ಗುಳೇದಗುಡ್ಡ: ಲಾಕ್‌ಡೌನ್‌ನಿಂದ ಮದ್ಯದಂಗಡಿಗಳು ಬಂದ್ ಆಗಿದ್ದರಿಂದ ಕಳ್ಳಭಟ್ಟಿಯ ದಂಧೆ ಜೋರಾಗಿ ನಡೆದಿದ್ದು, ಪೊಲೀಸ್ ಇಲಾಖೆ ದಾಳಿ ನಡೆಸುವುದರ ಮೂಲಕ ಕಳ್ಳಭಟ್ಟಿ ದಂಧೆಕೋರರ ಹೆಡೆ ಮುರಿಯುತ್ತಿದೆ.
ಕೋವಿಡ್ 19 ದಿಂದ ಲಾಕ್‌ಡೌನ್ ಆಗಿದ್ದರಿಂದ ಅಬಕಾರಿ ಪರವಾನಗಿ ಹೊಂದಿದ ಮದ್ಯ ವ್ಯಾಪಾರಿಗಳು ಮಾರಾಟ ಸ್ಥಗಿತಗೊಳಿಸಿ ಸುಮಾರು ತಿಂಗಳು ಕಳೆದಿದೆ. ಇದರಿಂದ ದಿಕ್ಕೇ ತೋಚದಂತಾದ ಪರಿಣಾಮ ಕೆಲ ಮದ್ಯ ವ್ಯಸನಿಗಳು ಅನಿವಾರ್ಯವಾಗಿ ಕಳ್ಳಭಟ್ಟಿಗೆ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ.
ಕೆಲ ಹಳ್ಳಿಗಳಲ್ಲೇ ಹೆಚ್ಚು: ಗುಳೇದಗುಡ್ಡ ಭಾಗದ ಕೆಲ ಗ್ರಾಮಗಳಲ್ಲಿ ಕಳ್ಳಭಟ್ಟಿಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಕಳ್ಳಭಟ್ಟಿ ತಯಾರಿಕೆಗೆ ಹಲವರ ವಿರೋಧವಿದ್ದರೂ ಕೆಲವರು ಗುಟ್ಟಾಗಿ ತಯಾರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಳ್ಳಭಟ್ಟಿ ತಯಾರಿಕೆ, ಮಾರಾಟ ಹಾಗೂ ಸಾಗಾಟಕ್ಕೆ ಪ್ರತ್ಯೇಕ ಸಮಯವನ್ನೆ ಮೀಸಲಿಟ್ಟಿರುವ ಈ ದಂಧೆಕೋರರು ಪೊಲೀಸರು ಹಾಗೂ ಅಬಕಾರಿ ಇಲಾಖೆ ಕಣ್ತಪ್ಪಿಸಿ ಮಧ್ಯರಾತ್ರಿ, ಇಲ್ಲವೇ ಬೆಳಗಿನ ಜಾವ ಈ ದಂಧೆ ನಡೆಸುತ್ತಿದ್ದಾರೆ.
ಬೆಳ್ಳಂಬೆಳಿಗ್ಗೆ ಓಟ: ಲಾಕ್‌ಡೌನ್ ಆರಂಭದ ದಿನಗಳಲ್ಲಿ ಕದ್ದು ಮುಚ್ಚಿ ಸಂಗ್ರಹಿಸಿಡಲಾದ ಮದ್ಯವನ್ನು ಹೆಚ್ಚಿನ ಬೆಲೆಗೆ ಪಡೆದಿದ್ದ ಕೆಲವರು ಇನ್ನು ಮದ್ಯ ಸಿಗಲ್ಲ ಎಂಬುದು ಖಚಿತಗೊಂಡಾಗ ಹತ್ತಾರು ಕಿ.ಮೀ. ತೆರಳಿ ಕಳ್ಳಭಟ್ಟಿ ದಂಧೆ ನಡೆಯುವ ಸ್ಥಳಗಳಿಗೆ ತೆರಳಿ ಅಲ್ಲಿಯೇ ಕುಡಿದು ಬರುತ್ತಿದ್ದಾರೆ. ಕೆಲವರಂತೂ ಬೆಳ್ಳಬೆಳಿಗ್ಗೆ ಕಳ್ಳಭಟ್ಟಿ ತಯಾರಕರನ್ನು ಸಂಪರ್ಕಿಸಿ ಖರೀದಿಸುತ್ತಿದ್ದಾರೆ. ಕೇವಲ 40-50 ರೂ.ಗೆ ಸಿಗುತ್ತಿದ್ದ ಕಳ್ಳಭಟ್ಟಿ ಈಗ ಲೀಟರ್‌ಗೆ 150-200ರೂ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲ ಏಜೆಂಟರು ಅಲ್ಲಲ್ಲಿ ಕದ್ದುಮುಚ್ಚಿ ಕಳ್ಳಭಟ್ಟಿ ಖರೀದಿಸಿ ಮಾರುತ್ತಿದ್ದಾರೆ ಎನ್ನಲಾಗಿದೆ.
