Advertisement

ಪದವೀಧರ ದಂಪತಿಯಿಂದ ದೇಶಿ ಹಸು ಸಾಕಾಣಿಕೆ

02:53 PM Feb 16, 2021 | Team Udayavani |

ಬಂಗಾರಪೇಟೆ: ಕೋಲಾರ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚಾಗಿದ್ದರೂ ಎದೆಗುಂದದ ರೈತರು ಹೈನೋದ್ಯಮ ನಂಬಿ ಜೀವನ ನಡೆಸುತ್ತಿದ್ದು, ಎಲ್ಲಿ ನೋಡಿದರೂ ಸೀಮೆಹಸುಗಳೇ ಹೆಚ್ಚಾಗಿರುವ ಬೆನ್ನಲ್ಲೇ,ಪದವೀ ಧರರಾ ಗಿರುವ ಬಡಕುಟುಂಬವೊಂದು ದೇಶಿಯ ತಳಿಯಾ ಗಿರುವ ಪಂಜಾಬ್‌ ಮೂಲದ ಸಾಹೀವಾಲ್‌ ದೇಶಿ ತಳಿಯ ಹಸುಗಳನ್ನು ಸಾಕಾಣಿಕೆ ಮಾಡಿ ರೋಗಮುಕ್ತ ಹಾಲು ಉತ್ಪಾದನೆಗೆ ಶ್ರಮಿಸುತ್ತಿದ್ದಾರೆ.

Advertisement

ಅಪರೂಪದ ತಳಿ: ತಾಲೂಕಿನ ಮಾವಹಳ್ಳಿ ಗ್ರಾಪಂ ವ್ಯಾಪ್ತಿ ಮಂಚಹಳ್ಳಿ ಗ್ರಾಮದ ಪದವಿ ಮುಗಿಸಿರುವ ಮಂಜುಳಾ ಮತ್ತು ಎಂ.ಆರ್‌.ಶ್ರೀರಾಮ್‌ ಕುಟುಂಬವು ಐದು ಲಕ್ಷ ಬಂಡವಾಳ ಹಾಕಿ ಪಂಜಾಬ್‌ನಿಂದ ತರಿಸಿ ಈ ನಾಟಿ ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ತಳಿಯ ದೇಶಿ ಹಸುಗಳು ತೀರಾ ಅಪರೂಪವಾಗಿದ್ದು, ಮಾಲೂರು ತಾಲೂಕಿನಲ್ಲಿ ಗೋ ಸೇವಾಶ್ರಮದಲ್ಲಿ ಹಾಲು ಉತ್ಪಾದನೆ ಇಲ್ಲದೇ ಕೇವಲ ಸಾಕಾಣಿಕೆ ಮಾಡುವುದು ಬಿಟ್ಟರೆ ಉಳಿದಂತೆ ಎಲ್ಲೂ ಸಾಕಾಣಿಕೆ ಇಲ್ಲ.

ಕೆಲಸ ಕಿತ್ತುಕೊಂಡ ಕೋವಿಡ್: ಮಂಜುಳಾ ಹಾಗೂ ಎಂ.ಆರ್‌.ಶ್ರೀರಾಮ್‌ ದಂಪತಿ ಪದವೀಧರರಾಗಿದ್ದು, ಕೋವಿಡ್ ಲಾಕ್‌ಡೌನ್‌ ಆಗುವ ಮುಂಚೆ ಮಂಜುಳಾ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಈಕೆಯ ಪತಿ ಎಂ.ಆರ್‌.ಶ್ರೀ ರಾಮ್‌ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಲಾಕ್‌ಡೌನ್‌ ನಂತರ ಇವರಿಬ್ಬರಿಗೂ ಕೆಲಸವಿಲ್ಲದೇ ಮನೆಯಲ್ಲಿ ಉಳಿದಿದ್ದರು. ಅನಂತರ ಗ್ರಾಮೀಣ ಪ್ರದೇಶದಲ್ಲಿ ನಾಟಿ ತಳಿ ಹಸುಗಳು ಕಣ್ಮರೆಯಾಗುತ್ತಿದ್ದು, ನಾವು ಏಕೆ ಸಾಕಾಣಿಕೆ ಮಾಡಬಾರದು ಎಂದು ಚಿಂತನೆ ಹಾಗೂ ಮಾಹಿತಿ ಕಲೆ ಹಾಕಿ ಪಂಜಾಬ್‌, ಗುಜರಾತ್‌ ಹಾಗೂ ಹರಿಯಾಣ ರಾಜ್ಯಗಳಲ್ಲಿ ದೇಶಿ ಹಸುಗಳ ಸಾಕಾಣಿಕೆ ಬಗ್ಗೆ ಮಾಹಿತಿ ಪಡೆದಿದ್ದರು.

