Advertisement
ಅಂತಾರಾಷ್ಟ್ರೀಯ ಗಡಿಗಳ ಮೇಲಿನ ಕಣ್ಗಾವಲು ಹೆಚ್ಚಿಸಲು ಹಾಗೂ ಭದ್ರತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನದ ಯಶಸ್ವಿ ಬಳಕೆಗೆ ಭಾರತ ಮುಂದಾಗಿದೆ. ಇದರ ಭಾಗವಾಗಿಯೇ, ಸುಧಾರಿತ “ತಪಸ್-ಬಿಎಚ್’ ಡ್ರೋನ್ ಅನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
ಈ ಡ್ರೋನ್ ಈಗಾಗಲೇ 180 ಬಾರಿ ಹಾರಾಟ ನಡೆಸಿದ್ದು, ಬೆಂಗಳೂರಿನಲ್ಲಿ ಸದ್ಯದಲ್ಲೇ ನಡೆಯಲಿರುವ ಏರೋ -ಇಂಡಿಯಾ ಶೋದಲ್ಲಿ ವಿವಿಧ ವಿಮಾನಗಳ ವೈಮಾನಿಕ ಮತ್ತು ಸ್ಥಿರ ಮಾಹಿತಿಯನ್ನು ನೇರ ಪ್ರಸಾರದ ಮೂಲಕ ನೀಡಲಿದೆ. 28 ಸಾವಿರ ಅಡಿ ಎತ್ತರದವರೆಗೆ ಸುಮಾರು 18 ಗಂಟೆಗಳ ಕಾಲ ದೀರ್ಘ ಹಾರಾಟ ಸೇರಿದಂತೆ ತನ್ನೆಲ್ಲ ಸಾಮರ್ಥ್ಯವನ್ನೂ ಅದು ಪ್ರದರ್ಶಿಸಲಿದೆ. ತಪಸ್-ಬಿಎಚ್ ಡ್ರೋನ್ ಅನ್ನು ಈ ಹಿಂದೆ “ರುಸ್ತುಂ-2′ ಎಂದು ಕರೆಯಲಾಗುತ್ತಿತ್ತು. ರಾತ್ರಿ ಹೊತ್ತು ಕಾರ್ಯಾಚರಣೆ ಮಾಡುವ ಸಾಮರ್ಥ್ಯವೂ ಇದಕ್ಕಿದ್ದು, ಮೊದಲಿಗೆ ಸಶಸ್ತ್ರ ಪಡೆಗಳು ಈ ಡ್ರೋನ್‌ಗಳನ್ನು ಪ್ರಾಯೋಗಿಕವಾಗಿ ಸೇನಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಿವೆ. ನಂತರದಲ್ಲಿ, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಈ ಡ್ರೋನ್‌ಗಳನ್ನು ತಯಾರಿಸಲಿವೆ ಎಂದು ಮೂಲಗಳು ತಿಳಿಸಿವೆ.
Related Articles
ಇತ್ತೀಚಿನ ವರ್ಷಗಳವರೆಗೂ ಸುಧಾರಿತ ಡ್ರೋನ್‌ಗಳ ಅಭಿವೃದ್ಧಿಯಲ್ಲಿ ಭಾರತವು ಹಿಂದುಳಿದಿತ್ತು. ಹೆರಾನ್, ಸರ್ಚರ್-2ನಂತಹ ಡ್ರೋನ್‌ಗಳನ್ನು ಭಾರೀ ಸಂಖ್ಯೆಯಲ್ಲಿ ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಪ್ರಸ್ತುತ ವಿದೇಶಿ ಎಂಜಿನ್‌ನಿಂದ ಹಾರಾಟ ನಡೆಸುತ್ತಿರುವ ತಪಸ್-ಬಿಎಚ್ ಡ್ರೋನ್‌ಗೆ 40-45 ಕೋಟಿ ರೂ. ವೆಚ್ಚವಾಗುತ್ತಿದೆ. ಹೀಗಾಗಿ, ದೇಶದಲ್ಲೇ ಅದಕ್ಕೆ ಬೇಕಾದ ಎಂಜಿನ್ ತಯಾರಿಸಲಾಗುತ್ತಿದ್ದು, ಅದರ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದು ಸಾಕಾರಗೊಂಡರೆ, ಕಡಿಮೆ ವೆಚ್ಚದಲ್ಲಿ ದೇಶಕ್ಕೆ ಸುಧಾರಿತ ಡ್ರೋನ್‌ಗಳು ಲಭ್ಯವಾಗಲಿದೆ.
Advertisement
ತಪಸ್- ಬಿಎಚ್ ವೈಶಿಷ್ಟ್ಯ– 28,000 ಅಡಿ ಎತ್ತರದಲ್ಲಿ 18 ಗಂಟೆಗಳ ಅವಧಿಯ ದೀರ್ಘಕಾಲದ ಹಾರಾಟ
– ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ ಕಾರ್ಯಾಚರಣೆಗೆ ಸಹಕಾರಿ
– 20.6 ಮೀ. ವಿಂಗ್ ಸ್ಪಾನ್‌ನೊಂದಿಗೆ ಗಂಟೆಗೆ 225 ಕಿ.ಮೀ. ಕ್ರಮಿಸಬಲ್ಲದು ಶಸ್ತ್ರ ಸಜ್ಜಿತ ಡ್ರೋನ್ ಶೀಘ್ರ ಪರೀಕ್ಷೆ
ರಕ್ಷಣಾ ಕಾರ್ಯಾಚರಣೆಗೆಂದು ದೇಶೀಯವಾಗಿಯೇ ಮತ್ತೂಂದು ಡ್ರೋನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಶಸ್ತ್ರ ಸಜ್ಜಿತ ಡ್ರೋನ್ “ಆರ್ಚರ್-ಎನ್‌ಜಿ’ ಇದೇ ವರ್ಷದ ಜೂನ್ -ಜುಲೈನಲ್ಲಿ ಪರೀಕ್ಷಾರ್ಥ ಹಾರಾಟಕ್ಕೆ ಒಳಪಡಲಿದೆ. ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್‌ಗಳು, ಕ್ಷಿಪಣಿಗಳು ಸೇರಿದಂತೆ 300 ಕೆಜಿವರೆಗಿನ ವಿವಿಧ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಈ ಡ್ರೋನ್‌ಗೆ ಇರಲಿದೆ ಎಂದು ಡಿಆರ್‌ಡಿಒ ತಿಳಿಸಿದೆ.