ಹೊಸದಿಲ್ಲಿ: ದೇಶದ ರಕ್ಷಣ ಪಡೆಗಳಲ್ಲಿ ಈಗ “ಆತ್ಮನಿರ್ಭರತೆ’ ಅಥವಾ ಸ್ವಾವಲಂಬನೆಯ ಕನಸು ನಿಧಾನಕ್ಕೆ ಅನಾವರಣಗೊಳ್ಳುತ್ತಿದೆ. ಅದೇ ಮಾದರಿಯನ್ನು ಪೊಲೀಸ್ ಪಡೆ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳಲ್ಲಿ ಅಳವಡಿಸಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.
ಸದ್ಯ ಪೊಲೀಸ್ ಪಡೆಗಳಲ್ಲಿ ಬಳಸುತ್ತಿರುವ ವಿದೇಶಿ ಶ್ವಾನ ತಳಿಗಳ ಬದಲಾಗಿ ದೇಶಿ ಶ್ವಾನ ತಳಿಗಳಿಗೆ ಪ್ರೋತ್ಸಾಹ ನೀಡಲು ಚಿಂತನೆ ನಡೆದಿದೆ. ಈ ಬಗ್ಗೆ ಶೀಘ್ರವೇ ಆದೇಶ ಹೊರಬೀಳಲಿದೆ.
ಸದ್ಯ ಶ್ವಾನದಳದಲ್ಲಿ ಜರ್ಮನ್ ಶೆಫರ್ಡ್, ಲಾಬ್ರಡಾರ್, ಬೆಲ್ಜಿಯನ್ ಮಲಿನಾಯ್ಸ, ಕಾಕರ್ ಸ್ಪಾನಿಯಲ್ಸ್ ಎಂಬ ವಿದೇಶಿ ತಳಿಗಳನ್ನು ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಮಪುರ, ಹಿಮಾಚಲಿ ಶೆಪರ್ಡ್, ಗಡ್ಡಿ ಮತ್ತು ಬಖರ್ವಾಲ್ ಹಾಗೂ ಟಿಬೆಟಿಯನ್ ಮಸ್ತಿಫ್ ಎಂಬ ಸ್ವದೇಶಿ ತಳಿಗಳನ್ನು ಪೊಲೀಸ್ ಪಡೆಗಳಿಗೆ ನಿಯೋಜನೆ ಮಾಡಲು ಚಿಂತನೆ ನಡೆಸಲಾಗಿದೆ. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಾಗಿರುವ (ಸಿಎಪಿಎಫ್) ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಸಿಐಎಸ್‌ಎಫ್ಗಳಿಗೆ ದೇಸೀ ತಳಿಯ ಶ್ವಾನಗಳು ಸೇರ್ಪಡೆಯಾಗಲಿವೆ.
ಮುಧೋಳ ಪ್ರಯೋಗ ಯಶಸ್ವಿ
ಕರ್ನಾಟಕದ ಹೆಮ್ಮೆಯ ಶ್ವಾನ ತಳಿ “ಮುಧೋಳ’ವನ್ನು ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡ ಲಾಗುತ್ತಿದೆ. ಇದಲ್ಲದೆ ಭಾರತೀಯ ವಾಯುಪಡೆ (ಐಎಎಫ್) ಕೂಡ 2021ರಿಂದ ರಾಜ್ಯದ ತಳಿಯ ಶ್ವಾನಗಳನ್ನು ಗಸ್ತು ಮತ್ತು ಇತರ ರಕ್ಷಣೆಗಾಗಿ ಬಳಸಲಾಗುತ್ತಿದೆ.
ಮಾದಕ ವಸ್ತುಗಳ ಪತ್ತೆ, ಸ್ಫೋಟಕಗಳನ್ನು ಸುಲಭವಾಗಿ ಕಂಡು ಹಿಡಿಯಲು, ಅಪಾಯಕಾರಿ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಶ್ವಾನದಳ ಮಹತ್ವದ ಪಾತ್ರ ವಹಿಸುತ್ತವೆ. ಸಿಎಪಿಎಫ್ಗಳಲ್ಲಿ 4 ಸಾವಿರ ಶ್ವಾನಗಳನ್ನು ಈಗಾಗಲೇ ಬಳಸಲಾಗುತ್ತಿದೆ. ಇದು ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಶ್ವಾನಗಳನ್ನು ಬಳಕೆ ಮಾಡುವ ಪಡೆಯಾಗಿದೆ. ಇದಲ್ಲದೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕೆ9 ಎಂಬ ಅತ್ಯಾಧುನಿಕ ಶ್ವಾನ ತರಬೇತಿ ವ್ಯವಸ್ಥೆ ಹೊಂದಿದೆ.