ಸೀಮೆಹಸುಗಳೇ ಜಾಸ್ತಿ: ದೇಶಿ ಹಸುಗಳು ಪ್ರಸ್ತುತ ಜಿಲ್ಲೆಯಲ್ಲಿ ಹುಡುಕಿದರೂ 10 ಹಸು ಸಾಕಾಣಿಕೆ ಮಾಡುತ್ತಿಲ್ಲ. ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಸೀಮೆ ಹಸುಗಳೇ ಹೆಚ್ಚಾಗಿರುವುದರಿಂದನಾಟಿ ಹಸುಗಳ ಸಾಕಾಣಿಕೆ ಬಗ್ಗೆ ರೈತರು ಮನಸ್ಸು ಮಾಡದೇ ಇರುವ ಪರಿಸ್ಥಿತಿಯಲ್ಲಿ ಮಂಚಹಳ್ಳಿ ಗ್ರಾಮದ ಬಡ ಕುಟುಂಬವೊಂದು ಮುಂಚೂಣಿಗೆ ಬಂದಿದೆ.

ಹಾಲು ಬೆಂಗಳೂರಿಗೆ ಸಾಗಣೆ: ಪಂಜಾಬ್‌ ತಳಿ ಸಾಹೀ ವಾಲ್‌ ದೇಶಿ ಇವರ 4 ಹಸುಗಳಿದ್ದು, ನಾಲ್ಕು ಹಸುಗಳು ಹಾಲು ಕೊಡುತ್ತಿದ್ದು, ಪ್ರತಿ ದಿನ ಎರಡು ಹೊತ್ತಿಗೂ ಸೇರಿ 8 ಲೀ.ಹಾಲು ಉತ್ಪಾದನೆಯಾಗುತ್ತಿದೆ. ಈ ಹಾಲಿಗೆ ಯಾವುದೇ ಮಾರುಕಟ್ಟೆ ವ್ಯವಸ್ಥೆ ಇಲ್ಲವಾಗಿದೆ. ಸಾರ್ವಜನಿಕವಾಗಿ ಮಾರಾಟ ಮಾಡಲು ಈ ರೈತರೇ ಸ್ವಂತವಾಗಿ ಮಾಡಿಕೊಳ್ಳಬೇಕಾಗಿದೆ.ಈ ಹಾಲಿನ ಬೆಲೆ ಬೆಂಗಳೂರಿನಲ್ಲಿ 120ರಿಂದ 150 ರೂ.ಗಳಿಗೆ ಮಾರಾಟವಾಗುತ್ತಿದೆ. ರೈತ ಎಂ.ಆರ್‌. ಶ್ರೀರಾಮ್‌ ಐದು ದೇಶಿ ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಇವುಗಳಿಂದ ಉತ್ಪಾದನೆಯಾಗುವ ಹಾಲನ್ನು ಪ್ರತಿ ದಿನ ಬೆಂಗಳೂರಿಗೆ ಸಾಗಣೆ ಮಾಡುತ್ತಿದ್ದಾರೆ. ಜೊತೆಗೆ ಬಂಗಾರಪೇಟೆ ಪಟ್ಟಣದಲ್ಲಿಯೂ ಸಹ ಮಾರಾಟ ಮಾಡುತ್ತಿದ್ದು, ಪ್ರತಿ ದಿನ 16 ರಿಂದ 20 ಲೀ.ಹಾಲು ಮಾರಾಟವಾಗುತ್ತಿದೆ. ಪ್ರತಿ ದಿನ 1500 ರೂ.ಲಾಭ ಸಿಗುತ್ತಿದೆ. ಮುಖ್ಯವಾಗಿ ಇಲ್ಲಿನ ಲಾಭಕ್ಕಿಂತ ದೇಶಿ ಹಸುಗಳ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸುವುದಾಗಿದ್ದು, ಪ್ರಚಾರದ ಕೊರತೆಯಿಂದ ಬೇಡಿಕೆ ಹೆಚ್ಚಾಗುತ್ತಿಲ್ಲ.

