ ಬ್ರಿಟನ್‌ನ ರಾಷ್ಟ್ರಕವಿ (ಪೋಯೆಟ್‌ ಲಾರೇಟ್‌) ಟೆಡ್‌ ಹ್ಯೂಸ್‌ ಅವರು ಹುಟ್ಟಿದ್ದು ಈ ಮೈದಾನದ ಅನತಿ ದೂರದ ಮಿದಮ್‌ ರಾಯ್ಡ್ ಎನ್ನುವ ಹಳ್ಳಿಯಲ್ಲಿ! ಆತ ಕನ್ನಡ ವಚನಗಳಿಂದ (ಎ.ಕೆ ರಾಮನುಜಂ ಅವರ ಅನುವಾದ: Speaking of Siva) ಬಹಳ ಪ್ರಭಾವಿತನಾಗಿದ್ದನಂತೆ!

ಈ ಸಮಯದಲ್ಲಿ ಕಂಚಿಯ ಕಾಮಕೋಟಿ ಪೀಠದ ಜಗದ್ಗುರು ಚಂದ್ರಶೇಖರೇಂದ್ರ ಸರಸ್ವತಿಯವರ “ಮೈತ್ರೀಮ್‌ ಭಜ’ದಲ್ಲಿ ಬರುವ “ದಮ್ಯತಾಂ, ದತ್ತ, ದಯಧ್ವಂ’ ಉಪನಿಷದ್‌ ವಾಕ್ಯವನ್ನು ನೆನೆಪಿಸಬೇಕಾಗಿದೆ. ಅದೇ ಅನ್ನಪೂರ್ಣಾ ಕಂಪೆನಿಯವರ ಧ್ಯೇಯವಾಕ್ಯವಾದ ಸಹ. “ಸಹನೆ, ಕರುಣೆ, ದತ್ತ ಇವುಗಳು ಈಗ ಬೇಕಾಗಿವೆ.’

*ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next