ಕಳ್ಳಭಟ್ಟಿ ಬೆನ್ನಟ್ಟಿದ ಪೊಲೀಸರು: ತಾಲೂಕಿನ ಕೆಲ ಹಳ್ಳಿಗಳಲ್ಲಿರುವ ಮನೆ ಹಾಗೂ ಗುಡ್ಡಗಳಲ್ಲಿ ಕಳ್ಳಭಟ್ಟಿ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗುಳೇದಗುಡ್ಡ ಠಾಣೆ ಪೊಲೀಸರು ಕಳ್ಳಭಟ್ಟಿ ತಯಾರಿಸುವವರ ಮನೆ ಸೇರಿದಂತೆ ಇನ್ನಿತರೆ ಪ್ರದೇಶಗಳ ಮೇಲೆ ದಾಳಿ ಮಾಡಿ, ಕಳ್ಳಭಟ್ಟಿಯ ಕಚ್ಚಾಮಾಲು ಸೇರಿದಂತೆ ಬೆಲ್ಲದ ಕೊಳೆಯನ್ನು ನಾಶ ಪಡಿಸುತ್ತಿದ್ದಾರೆ. ಕಳೆದ 4 ದಿನಗಳಲ್ಲಿ ಹಾನಾಪುರ ತಾಂಡಾದಲ್ಲಿ 1.5 ಲಕ್ಷ, ಹುಲ್ಲಿಕೇರಿ ತಾಂಡಾದಲ್ಲಿ 75 ಸಾವಿರ ಮೌಲ್ಯದ ಕಳ್ಳಭಟ್ಟಿ ನಾಶಪಡಿಸಿದ್ದಲ್ಲದೇ ತಯಾರಿಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಅಬಕಾರಿ ಇಲಾಖೆ ಮೌನ: ಕಳಭಟ್ಟಿ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಬಕಾರಿ ಇಲಾಖೆ ಮಾತ್ರ ನೆಪ ಮಾತ್ರಕ್ಕೆ ದಾಳಿ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಲಾಕ್‌ಡೌನ್‌ನಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಮದ್ಯವ್ಯಸನಿಗಳು ಕಳ್ಳಭಟ್ಟಿಗೆ ಮೊರೆ ಹೋಗಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಬಗ್ಗೆ ದೂರುಗಳು ಬರುತ್ತಿದ್ದು, ಅದಕ್ಕಾಗಿ ದಾಳಿ ಮಾಡುತ್ತಿದ್ದೇವೆ. ಸದ್ಯ 2 ಕಡೆ ದಾಳಿ ಮಾಡಿದ್ದೇವೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ಕಳ್ಳಭಟ್ಟಿ ತಯಾರಿಕೆಗೆ ಕಡಿವಾಣ ಹಾಕಲಾಗುವುದು.
-ಡಾ|ಲಕ್ಷ್ಮೀಕಾಂತ ಬಾನಿಕೋಲ, ಪಿಎಸ್‌ಐ, ಗುಳೇದಗುಡ್ಡ ಪೊಲೀಸ್ ಠಾಣೆ
–ಮಲ್ಲಿಕಾರ್ಜುನ ಕಲಕೇರಿ