Advertisement

ಉತ್ತಮ ಪೌಷ್ಟಿಕಾಂಶ ಹಾಲಿಗೆ ಬೇಕಿದೆ ಸರ್ಕಾರದ ನೆರವು :

ದೇಶಿ ಹಸುಗಳ ಸಾಕಾಣಿಕೆಯಿಂದ ಉತ್ಪಾದನೆಯಾಗುವ ಎ-2 ಹಾಲು ಸ್ಥಳೀಯವಾಗಿ ಉತ್ತಮ ಪೌಷ್ಟಿಕಾಂಶ ಇರುವ ಹಾಲು ಆಗಿದೆ. ಈ ಹಾಲನ್ನು 10 ವರ್ಷದೊಳಗಿನ ಮಕ್ಕಳಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ನೀಡಿದರೆ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ ಎನ್ನುತ್ತಾರೆ. ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ.ಜಗದೀಶ್‌ ಕುಮಾರ್‌. ನಾಟಿ ಹಸುಗಳ ಸಾಕಾಣಿಕೆಗೆ ಸರ್ಕಾರದಿಂದ ಯಾವುದೇ ಸಾಲ ಹಾಗೂ ಗೌರವಧನ ಸೌಲಭ್ಯಗಳಿಲ್ಲ. ಪಶುಪಾಲನಾ ಇಲಾಖೆಯಲ್ಲಿ ಆರೋಗ್ಯ ತಪಾಸಣೆ ಮಾಡಲು ಎಲ್ಲಾ ವ್ಯವಸ್ಥೆಯು ಉಚಿತವಾಗಿ ಮಾಡಲಾಗುತ್ತದೆ. ದೇಶಿ ಹಸುಗಳ ವೀರ್ಯ ನಳಿಕೆಗಳು ಸಿಗುತ್ತದೆ. ಸಾಕಾಣಿಕೆ ಮಾಡಲು ರೈತರಲ್ಲಿ ಆಸಕ್ತಿ ಹೆಚ್ಚಿಸಲು ಸರ್ಕಾರವು ಉತ್ತಮ ಯೋಜನೆ ರೂಪಿಸಿದರೆ ಅನುಕೂಲವಾಗಲಿದೆ.

ಕೋವಿಡ್ ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಇದ್ದಾಗ ಕುಟುಂಬ ಪೋಷಣೆ ಮಾಡಲು ಹಾಗೂ ಜೀವನನಡೆಸಲು ದೇಶಿ ಹಸುಗಳ ಸಾಕಾಣಿಕೆಗೆಮುಂದಾದೆವು. ಆದಾಯ ಸದ್ಯಕ್ಕೆ ಕಡಿಮೆಯಿದ್ದರೂ ಸಹ ಆರೋಗ್ಯವಂತರಾಗಲು ನಾಟಿ ಹಸುಗಳ ಹಾಲು ಉತ್ಪಾದನೆ ಮಾಡುತ್ತಿರುವುದು ತೃಪ್ತಿ ತಂದಿದೆ. ಎಂ.ಆರ್‌.ಶ್ರೀರಾಮ್‌ ಮಂಚಹಳ್ಳಿ ಹೈನೋದ್ಯಮ ರೈತ

 

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next